ಮುಂಬಯಿ : ಶೇರು ಮಾರುಕಟ್ಟೆಗಳಲ್ಲಿನ ಗೂಳಿ – ಕರಡಿ ಆಟವನ್ನು ಹಾವು ಏಣಿ ಆಟಕ್ಕೆ ಹೋಲಿಸಬಹುದಾಗಿದೆ. ಇಂದು ಗುರುವಾರ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 52 ವಾರಗಳ ಹೊಸ ಎತ್ತರವನ್ನು ಕಂಡು ದಾಖಲೆ ರೂಪಿಸಿದ್ದ ಮುಂಬಯಿ ಶೇರು ಪೇಟೆ ದಿನದ ವಹಿವಾಟನ್ನು ಮುಗಿಸುವ ಹೊತ್ತಿಗೆ ಇಂದಿನ ತನ್ನ ಎಲ್ಲ ಗಳಿಕೆಯನ್ನು ಬಿಟ್ಟುಕೊಟ್ಟು 144.70 ಅಂಕಗಳ ನಷ್ಟಕ್ಕೆ ಗುರಿಯಾಗಿ 28,839.79 ಅಂಕಗಳ ಮಟ್ಟಕ್ಕೆ ಇಳಿದು ದಿನದ ವಹಿವಾಟಿಗೆ ತೆರೆ ಎಳೆಯಿತು.
ಇದೇ ರೀತಿಯ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 46.05 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 8,899.75 ಅಂಕಗಳ ಮಟ್ಟಕ್ಕೆ ಇಳಿದು ಸಮಾಪನಗೊಳಿಸಿತು. ಹೂಡಿಕೆದಾರರು ಹಾಗೂ ವಹಿವಾಟುದಾರರು ಲಾಭ ನಗದೀಕರಣಕ್ಕೆ ಮುಂದಾದ್ದೇ ಇಂದಿನ ಕುಸಿತಕ್ಕೆ ಕಾರಣವಾಗಿದೆ.
ಇಂದಿನ ವಹಿವಾಟಿನಲ್ಲಿ ನಿಫ್ಟಿ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ.1.5ರಷ್ಟು ಕುಸಿದದ್ದು ವಿಶೇಷವಾಗಿದೆ. ಧಾರಣೆ ಏರಿಕೆ ಕಂಡ ಪ್ರತೀ ಒಂದು ಶೇರಿಗೆ ಪ್ರತಿಯಾಗಿ ಮೂರು ಶೇರುಗಳು ಕುಸಿದದ್ದು ಒಟ್ಟಾರೆ ಕುಸಿತದಲ್ಲಿ ಪ್ರತಿಫಲಿತವಾಗಿದೆ.
ಇಂದು 361 ಅಂಕಗಳ ಏರಿಳಿತಗಳನ್ನು ಕಂಡ ಮುಂಬಯಿ ಶೇರು ದಿನಾಂತ್ಯಕ್ಕೆ 29,000 ಕ್ಕಿಂತ ಕೆಳಮಟ್ಟಕ್ಕೆ ಜಾರಿತು. ನಿಫ್ಟಿಯಲ್ಲಿ ಟಾಟಾ ಮೋಟರ್, ಅಲ್ಟ್ರಾ ಟೆಕ್ ಸಿಮೆಂಟ್, ಬಜಾಜ್ ಆಟೋ, ಹೀರೋ ಮೋಟೋ ಕಾರ್ಪ್ ಟಾಪ್ ಗೆನರ್ ಎನಿಸಿಕೊಂಡವು; ಇದೇ ವೇಳೆ ಬಿಪಿಸಿಎಲ್, ಐಡಿಯಾ ಸೆಲ್ಯುಲರ್, ಅದಾನಿ ಪೋರ್ಟ್, ಸನ್ ಫಾರ್ಮಾ, ಎನ್‌ಟಿಪಿಸಿ ಶೇರುಗಳು ಟಾಪ್ ಲೂಸರ್ ಎನಿಸಿಕೊಂಡವು.
ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ತೇಜಿ ಕಂಡು ಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 148 ಅಂಕಗಳ ಏರಿಕೆಯನ್ನು ದಾಖಲಿಸಿ 29,000 ಅಂಕಗಳ ಗಡಿಯನ್ನು ದಾಟಿದೆಯಲ್ಲದೆ, 52 ವಾರಗಳ ಹೊಸ ಎತ್ತರವನ್ನು ಕಂಡಿದೆ.
ಇಂದಿನ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 148.46 ಅಂಕಗಳ ಏರಿಕೆಯನ್ನು ಪಡೆದುಕೊಂಡು 29.132.95 ಅಂಕಗಳ ಮಟ್ಟವನ್ನು ತಲುಪಿತ್ತು. ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 43.70 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 8,989.50 ಅಂಕಗಳ ಎತ್ತರದಲ್ಲಿ ಆರಂಭಿಸಿತ್ತು.