ಮುಂಬಯಿ : ಮುಂಬಯಿ ಶೇರು ಪೇಟೆಯಲ್ಲಿಂದು ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ ಮೂರನೇ ದಿನದ ಬಜೆಟ್ ರಾಲಿ ಮುಂದುವರಿಯಿತಾದರೂ ಬೆಳಗ್ಗೆ 11.30ರ ಹೊತ್ತಿಗೆ ಸೆನ್ಸೆಕ್ಸ್ ತನ್ನ ಗಳಿಕೆಯನ್ನು ಬಿಟ್ಟುಕೊಟ್ಟು 29.57 ಅಂಕಗಳ ನಷ್ಟಕ್ಕೆ ಗುರಿಯಾಗಿ 28,197.04 ಅಂಕಗಳ ಮಟ್ಟದಲ್ಲಿ ವ್ಯವಹಾರನಿರತವಾಗಿತ್ತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10.20 ಅಂಕಗಳ ನಷ್ಟಕ್ಕೆ ಗುರಿಯಾಗಿ 8,724.05 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇಂದು ಬಿಎಸ್‌ಇ ಶೇರಿನ ಲಿಸ್ಟಿಂಗ್ ನಡೆದು 806 ರೂ. ಬೆಲೆಯಲ್ಲಿ ಸಾರ್ವಜನಿಕರಿಗೆ ನೀಡಲಾಗಿದ್ದ ಶೇರುಗಳು 1,089 ರೂ.ಗಳ ಬಂಪರ್ ದರದಲ್ಲಿ ವಹಿವಾಟಿಗೆ ಒಳಪಟ್ಟದ್ದು ವಿಶೇಷವಾಗಿತ್ತು. ಬಿಎಸ್‌ಇ ಶೇರುಗಳು ಶೇ.49ರಷ್ಟು ಏರಿಕೆಯನ್ನು ದಾಖಲಿಸಿರುವುದು ಗಮನಾರ್ಹವಾಗಿದೆ.
ಇಂದು ಸನ್ ಟಿವಿ ನೆಟ್‌ವಕ್‌ರ ಶೇರುಗಳು ಶೇ.24.69 ರಷ್ಟು ಏರಿಕೆ 688.10 ರೂ.ಗಳಲ್ಲಿ ವ್ಯವಹಾರಕ್ಕೆ ಒಳಪಟ್ಟದ್ದು ಇನ್ನೊಂದು ವಿಶೇಷವಾಗಿದೆ. ಏರ್‌ಸೆಲ್ ಮ್ಯಾಕ್ಸಿಸ್ ವಹಿವಾಟು ಹಗರಣದಲ್ಲಿ ದಯಾನಿಧಿ ಮಾರನ್ ಮತ್ತು ಅವರ ಸಹೋದರ ಹಾಗೂ ಪ್ರಮೋಟರ್ ಆಗಿರುವ ಕಲಾನಿಧಿ ಮಾರನ್ ಅವರಿಗೆ ಕ್ಲೀನ್ ಚಿಟ್ ದೊರಕಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ.
ಇಂದು ಜಪಾನಿನ ನಿಕ್ಕಿ ಸೂಚ್ಯಂಕ ಶೇ.0.56ರಷ್ಟು ಏರಿತು. ಆದರೆ ಹಾಂಕಾಂಗ್‌ನ ಹ್ಯಾಂಗ್‌ಸೆಂಗ್ ಶೇ.0.74ರಷ್ಟು ಇಳಿಯಿತು.