Advertisement

ಯಕ್ಷಗಾನ ಬೊಂಬೆಯಾಟ ಪ್ರದರ್ಶನ

03:10 AM Sep 19, 2018 | Karthik A |

ಕಾಸರಗೋಡು: ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಆಶ್ರಯದಲ್ಲಿ ಸೆ.24 ರಿಂದ 28 ರ ತನಕ ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ನಡೆಯುವ ‘ಭಾರತ ಸಾಂಸ್ಕೃತಿಕ ವೈಭವ’ದಲ್ಲಿ ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘಕ್ಕೆ ವಿಶೇಷ ಆಹ್ವಾನ ಲಭಿಸಿದೆ.

Advertisement

ಸಂಘದ ವತಿಯಿಂದ ಸೆ.26 ರಂದು ‘ನರಕಾಸುರ ವಧೆ’ ಯಕ್ಷಗಾನ ಬೊಂಬೆ ಯಾಟ ಪ್ರದರ್ಶನಗೊಳ್ಳಲಿದೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ಸಂಗೀತ, ನೃತ್ಯ ಮತ್ತು ಜಾನಪದ ಕಲೆಗಳನ್ನು ಪ್ರೋತ್ಸಾಹಿಸುವ ಪ್ರತಿಷ್ಠಿತ ಸಂಸ್ಥೆಯಾಗಿದ್ದು ಕೇಂದ್ರ ಸರಕಾರದ ಅಧೀನದಲ್ಲಿ ಕಾರ್ಯಾಚರಿಸುತ್ತಿದೆ. ನಮ್ಮ ದೇಶದ ಉದಾತ್ತ ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿಸುತ್ತಿದೆ. ಇದೇ ವರ್ಷ ಜುಲೈ ತಿಂಗಳಲ್ಲಿ ವೈವಿಧ್ಯಮಯ ಕಲಾಪ್ರಕಾರಗಳ ಪ್ರದರ್ಶನ ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ರಂಗೇರಿತ್ತು.

ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಬೊಂಬೆಯಾಟ ಪ್ರದರ್ಶನ ವಿಭಾಗದಲ್ಲಿ ಈಗಾಗಲೇ ಹಲವು ಬಾರಿ ದೇಶದ ವಿವಿಧೆಡೆಗಳಲ್ಲಿ ಯಕ್ಷಗಾನ ಬೊಂಬೆಯಾಟ ಪ್ರದರ್ಶನ ನೀಡಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ ಜನಮನ ಸೆಳೆದಿದೆ. ಅಕಾಡೆಮಿಯ ಅಧಿಕೃತ ಆಹ್ವಾನಿತರ ಪಟ್ಟಿಯಲ್ಲಿ ಈ ಸಂಘ ಸೇರ್ಪಡೆಗೊಂಡಿದೆ. ದೇಶ ವಿದೇಶಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿರುವ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ.

ಸಂಘದ ನಿರ್ದೇಶಕ ಹಾಗೂ ಬೊಂಬೆ ಯಾಟ ಸೂತ್ರಧಾರಿ ಕೆ.ವಿ. ರಮೇಶ ಅವರ ಸಮರ್ಥ ನಿರ್ದೇಶನದಲ್ಲಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘವು ಪರಂಪರಾಗತ ಕಲೆಯಾದ ಯಕ್ಷಗಾನ ಬೊಂಬೆಯಾಟವನ್ನು ಸಂರಕ್ಷಿಸುವ ಮಹತ್ಕಾರ್ಯವನ್ನು ಕೈಗೊಂಡಿದ್ದು ಕಾಸರಗೋಡಿನ ಪಿಲಿಕುಂಜೆಯಲ್ಲಿ ‘ಯಕ್ಷಪುತ್ಥಳಿ ಬೊಂಬೆಮನೆ’ಯನ್ನು ಸ್ಥಾಪಿಸಿದೆ. ತೆಂಕುತಿಟ್ಟು ಯಕ್ಷಗಾನದ ಕುಲಪತಿ ಕುಂಬಳೆಯ ಪಾರ್ತಿಸುಬ್ಬನ ಪೀಳಿಗೆಯವರಾದ ಕೆ.ವಿ. ರಮೇಶ ಮತ್ತು ಅವರ ತಂಡದ ಸದಸ್ಯರು ಯಕ್ಷಗಾನ ಕಲಾರಾಧನೆಯಲ್ಲಿ ಶ್ರದ್ಧಾ ಭಕ್ತಿಯಿಂದ ತಮ್ಮನ್ನು ತೊಡಗಿಸಿಕೊಂಡು ಬೊಂಬೆಯಾಟ ಕಲೆಯನ್ನು ಉಸಿರಾಗಿಸಿದ್ದಾರೆ. ಸಾವಿರ ಬೊಂಬೆಗಳ ಮ್ಯೂಸಿಯಂ ಕೂಡ ಸಂಘದ ಆಶ್ರಯದಲ್ಲಿ ಅಸ್ತಿತ್ವಕ್ಕೆ ಬರಲಿದ್ದು ವಿಶ್ವದ ಪ್ರಥಮ ಮ್ಯೂಸಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next