Advertisement

ಇಂದೂ ಮುಂದುವರಿಯಲಿದೆ ಸಂಪುಟ ಸರ್ಕಸ್: 15 ಶಾಸಕರಿಗೆ ಮಾತ್ರ ಅವಕಾಶ? ಹಿರಿಯರಿಗೆ ಕೊಕ್?

10:50 AM Aug 02, 2021 | Team Udayavani |

ಮಣಿಪಾಲ: ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಆರು ದಿನವಾಗಿದೆ. ಆದರೆ ಸಚಿವ ಸಂಪುಟ ರಚನೆ ಇನ್ನೂ ಮಾಡಲಾಗಿಲ್ಲ. ಪ್ರವಾಹ ಪರಿಸ್ಥಿತಿ, ಏರಿಕೆ ಕಾಣುತ್ತಿರುವ ಕೋವಿಡ್ ಪ್ರಕರಣಗಳ ಕಾರಣದಿಂದ ಸಂಪುಟ ರಚನೆ ಶೀಘ್ರವೇ ಆಗಬೇಕಾದ ಒತ್ತಡವಿದೆ. ಸದ್ಯ ಸಿಎಂ ಬಸವರಾಜ ಬೊಮ್ಮಾಯಿ ಶಾಸಕರ ಪಟ್ಟಿಯನ್ನು ಹಿಡಿದುಕೊಂಡು ದೆಹಲಿಗೆ ತೆರಳಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಬಳಿಕ ಸಚಿವರ ಪಟ್ಟಿ ಅಂತಿಮವಾಗಲಿದೆ ಎನ್ನಲಾಗಿದೆ.

Advertisement

ಸಂಪುಟ ರಚನೆ ಸರ್ಕಸ್ ಇಂದೂ ಮುಂದುವರಿಯಲಿದೆ. ಬುಧವಾರ ಅಥವಾ ಗುರುವಾರ ಪ್ರಮಾಣ ವಚನ ಕಾರ್ಯಕ್ರಮ ನಡೆಯಬಹುದು ಎನ್ನುವುದು ಸದ್ಯದ ಲೆಕ್ಕಾಚಾರ.

ಸದ್ಯ ತುರ್ತಾಗಿ ಸಂಪುಟ ರಚನೆ ಮಾಡಬೇಕಾದ ಒತ್ತಡದಲ್ಲಿರುವ ಸಿಎಂ ಬೊಮ್ಮಾಯಿ ಮೊದಲು 15 ಮಂದಿ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ನಂತರ ಮತ್ತಷ್ಟು ಶಾಸಕರನ್ನು ಸೇರಿಸಿಕೊಳ್ಳುವ ಪ್ಲ್ಯಾನ್ ನಲ್ಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಇಂದೇ ಸಂಪುಟ ಅಂತಿಮ?

ಸಚಿವ ಸ್ಥಾನ ಉಳಿಸಿಕೊಳ್ಳುವ ಮತ್ತು ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿರುವ ಹಲವರು ಈಗಾಗಲೇ ಲಾಬಿ ಆರಂಭಿಸಿದ್ದಾರೆ. ಅರವಿಂದ ಬೆಲ್ಲದ್, ಎಂ.ಪಿ.ಕುಮಾರಸ್ವಾಮಿ ಸೇರಿ ಹಲವರು ಈಗಾಗಲೇ ದೆಹಲಿಗೆ ತೆರಳಿದ್ದಾರೆ. ಅಷ್ಟೇ ಇಲ್ಲದೆ ವಿ.ಸೋಮಣ್ಣ, ಬಿ.ಸಿ.ಪಾಟೀಲ್, ಮುರುಗೇಶ್ ನಿರಾಣಿ, ಶಂಕರ್, ಶಿವನಗೌಡ ಪಾಟೀಲ್ ಮುಂತಾದವರು ರವಿವಾರ ಸಿಎಂ ಬೊಮ್ಮಯಿ ಅವರನ್ನು ಭೇಟಿಯಾಗಿದ್ದಾರೆ.

Advertisement

ಯಾರೆಗೆಲ್ಲಾ ಡಿಸಿಎಂ ಚಾನ್ಸ್?

