ಮುಂಬೈ: ಕೇಂದ್ರ ಸಚಿವ ನಾರಾಯಣ್ ರಾಣೆ ಅವರ “ಅಧೀಶ್” ಬಂಗಲೆ ಅಕ್ರಮ ಕಟ್ಟಡ ಎಂದು ಬಾಂಬೆ ಹೈಕೋರ್ಟ್ ಮಂಗಳವಾರ (ಸೆಪ್ಟೆಂಬರ್ 20) ಆದೇಶ ನೀಡಿದ್ದು, ಎರಡು ವಾರದೊಳಗೆ ಬಂಗಲೆಯನ್ನು ಧ್ವಂಸಗೊಳಿಸಬೇಕೆಂದು ಮುಂಬಯಿ ಮಹಾನಗರ ಪಾಲಿಕೆಗೆ ನಿರ್ದೇಶನ ನೀಡಿದೆ.
ಇದನ್ನೂ ಓದಿ:ಕಂಚಿವರದರಾಜಸ್ವಾಮಿ ಜಾತ್ರೆ; ಇಲ್ಲಿ ದೇವರ ಮೇಲೆ ಹಣ ತೂರುವುದೇ ಹರಕೆ
ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ರಾಣೆಗೆ ಹತ್ತು ಲಕ್ಷ ರೂಪಾಯಿ ದಂಡ ವಿಧಿಸಿದೆ. ನಾರಾಯಣ ರಾಣೆ ಬಂಗಲೆಗೆ ಸಂಬಂಧಿಸಿದಂತೆ ಎಫ್ ಎಸ್ ಐ(ಮಹಡಿ ಸ್ಥಳದ ಸೂಚ್ಯಂಕ) ಮತ್ತು ಸಿಆರ್ ಝಡ್ (ಕರಾವಳಿ ನಿಯಂತ್ರಣ ವಲಯ) ನಿಯಮ ಉಲ್ಲಂಘಿಸಿರುವುದಾಗಿ ತಿಳಿಸಿದೆ.
ಈ ಬಂಗಲೆ ನಿರ್ಮಾಣಕ್ಕೆ ಸಂಬಂಧಿಸಿದ ಅರ್ಜಿಯನ್ನು ಮಹಾನಗರ ಪಾಲಿಕೆ ಪರಿಗಣಿಸುವಂತಿಲ್ಲ ಎಂದು ಹೈಕೋರ್ಟ್ ಹೇಳಿದೆ. ಮುಂಬೈನ ಜುಹೂ ಬೀಚ್ ಸಮೀಪ ರಾಣೆ ಅವರ ಬಂಗಲೆ ಇದ್ದಿರುವುದಾಗಿ ವರದಿ ವಿವರಿಸಿದೆ.
ರಾಣೆ ಅಕ್ರಮವಾಗಿ ಬಂಗಲೆ ನಿರ್ಮಾಣ ಮಾಡಿರುವುದಾಗಿ ಆರೋಪಿಸಿ ಸಂತೋಷ್ ದೌಂಡ್ಕರ್ ದೂರು ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆ ನಾರಾಯಣ ರಾಣೆಗೆ ನೋಟಿಸ್ ಜಾರಿಗೊಳಿಸಿತ್ತು. ಬಿಜೆಪಿ ಮತ್ತು ಶಿವಸೇನಾ ನಡುವೆ ಬಿಕ್ಕಟ್ಟು ಸಂಭವಿಸಿದ ವೇಳೆಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಬಂಗಲೆಯನ್ನು ಪರಿಶೀಲಿಸಿ ವರದಿ ನೀಡಿರುವುದಾಗಿ ವರದಿ ತಿಳಿಸಿದೆ.