Advertisement
ಪಕ್ಷದ ಬಗ್ಗೆ ಬಹಿರಂಗ ಹೇಳಿಕೆ ನೀಡಿದವರಿಗೆ ಎಚ್ಚರಿಕೆ ನೀಡಲು ಬಿಜೆಪಿ ರಾಜ್ಯ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ಘಟನೆ ನಡೆದಿದೆ. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಸಂಘಟನ ಕಾರ್ಯದರ್ಶಿ ರಾಜೇಶ್ ಉಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ಭಾಗವಹಿಸಿದ್ದ ಬೊಮ್ಮಾಯಿ ಅವರು ಸಂಸದ ಪ್ರತಾಪ ಸಿಂಹ ವಿರುದ್ದ ಬೇಸರ ವ್ಯಕ್ತಪಡಿಸಿದರು.
ಚುನಾವಣೆ ಫಲಿತಾಂಶಾದ ಬಳಿಕ ನೀವು “ಹೊಂದಾಣಿಕೆ ರಾಜಕಾರಣದ ಬಗ್ಗೆ ಹೇಳಿಕೆ ನೀಡುವ ಅನಿವಾರ್ಯತೆ ಇತ್ತೇ? ಇದರಿಂದ ನಮ್ಮೆಲ್ಲರ ವ್ಯಕ್ತಿತ್ವದ ಮೇಲಾದ ನಕಾರಾತ್ಮಕ ಪರಿಣಾಮದ ಬಗ್ಗೆ ಒಮ್ಮೆಯಾದರೂ ಯೋಚಿಸಿದ್ದೀರಾ ಎಂದು ಬೊಮ್ಮಾಯಿ ಖಾರವಾಗಿ ಪ್ರಶ್ನಿಸಿದರು ಎನ್ನಲಾಗಿದೆ. ಇದಕ್ಕೆ ಅಷ್ಟೇ ಗಟ್ಟಿಯಾಗಿ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ, “ನನ್ನ ಹೇಳಿಕೆಯಲ್ಲಿ ತಪ್ಪೇನಿತ್ತು ? ಪಕ್ಷ ನಿಷ್ಠನಾಗಿ ನಾನು ಪಕ್ಷಕ್ಕೆ ಹಾನಿ ಮಾಡುವ ಹೇಳಿಕೆ ನೀಡಲು ಸಾಧ್ಯವೇ?
ನಾನು ಕಾರ್ಯಕರ್ತರ ಅಭಿಪ್ರಾಯಕ್ಕೆ ಧ್ವನಿಯಾಗಿದ್ದೇನೆ ಎಂದು ತಿರುಗೇಟು ನೀಡಿದರು.
Related Articles
Advertisement
ಮಾತಾಡಬೇಡ ಎಂದರೆ ಮಾತಾಡಲ್ಲ: ಇದಾದ ಬಳಿಕ ಸಭೆಗೆ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ ಪ್ರತಾಪ್ ಸಿಂಹ ತಮ್ಮ ಮಾತುಗಳನ್ನು ಬಲವಾಗಿ ಸಮರ್ಥಿಸಿಕೊಂಡರು ಎಂದು ತಿಳಿದು ಬಂದಿದೆ. ಹೊಂದಾಣಿಕೆ ರಾಜಕಾರಣದ ಬಗ್ಗೆ ಹೇಳಿಕೆ ನೀಡುವ ಮೊದಲು ನಾನು ಬಿಟ್ ಕಾಯಿನ್, ಪಿಎಸ್ ಐ ಹಗರಣದ ಬಗ್ಗೆ ಎಲ್ಲಾ ನೀವು ಮಾತನಾಡುತ್ತಿದ್ದರಲ್ಲ, ಈಗ ನೀವು ತನಿಖೆ ಮಾಡಿಸಿ. ಯಾಕೆ ಸುಮ್ಮನಿದ್ದೀರಿ ? ಹೊಂದಾಣಿಕೆ ರಾಜಕಾರಣವಾ ಎಂದು ಪ್ರಶ್ನಿಸಿದ್ದೆ. ಅದಾಗಿ ಒಂದು ವಾರದ ಬಳಿಕಕಾಂಗ್ರೆಸ್ನವರು ಮತ್ತೆ ತನಿಖೆ ನಡೆಸುತ್ತೇ ವೆಂದು ಹೇಳಿಕೆ ಕೊಟ್ಟರು. ಆದರೆ ನಮ್ಮ ಸರಕಾರ ಇದ್ದಾಗ ಅರ್ಕಾವತಿ ಸಹಿತ ಕೆಲವು ಪ್ರಕರಣಗಳನ್ನು ತನಿಖೆಗೆ ಒಪ್ಪಿಸುತ್ತೇವೆಂದರೂ ಕೊಡಲಿಲ್ಲ. ಈಗ ನೀವು ಅಧಿಕಾರಕ್ಕೆ ಬಂದಿದ್ದೀರಿ. ತನಿಖೆ ನಡೆಸಿಲ್ಲ ಎಂದರೆ ಹೊಂದಾಣಿಕೆ ರಾಜಕಾರಣ ವಾಗುವುದಿಲ್ಲವೇ ಎಂದು ಕಾಂಗ್ರೆಸಿಗರನ್ನು ಪ್ರಶ್ನೆ ಮಾಡಿದ್ದು ತಪ್ಪೇ ಎಂದು ಹಿರಿಯರ ಎದುರು ಪ್ರತಾಪ್ ವಿವರಣೆ ನೀಡಿದರು. ನನ್ನ ಹೇಳಿಕೆಯನ್ನು ನೀವು ತಪ್ಪಾಗಿ ಅರ್ಥೈಸಿಕೊಂಡರೆ ನಾನೇನು ಮಾಡಲು ಸಾಧ್ಯ ? ನಾನು ಇದನ್ನು ಕಾಂಗ್ರೆಸ್‌ನವರಿಗೆ ಪ್ರಶ್ನಿಸಬಾರದಿತ್ತಾ ಎಂದಾಗ, ಪಕ್ಷದ ವೇದಿಕೆಯಲ್ಲಿ ಇದನ್ನೆಲ್ಲ ಹೇಳಬಹುದಿತ್ತು. ಇನ್ನು ಮುಂದೆ ಬಹಿರಂಗವಾಗಿ ಮಾತಾಡಬೇಡಿ ಎಂದು ನಳಿನ್‌ಕುಮಾರ್ ಕಟೀಲು ಸೂಚಿಸಿದಾಗ “ಮಾತಾಡಬೇಡಿ ಅಂದರೆ ಮಾತನಾಡುವುದಿಲ್ಲ” ಎಂದು ಪ್ರತಾಪ್ ಸಿಂಹ ಖಡಕ್ ಆಗಿ ಹೇಳಿದರೆಂದು ತಿಳಿದು ಬಂದಿದೆ.