ಬೊಮ್ಮಾಯಿ ಸರ್ಕಾರದಲ್ಲಿ ಮೂವರನ್ನು ಉಪಮುಖ್ಯಮಂತ್ರಿ ಮಾಡಲಾಗುತ್ತದೆ ಎನ್ನಲಾಗಿದೆ. ಈ ಹಿಂದೆ ಅವಕಾಶದಿಂದ ವಂಚಿತನಾಗಿದ್ದ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ಖಚಿತ ಎನ್ನಲಾಗಿದೆ. ಉಳಿದಂತೆ ಹಿಂದುಳಿದ ವರ್ಗದಲ್ಲಿ ಯುವ ಶಾಸಕರಿಗೆ ಮಣೆ ಹಾಕಲು ಚಿಂತನೆ ನಡೆಸಲಾಗುತ್ತಿದೆ. ವಿಧಾನಸಭೆಯಲ್ಲಿ ಮುಖ್ಯ ಸಚೇತಕರಾಗಿದ್ದ ಕಾರ್ಕಳ ಶಾಸಕ ಸುನೀಲ್ ಕುಮಾರ್ ಗೆ ಹೆಸರು ದೆಹಲಿ ಮಟ್ಟದಲ್ಲಿ ಜೋರಾಗಿ ಕೇಳಿಬರುತ್ತಿದೆ. ಮತ್ತೊಂದು ಸ್ಥಾನಕ್ಕೆ ಆರ್.ಅಶೋಕ್/ ಡಾ. ಅಶ್ವಥನಾರಾಯಣ/ಸಿ.ಟಿ.ರವಿ ಇವರಲ್ಲಿ ಒಬ್ಬರಿಗೆ ಸ್ಥಾನ ಬಹುತೇಕ ಖಚಿತ ಎನ್ನುವ ಮಾತುಗಳಿವೆ. ಗೋವಿಂದ ಕಾರಜೋಳ ಅಥವಾ ಅರವಿಂದ ಲಿಂಬಾವಳಿ ಕೂಡಾ ರೇಸ್ ನಲ್ಲಿದ್ದಾರೆ.

ವಲಸಿಗರ ಕಥೆಯೇನು?

ಸಮ್ಮಿಶ್ರ ಸರ್ಕಾರದ ಸಮಯದಲ್ಲಿ ರಾಜೀನಾಮೆ ನೀಡಿ ಬಿಜೆಪಿ ಸರ್ಕಾರ ರಚನೆಗೆ ಕಾರಣವಾದ ವಲಸೆ ಶಾಸಕರಿಗೆ ಈ ಬಾರಿ ಸಹಜವಾಗಿಯೇ ಆತಂಕ ಎದುರಾಗಿದೆ. ಬಿಎಸ್ ವೈ ಸರ್ಕಾರದ ಸ್ಥಾನ ಸಿಗದ ಮುನಿರತ್ನ ಮತ್ತು ಮಹೇಶ್ ಕುಮಟಳ್ಳಿಗೆ ಈ ಬಾರಿ ಅವಕಾಶ ದೊರೆಯುವ ಸಾಧ್ಯತೆಯಿದೆ. ಅದಲ್ಲದೆ ಕಳೆದ ಬಾರಿ ಸಚಿವರಾಗಿದ್ದ ಸುಧಾಕರ್, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್ ಈ ಬಾರಿಯೂ ಮುಂದುವರಿಯಲ್ಲಿದ್ದಾರೆ ಎನ್ನಲಾಗಿದೆ. ವಲಸಿಗರಲ್ಲಿ ಕೆಲವರನ್ನು ಕೈಬಿಟ್ಟು, ಮತ್ತೆ ಕೆಲವರನ್ನು ಮುಂದಿನ ದಿನಗಳಲ್ಲಿ ಸಂಪುಟಕ್ಕೆ ಸೇರಿಸುವ ಮಾತುಗಳು ಕೇಳಿಬರುತ್ತಿದೆ.

ಯಾರೆಲ್ಲಾ ಹಿರಿಯರಿಗೆ ಕೊಕ್?

ಬಿಎಸ್ ವೈ ಸರ್ಕಾರದಲ್ಲಿ ಸಚಿವರಾಗಿದ್ದ ಜಗದೀಶ್ ಶೆಟ್ಟರ್ ತಾನು ಬೊಮ್ಮಾಯಿ ಸಂಪುಟಕ್ಕೆ ಸೇರುವುದಿಲ್ಲ ಎಂದು ಈಗಾಗಲೇ ಹೇಳಿಕೊಂಡಿದ್ದಾರೆ. ಮತ್ತೊಬ್ಬ ಹಿರಿಯ ಈಶ್ವರಪ್ಪ ಅವರನ್ನೂ ಕೈಬಿಡುವ ಸಾಧ್ಯತೆಯಿದೆ ಎನ್ನಲಾಗಿದೆ. ಉಳಿದಂತೆ ಸುರೇಶ್ ಕುಮಾರ್ ಸೇರಿದಂತೆ 2-3 ಮಂದಿಯನ್ನು ಕೈಬಿಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಯಾರೆಲ್ಲಾ ಹೊಸಬರು ಸೇರ್ಪಡೆ?

ಈ ಬಾರಿ ಕೆಲವು ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯಯಿದೆ. ಕಾರ್ಕಳ ಶಾಸಕ ಸುನೀಲ್ ಕುಮಾರ್, ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ರಾಜಕುಮಾರ್ ಪಾಟೀಲ್ ತೆಲ್ಕೂರ ಈ ರೇಸ್ ನಲ್ಲಿ ಮುಂದಿದ್ದಾರೆ. ಎಂ.ಪಿ.ಕುಮಾರಸ್ವಾಮಿ, ಪಿ.ರಾಜೀವ್, ರಾಜುಗೌಡ ಸುರಪುರ ಕೂಡಾ ಈ ಪಟ್ಟಿಯಲ್ಲಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಬದಲಿಗೆ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರಿಗೂ ಸ್ಥಾನ ಸಿಗುವ ಬಗ್ಗ ಚರ್ಚೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next