ಮುಂಬಯಿ : ನಿರಂತರ ಮೂರನೇ ದಿನವೂ ಖಚಿತವಾದ ಮಾರ್ಗದರ್ಶನ, ಗೊತ್ತುಗುರಿ ಇಲ್ಲದೇ ವ್ಯವಹರಿಸಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 10 ಅಂಕಗಳ ನಷ್ಟದೊಂದಿಗೆ 26,633.13 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿದೆ.
ಇದೇ ರೀತಿಯ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ, 1.75 ಅಂಕಗಳ ನಷ್ಟದೊಂದಿಗೆ 8,190.50 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ರಿಲಯನ್ಸ್, ಐಸಿಐಸಿಐ ಬ್ಯಾಂಕ್, ಮತ್ತು ಸಿಪ್ಲಾ ಶೇ.1ರಿಂದ 2ರಷ್ಟು ಪ್ರಮಾಣದಲ್ಲಿ ಕುಸಿದು ಭಾರೀ ದೊಡ್ಡ ಲೂಸರ್‌ಗಳಾಗಿ ದಾಖಲಾದವು; ಇದಕ್ಕೆ ವ್ಯತಿರಿಕ್ತವಾಗಿ ಭಾರ್ತಿ ಏರ್‌ಟೆಲ್ ಶೇ.4ರ ಏರಿಕೆಯನ್ನು ದಾಖಲಿಸಿತು.
ಇಂದು ವ್ಯವಹಾರಕ್ಕೆ ಒಳಪಟ್ಟ ಶೇರುಗಳ ಪೈಕಿ 1,624 ಶೇರುಗಳ ಮುನ್ನಡೆ ಕಂಡವು; 1,163 ಶೇರುಗಳು ಹಿನ್ನಡೆಗೆ ಗುರಿಯಾದವು.
ಫೆ.1ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು ಅದಕ್ಕೆ ಮುನ್ನ ಹೂಡಿಕೆದಾರರು ಹಾಗೂ ವಹಿವಾಟುದಾರರು ಎಚ್ಚರಿಕೆಯ ನಡೆ ತೋರುತ್ತಿರುವುದೇ ಸೆನ್ಸೆಕ್ಸ್, ನಿಫ್ಟಿಯ ಹಿನ್ನಡೆಗೆ ಕಾರಣವೆಂದು ತಿಳಿಯಲಾಗಿದೆ.