Advertisement

ಮಡಿಲಲ್ಲಿ ಕಟ್ಟಿಕೊಂಡ ಬಾಂಬ್‌ ಕ್ವಿಕ್‌ ಫಾಸ್‌

10:50 PM Sep 08, 2019 | sudhir |

ಬೆಂಗಳೂರಿನಲ್ಲಿ ಡಿನ್ನರ್‌ ಮುಗಿಸಿ ಬಂದ ಮೂವರು ಮಾಳಿಗೆಯಲ್ಲಿರುವ ತಮ್ಮ ಕೋಣೆ ಪ್ರವೇಶಿಸಿದರು. ಏನೋ ವಾಸನೆ. ಬಂದ ಕೆಲವೇ ನಿಮಿಷಗಳಲ್ಲಿ ವಾಂತಿ ಮಾಡತೊಡಗಿದರು. ಡಿನ್ನರ್‌ ಪಾರ್ಟಿಯ ನಶೆ ಅವರನ್ನು ಹೆಚ್ಚು ಚಿಂತಿಸಲು ಬಿಡದೆ ನಿದ್ರಿಸುವಂತೆ ಮಾಡಿತು. ಮರುದಿನ ಎದ್ದಾಗ ತೀವ್ರ ಅಸ್ವಸ್ಥಗೊಂಡ ಅವರನ್ನು ಅಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಓರ್ವ, ಇನ್ನೋರ್ವ ಆಸ್ಪತ್ರೆಯಲ್ಲಿ, ಮತ್ತೋರ್ವ ಎರಡು ದಿನಗಳು ಕಳೆದು ಸಾವನಪ್ಪಿದರು.

Advertisement

ಅಡಿಕೆ ಸಂರಕ್ಷಿಸಲು ಗೋಣಿಯಲ್ಲಿ ಅಡಿಕೆ ತುಂಬಿಸಿ “ಸಂರಕ್ಷಕ ಮಾತ್ರೆ’ ಹಾಕಿಟ್ಟು ಅದೇ ಕೋಣೆಯಲ್ಲಿ ನಿದ್ರಿಸುತ್ತಾನೆ ಓರ್ವ ಕೃಷಿಕ. ವರ್ಷವೊಂದರಲ್ಲಿ ಶ್ವಾಸಕೋಶ‌ದ ಕ್ಯಾನ್ಸರ್‌ಗೆ ತುತ್ತಾಗುತ್ತಾನೆ‌.
ಮೇಲಿನ ಎರಡೂ ಪ್ರಕರಣಗಳಲ್ಲಿ ಖಳ ನಾಯಕನಾಗಿ ಬಂದುದು ಧಾನ್ಯ ಸಂರಕ್ಷಣೆಗಾಗಿ ಉಪಯೋಗಿಸುವ “ಸಂರಕ್ಷಕ ಮಾತ್ರೆ’ ಕ್ವಿಕ್‌ ಫಾಸ್‌, ಅಂದರೆ ಅಲ್ಯುಮಿನಿಯಂ ಫಾಸ್‌ಫೈಡ್‌. ಇನ್ನೂ ಸುಲಭದ ಹೆಸರು ಇಲಿ ಪಾಷಾಣ.

ಅಡಿಕೆ ಒಣಗಿದೊಡನೆ ಮಾರುವುದಿದ್ದರೆ ಹೊಸ ಅಡಿಕೆ ಎಂದು ಇದರ ಬೆಲೆ ಕಡಿಮೆ. ಅಡಿಕೆಯನ್ನು ಒಂದು ವಷ‌ì ದಾಸ್ತಾನಿರಿಸಿ ಹಳೆ ಅಡಿಕೆ ಮಾಡಿಕೊಡುವುದಾದರೆ ಕಿಲೋ ಒಂದಕ್ಕೆ ಅಂದಾಜು ರೂ. 80ಕ್ಕೂ ಹೆಚ್ಚು ಸಿಗುತ್ತದೆ. ಆದರೆ ಸರಿಯಾಗಿ ಒಣಗಿಸಿ ದಾಸ್ತಾನಿರಿಸಿದರೆ ಸರಿ. ಇಲ್ಲವಾದರೆ ಕೀಟದ ಬಾಧೆಗೊಳಗಾಗಿ ಅಡಿಕೆ ತೂತು ಬೀಳುತ್ತದೆ. ವ್ಯಾಪಾರಿ ಭಾಷೆಯಲ್ಲಿ ಡಂಕಿಯಾದ ಅಡಿಕೆ. ಇದು ತೂಕದಲ್ಲಿಯೂ, ಗುಣಮಟ್ಟದಲ್ಲೂ ಕಳಪೆಯಾಗಿ ರುತ್ತದೆ. ಬೆಲೆಯೂ ಕಡಿಮೆ. ಇದಕ್ಕಾಗಿ ಅಡಿಕೆಯನ್ನು ಸಂರಕ್ಷಿಸಲು ಕಂಡುಕೊಂಡ ವಿಧಾನ ಕ್ವಿಕ್‌ ಫಾಸ್‌ ಮಾತ್ರೆ ಹಾಕಿರಿಸುವುದು.

