ಮುಂಬಯಿ : ಆರ್‌ಬಿಐ ಬಡ್ಡಿ ದರ ಕಡಿತ ಮಾಡುವುದೆಂಬ ವಿಶ್ವಾಸದಲ್ಲಿ ವಾರದ ಮೊದಲ ದಿನದ ವಹಿವಾಟನ್ನು ಇಂದು ಸೋಮವಾರ ಅತ್ಯುತ್ತಮವಾಗಿ ಆರಂಭಿಸಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 198.76 ಅಂಕಗಳ ಮುನ್ನೆಯನ್ನು ದಾಖಲಿಸುವ ಮೂಲಕ ದಿನದ ವಹಿವಾಟನ್ನು 28,439.28 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ಸೆನ್ಸೆಕ್ಸ್ ತಲುಪಿರುವ ಈ ಎತ್ತರವು ಕಳೆದ ಐದು ತಿಂಗಳಲ್ಲಿ ದಾಖಲಾಗಿರುವ ಗರಿಷ್ಠ ಮಟ್ಟದ್ದಾಗಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 60.10 ಅಂಕಗಳ ಮುನ್ನಡೆಯನ್ನು ದಾಖಲಿಸಿ ದಿನದ ವಹಿವಾಟನ್ನು 8,801.05 ಅಂಕಗಳ ಮಟ್ಟವನ್ನು ತಲುವುವ ಮೂಲಕ ಆಶಾದಾಯಕವಾಗಿ ಕೊನೆಗೊಳಿಸಿತು. ನಿಫ್ಟಿಯ ಈ ಎತ್ತರವು 2016ರ ಸೆಪ್ಟಂಬರ್ 23ರ ಬಳಿಕ ಸಾಧಿತವಾಗಿರುವ ಎತ್ತರವಾಗಿದೆ.
ಆರ್‌ಬಿಐ ತನ್ನ ಮುಂಬರುವ ಫೆಬ್ರವರಿ 2017ರ ಆರ್ಥಿಕ ನೀತಿ ಪರಾಮರ್ಶೆಯಲ್ಲಿ ಶೇ.0.25ರ ಬಡ್ಡಿ ದರ ಕಡಿತವನ್ನು ಮಾಡೀತೆಂಬ ಹಾರೈಕೆಯೇ ಇಂದು ಸೆನ್ಸೆಕ್ಸ್ ಹಾಗೂ ನಿಫ್ಟಿ ಜಿಗಿತಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಇಂದಿನ ವಹಿವಾಟಿನಲ್ಲಿ ಅಂಬುಜಾ ಸಿಮೆಂಟ್ಸ್, ಸನ್ ಫಾರ್ಮಾ, ಎಸಿಸಿ, ಐಸಿಐಸಿಐ ಬ್ಯಾಂಕ್ ಮತ್ತು ಅರಬಿಂದೋ ಪಾರ್ಮಾ ಟಾಪ್ ಗೇನರ್ ಎನಿಸಿಕೊಂಡವು. ಈ ಶೇರುಗಳ ಧಾರಣೆ ಶೇ.3ರಿಂದ ಶೇ.4.5ರಷ್ಟು ಏರಿತು. ಇದೇ ವೇಳೆ ಅದಾನಿ ಪೋರ್ಟ್, ಎಕ್ಸಿಸ್ ಬ್ಯಾಂಕ್ ಮತ್ತು ಬಿಎಚ್‌ಇಎಲ್ ಶೇರುಗಳು ಕೂಡ ಮುನ್ನಡೆ ಸಾಧಿಸಿದವು.
ಆದರೆ ಡಾ.ರೆಡ್ಡಿ, ಸಿಪ್ಲಾ, ಓಎನ್‌ಜಿಸಿ, ಹಿಂಡಾಲ್ಕೊ, ಕೋಲ್ ಇಂಡಿಯಾ ಮತ್ತು ಎಸ್‌ಬಿಐ ಇಂದು ತೀವ್ರ ಒತ್ತಡಕ್ಕೆ ಗುರಿಯಾಗಿ ಹಿನ್ನಡೆ ಕಂಡವು.
ರೇಟ್ ಕಟ್ ಹೋಪ್, ಮುಂಬಯಿ ಶೇರು, 5 ತಿಂಗಳ ಗರಿಷ್ಠ ಮಟ್ಟ, 198 ಅಂಕ ಏರಿಕೆ