ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿರುವುದಾಗಿ ಬುಧವಾರ ಹುಸಿ ಕರೆ ಮಾಡಿದ್ದ ವ್ಯಕ್ತಿಯನ್ನು ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಮುದ್ರಾಡಿಯ ವಸಂತ (33) ಎಂದು ಗುರುತಿಸಲಾಗಿದ್ದು, ಪೊಲೀಸರು ಬಂಧಿಸಿ ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆತನನ್ನು ಕೋವಿಡ್ ಸೋಂಕು ಪರೀಕ್ಷೆ ನಡೆಸಬೇಕಾಗಿರುವುದರಿಂದ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಪರೀಕ್ಷಾ ವರದಿ ನೆಗೆಟಿವ್ ಬಂದರೆ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆಯಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ತಿಳಿಸಿರೆ.
ಬುಧವಾರ ಮಧ್ಯಾಹ್ನ ವಿಮಾನ ನಿಲ್ದಾಣದ ನಿವೃತ್ತ ನಿರ್ದೇಶಕ ಎಂ. ಆರ್. ವಾಸುದೇವ ಅವರಿಗೆ ಕರೆ ಮಾಡಿ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಆರೋಪಿ ವಸಂತ ಮೊದಲು ಎರಡು ಬಾರಿ ಎಸ್‌ಎಂಎಸ್ ಕಳುಹಿಸಿ ಬಳಿಕ ಬೆದರಿಕೆ ಕರೆ ಮಾಡಿದ್ದ. ವಾಸುದೇವ ಅವರು ತತ್‌ಕ್ಷಣ ನಿಲ್ದಾಣದ ನಿರ್ದೇಶಕರಿಗೆ ಮತ್ತು ಪೊಲೀಸ್ ಆಯುಕ್ತರಿಗೆ ಮಾಹಿತಿ ನೀಡಿದ್ದರು. ತಪಾಸಣೆ ಬಳಿಕ ಅದು ಹುಸಿ ಬಾಂಬ್ ಕರೆ ಎಂದು ಗೊತ್ತಾಗಿತ್ತು.
ತತ್‌ಕ್ಷಣ ಕಾರ್ಯ ಪ್ರವೃತ್ತರಾದ ಮಂಗಳೂರು ಪೊಲೀಸರು ಉಡುಪಿ ಪೊಲೀಸರ ಸಹಕಾರದಿಂದ ಕರೆ ಬಂದ ನಾಲ್ಕೇ ತಾಸುಗಳಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದರು. ಬಳಿಕ ತಡರಾತ್ರಿ ಬಂಧಿಸಿದ್ದರು. ವಿಮಾನ ನಿಲ್ದಾಣದ ನಿರ್ದೇಶಕ ವಿ.ವಿ. ರಾವ್ ಅವರು ನೀಡಿದ ದೂರಿನನ್ವಯ ಬಜಪೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 505ಬಿ, 507 ಹಾಗೂ ನಾಗರಿಕ ವಿಮಾನ ಯಾನ ಸುರಕ್ಷತೆಗೆ ವಿರುದ್ಧವಾದ ಕಾನೂನು ಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ 1962 ರ ಸೆಕ್ಷನ್ 3 (1) (ಡಿ) ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಆರೋಪಿ ಕೃಷಿ ಕಾರ್ಮಿಕ
ಆರೋಪಿ ವಸಂತನು ಮುದ್ರಾಡಿಯ ನಿವಾಸಿಯಾಗಿದ್ದು, ಕೃಷಿ ಕಾರ್ಮಿಕ ಎಂಬ ಮಾಹಿತಿ ಲಭ್ಯವಾಗಿದೆ. ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ.