ಮುಂಬಯಿ: ಬೇಸಗೆ ರಜೆ ಜಾರಿಯಾಗುವ ಮುನ್ನಾದಿನವಾದ ಶುಕ್ರವಾರ ಬಹುತೇಕ ನ್ಯಾಯಾಧೀಶರು ಸಂಜೆ 5ರೊಳಗೆ ಕೆಲಸ ಕಾರ್ಯ ಮುಗಿಸಿ ಹೊರನಡೆದರೆ, ಒಬ್ಬ ನ್ಯಾಯಾಧೀಶರು ಮಾತ್ರ ಕುಳಿತಲ್ಲಿಂದ ಕದಲಿರಲಿಲ್ಲ. ಶುಕ್ರವಾರ ಬೆಳಗ್ಗೆ 10 ಗಂಟೆಗೆ ಕಲಾಪ ಆರಂಭಿಸಿದ್ದ ಅವರು, ಶನಿವಾರ ಬೆಳಗಿನ ಜಾವ 3.30ರವರೆಗೂ ತಮ್ಮ ಮುಂದಿದ್ದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿಯೇ ಸೀಟಿನಿಂದ ಮೇಲೆದ್ದಿದ್ದು.
ಹೌದು, ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶ ಶಾರೂಖ್ ಜೆ. ಕಥವಲ್ಲಾ ಅವರ ಈ ಕಾರ್ಯಕ್ಷಮತೆ ಮತ್ತು ಕರ್ತವ್ಯನಿಷ್ಠೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಬಾಕಿಯಿದ್ದ ತಮ್ಮ ಪಾಲಿನ ಪ್ರಕರಣಗಳ ವಿಚಾರಣೆ ಮುಗಿಸುವ ನಿಟ್ಟಿನಲ್ಲಿ ನ್ಯಾ. ಶಾರೂಖ್ ಅವರು ಒಂದೇ ದಿನ 20 ಗಂಟೆಗಳಿಗೂ ಹೆಚ್ಚು ಕಾಲ ಕಲಾಪ ನಡೆಸಿ, 135ಕ್ಕಿಂತಲೂ ಹೆಚ್ಚು ಕೇಸು ಇತ್ಯರ್ಥಗೊಳಿಸಿ ಹೊಸ ದಾಖಲೆ ಬರೆದಿದ್ದಾರೆ.
ಶುಕ್ರವಾರ ಬೆಳಗ್ಗೆ ನ್ಯಾಯಾಲಯ ಸಂಕೀರ್ಣದ ತಮ್ಮ 20ನೇ ಹಾಲ್‌ನಲ್ಲಿ ವಿಚಾರಣೆಯನ್ನು ಆರಂಭಿಸಿದ ಅವರು, ಶನಿವಾರ ಬೆಳಗಿನ ಜಾವ 3:30ರವರೆಗೂ ನ್ಯಾಯಾಲಯ ಕಲಾಪ ನಡೆಸಿದ್ದರು. ಒಂದಾದ ನಂತರ ಒಂದರಂತೆ ಅವರು ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳುತ್ತಿದ್ದರೆ, ಕೋರ್ಟ್ ಹಾಲ್‌ನಲ್ಲಿ ಕುಳಿತ ಕೆಲವು ವಕೀಲರು, ಅರ್ಜಿದಾರರು ಕೂಡ ಏಳಲು ಮನಸ್ಸು ಮಾಡಲಿಲ್ಲ. 3.30ಕ್ಕೆ ನ್ಯಾಯಾಧೀಶರು ತಮ್ಮ ಸೀಟಿನಿಂದ ಎದ್ದಾಗಲೇ ಉಳಿದವರೂ ಎದ್ದು ನಿಂತರು. 2 ವಾರಗಳ ಹಿಂದೆಯೂ ನ್ಯಾ. ಶಾರೂಖ್ ಅವರು ಮಧ್ಯರಾತ್ರಿಯವರೆಗೂ ಕಲಾಪ ನಡೆಸಿದ್ದರು ಎಂದು ನ್ಯಾಯಾಲಯದ ಸಿಬ್ಬಂದಿ ತಿಳಿಸಿದ್ದಾರೆ.
ಮೇ 5ರಿಂದ ನ್ಯಾಯಾಲಯ ಕಲಾಪಗಳಿಗೆ ಬೇಸಿಗೆ ರಜೆ ಜಾರಿಗೊಳ್ಳಲಿರುವುದರಿಂದ, ಮೇ 4ರ ಶುಕ್ರವಾರದಂದೇ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಅವರು ನಿರ್ಧರಿಸಿದ್ದರು ಎಂದು ಹಿರಿಯ ವಕೀಲ ರೊಬ್ಬರು ತಿಳಿಸಿದ್ದಾರೆ. ಅಲ್ಲದೆ, ಇತರೆಲ್ಲ ಜಡ್ಜ್ಗಳೂ ಬೆಳಗ್ಗೆ 11ಕ್ಕೆ ಕೋರ್ಟ್ ಕಲಾಪ ಶುರು ಮಾಡಿದರೆ, ನ್ಯಾ.ಶಾರೂಖ್ ಅವರು ಮಾತ್ರ ಪ್ರತಿದಿನ 10 ಗಂಟೆಗೇ ವಿಚಾರಣಾ ಪ್ರಕ್ರಿಯೆ ಆರಂಭಿ ಸುತ್ತಾರೆ ಎಂದೂ ಇವರು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ವಕೀಲ ಪ್ರವೀಣ್ ಸಮಾªನಿ, “”ಶನಿವಾರ ಮುಂಜಾನೆ, ನ್ಯಾ. ಶಾರೂಖ್ ನಡೆಸಿದ ಕೊನೆಯ ಪ್ರಕರಣ ನನ್ನ ಕಕ್ಷಿದಾರರ ದ್ದಾಗಿತ್ತು.
ಶುಕ್ರವಾರ ಬೆಳಗ್ಗೆಯಿಂದಲೂ ಕೇಸುಗಳ ಮೇಲೆ ಕೇಸು ಇತ್ಯರ್ಥ ಗೊಳಿಸಿದ್ದರೂ, ಕೊನೆಯ ಕೇಸಿನ ಬಗ್ಗೆ ಆಲಸ್ಯ ತೋರಲಿಲ್ಲ. ಶಾಂತ ಚಿತ್ತರಾಗಿ, ಕೂಲಂಕಶವಾಗಿ ವಿಚಾರಣೆ ನಡೆಸಿ, ಸೂಕ್ತ ತೀರ್ಮಾನ ಪ್ರಕಟಿಸಿದರು” ಎಂದರು.