ಮುಂಬಯಿ : ‘ಬಾಂಬೆ ಹೈಕೋರ್ಟ್ ಒಳಗಡೆ ಬಾಂಬ್ ಅವಿತಿರಿಸಲಾಗಿದೆ’ ಎಂದು ಎಚ್ಚರಿಸುವ ಅನಾಮಧೇಯ ಕರೆಯೊಂದು ಇಂದು ಬುಧವಾರ ಬೆಳಗ್ಗೆ ಸುಮಾರು 10.54ರ ಹೊತ್ತಿಗೆ ಪೊಲೀಸ್ ಕಂಟ್ರೋಲ್ ರೂಮಿಗೆ ಬಂದುದನ್ನು ಅನುಸರಿಸಿ ನ್ಯಾಯಾಲಯದಲ್ಲಿ ಕೆಲ ಹೊತ್ತು ಕಟ್ಟೆಚ್ಚರದ ಸ್ಥಿತಿ ನಿರ್ಮಾಣವಾಯಿತು.
ಆದರೆ ಕೂಲಂಕಷ ತಪಾಸಣೆಯ ಬಳಿಕ ಇದೊಂದು ಹುಸಿ ಕರೆ ಎಂಬುದು ಖಾತರಿಯಾದಾಗ ಹೈಕೋರ್ಟ್ ಒಳಗಿದ್ದವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.
ಚೀಫ್ ಜಸ್ಟಿಸ್ ಮಂಜುಳಾ ಚೆಲ್ಲೂರ್ ಅವರ ಸಿಬಂದಿಗಳ ಕಾರ್ಯಾಲಯವಿರುವ ರೂಮ್ ನಂಬರ್ 51ರಲ್ಲಿ ಬಾಂಬ್ ಇಡಲಾಗಿದೆ ಎಂಬ ಅನಾಮಧೇಯ ಕರೆ ಬೆಳಗ್ಗೆ 10.54ರ ಹೊತ್ತಿಗೆ ಪೊಲೀಸ್ ಕಂಟ್ರೋಲ್ ರೂಮಿಗೆ ಬಂದೊಡನೆಯೇ ಪೊಲೀಸರು ಹೈಕೋರ್ಟ್ ಒಳ-ಹೊರಗೆ ಕಟ್ಟೆಚ್ಚರ ಘೋಷಿಸಿ ವ್ಯಾಪಕ ತಪಾಸಣೆ ಕೈಗೊಂಡರು.
ಬಾಂಬ್ ವಿಲೇವಾರಿ ಪರಿಣತರನ್ನು ಕೂಡ ಸ್ಥಳಕ್ಕೆ ಕರೆಸಿಕೊಂಡು ಇಡಿಯ ಕೋರ್ಟ್ ಆವರಣದದಲ್ಲಿ ಶೋಧ ಕಾರ್ಯ ನಡೆಸಲಾಯಿತು. ಆದರೆ ಎಲ್ಲೂ ಬಾಂಬ್ ಪತ್ತೆಯಾಗಲಿಲ್ಲ. ಹಾಗಾಗಿ ಅದೊಂದು ಹುಸಿ ಕರೆ ಎಂಬುದು ಖಾತರಿಯಾಯಿತು ಎಂದು ವಲಯ 1ರ ಪೊಲೀಸ್ ಉಪ ಆಯುಕ್ತ ಮನೋಜ್ ಕುಮಾರ್ ತಿಳಿಸಿದರು.
ಬಾಂಬ್ ಬಗೆಗಿನ ಅನಾಮಧೇಯ ಕರೆ ಬಂದುದೆಲ್ಲಿಂದ, ಆ ವ್ಯಕ್ತಿ ಯಾರಿರಬಹುದು ಎಂಬ ಬಗ್ಗೆ ಪೊಲೀಸರೀಗ ತನಿಖೆ ಕೈಗೊಂಡಿದ್ದಾರೆ.