ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ತೇಜಿ ಕಂಡು ಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 148 ಅಂಕಗಳ ಏರಿಕೆಯನ್ನು ದಾಖಲಿಸಿ 29,000 ಅಂಕಗಳ ಗಡಿಯನ್ನು ದಾಟಿದೆಯಲ್ಲದೆ, 52 ವಾರಗಳ ಹೊಸ ಎತ್ತರವನ್ನು ಕಂಡಿದೆ.
ಇಂದಿನ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 148.46 ಅಂಕಗಳ ಏರಿಕೆಯನ್ನು ಪಡೆದುಕೊಂಡು 29.132.95 ಅಂಕಗಳ ಮಟ್ಟವನ್ನು ತಲುಪಿತು. ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 43.70 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 8,989.50 ಅಂಕಗಳ ಎತ್ತರದಲ್ಲಿ ಆರಂಭಿಸಿತು.
ನಿನ್ನೆಯ ವಹಿವಾಟನ್ನು ಅಮೆರಿಕ ಶೇರು ಮಾರುಕಟ್ಟೆಯು ಹೊಸ ಎತ್ತರವನ್ನು ಕಂಡು ಮುಗಿಸಿರುವ ಹಿನ್ನೆಲೆಯಲ್ಲಿ ಇಂದು ಗುರುವಾರದ ಆರಂಭಿಕ ವಹಿವಾಟನ್ನು ಏಶ್ಯನ್ ಶೇರು ಮಾರುಕಟ್ಟೆಗಳು ತೇಜಿಯಲ್ಲೇ ಆರಂಭಿಸಿದವು.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿನ್ನೆ ತಮ್ಮ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಕಾರ್ಪೊರೇಟ್ ತೆರಿಗೆ ಕಡಿತ ಮತ್ತು ಇತರ ಕೆಲವು ವಾಣಿಜ್ಯ – ಹಣಕಾಸು ನೀತಿಗಳ ಕುರಿತಾಗಿ ಆಶಾವಾದವನ್ನು ಪುನರುಚ್ಚರಿಸಿರುವುದು ಶೇರು ಮಾರುಕಟ್ಟೆಗಳಿಗೆ ಹೊಸ ಭರವಸೆಯ ಕಿರಣವಾಗಿ ಕಂಡು ಬಂದಿದೆ.
ಹಾಂಕಾಂಗ್‌ನ ಹ್ಯಾಂಗ್‌ಸೆಂಗ್ ಇಂದು ಆರಂಭಿಕ ವಹಿವಾಟಿನಲ್ಲಿ ಶೇ.0.34, ಜಪಾನಿನ ನಿಕ್ಕಿ ಶೇ.1.29, ಶಾಂಘೈ ಕಾಂಪೋಸಿಟ್ ಇಂಡೆಕ್ಸ್ ಶೇ.0.11ರಷ್ಟು ಏರಿರುವುದು ಮುಂಬಯಿ ಶೇರು ಪೇಟೆಗೆ ಉತ್ತೇಜನ ನೀಡಿದೆ.