ಇದೊಂದು ಸಾಮಾನ್ಯ ಕೀಟ ನಾಶಕ ಎನ್ನುತ್ತಾರೆ ಇದರ ವ್ಯಾಪಾರಸ್ಥರು. ಆದರೆ ಇದು ಅಸಾಮಾನ್ಯ ವಿಷ. ಮಡಿಲಲ್ಲಿ ಕಟ್ಟಿಕೊಂಡ ವಿಷಾನಿಲ ಬಾಂಬ್‌. ಸೈಲೆಂಟ್‌ ಕಿಲ್ಲರ್‌. ಇದನ್ನು ತೀವ್ರ ಗತಿಯಲ್ಲಿ ಉಸಿರಾಡಿದವರು ಒಂದೇ ಗಂಟೆಯಲ್ಲಿ ಸಾವನ್ನಪ್ಪುತ್ತಾರೆ. ಮೇಲೆ ತಿಳಿಸಿದ ಉದಾಹರಣೆಯಲ್ಲಿ ಆ ಬಡವಾಣೆಯಲ್ಲಿ ಇವರು ವಾಸ್ತವ್ಯವಿದ್ದ ಮಾಳಿಗೆಯ ಕೋಣೆಯ ಕೆಳಭಾಗದ ಕೋಣೆಯ ವ್ಯಕ್ತಿ ತಿಗಣೆ ಕಾಟಕ್ಕಾಗಿ ಕೋಣೆಯೊಳಗೆ ಹಲವಾರು ಕ್ವಿಕ್‌ಫಾಸ್‌ ಮಾತ್ರೆಯಿರಿಸಿ ಕೋಣೆಯ ಬಾಗಿಲನ್ನು ಮುಚ್ಚಿ ಹೋಗಿದ್ದ. ವಿಷಾನಿಲ ಸೀಲಿಂಗ್‌ ಮತ್ತು ಕಿಟಿಕಿಯ ಮೂಲಕ ಮೇಲೆ ಬಂದು ಇವರ ಕೋಣೆಯನ್ನು ಆವರಿಸಿತ್ತು. ಇದರದೇ ವಾಸನೆ ಎಂದು ದೃಢೀಕರಿಸಲಾಗಿತ್ತು. ಇವರ ಮೃತ ದೇಹ ಮತ್ತು ಜೊಲ್ಲು ರಸದ ಪರೀಕ್ಷೆಯಲ್ಲಿ ಕ್ವಿಕ್‌ ಫಾಸ್‌ ವಿಷದಂಶ ಪತ್ತೆಯಾಗಿತ್ತು. ಇವರ ಜೊತೆಗೆ ಡಿನ್ನರ್‌ ಪಾರ್ಟಿ ಮುಗಿಸಿ ಬಂದ ಇನ್ನೋರ್ವ ಮಿತ್ರ ಬೇರೆ ಕೋಣೆಯಲ್ಲಿ ಮಲಗಿದ್ದರಿಂದ ಸಾವಿನಿಂದ ಬಚಾವಾಗಿದ್ದ.

ಅಲ್ಯುಮಿನಿಯಂ ಫಾಸ್‌ಫೈಡ್‌ ಮಾರುಕಟ್ಟೆಯಲ್ಲಿ ನಾನಾ ಹೆಸರಿನಲ್ಲಿ ದೊರಕುತ್ತದೆ. ಕ್ವಿಕ್‌ ಫಾಸ್‌, ಸಲ್‌ಫಾಸ್‌, ಪಾಷಾಣ ಇತ್ಯಾದಿ ಹೆಸರುಗಳು. ಪಟ್ಟಣಗಳ ರಸ್ತೆ ಬದಿಗಳಲ್ಲಿ ಈ ಮಾತ್ರೆಗಳನ್ನು ಮಾರುವವರಿದ್ದಾರೆ. ಬಡಾವಣೆಗಳಲ್ಲಿ ತಿಂಗಳಿಗೊಮ್ಮೆ ಈ ಮಾತ್ರೆ ಮಾರುತ್ತಾ ಬರುವವರಿದ್ದಾರೆ.

Advertisement

ಸುಲಭದಲ್ಲಿ ಮಾತುಗಳಿಂದ ಮಂತ್ರಮುಗ್ಧ‌ªಗೊಳಿಸಿ ತಿಗಣೆಗಳಿಗೆ ಇವರು ಈ ಔಷಧ ನೀಡುತ್ತಾರೆ. ಸ್ವಲ್ಪ ಮಟ್ಟಿಗೆ ಕೊಳೆತ ಬೆಳ್ಳುಳ್ಳಿಯ ವಾಸನೆ ಬರುತ್ತದೆ ಅಷ್ಟೇ ಎನ್ನುತ್ತಾರೆ. ಮಾರಾಟ ಮಾಡುವವನಿಗೂ ಇದರ ಪರಿಣಾಮ ಗೊತ್ತಿರುವುದಿಲ್ಲ. ಅರಿಯದೆ ಅದೆಷ್ಟೋ ಮಂದಿ ಈ ವಿಷಾನಿಲದ ಘಾತಕ್ಕೆ ಒಳಗಾಗುತ್ತಿದ್ದಾರೆ. ಕೆಲವೆಡೆ ಬಸ್‌ಗಳಲ್ಲಿ ತಿಗಣೆ ಕಾಟದಿಂದ ಮುಕ್ತಿ ಪಡೆಯಲು ಇದನ್ನು ಉಪಯೋಗಿ ಸುತ್ತಾರಂತೆ.

ಮೂಷಕಗಳಿಗಾಗಿ ಇಲಿ ಪಾಷಾಣ, ಕೇಕ್‌, ಕ್ರೀಮ್‌ನಂತಹ ನಾನಾ ರೂಪದಲ್ಲಿ ಈ ಅಲ್ಯುಮಿನಿಯಂ ಫಾಸ್‌ಫೈಡ್‌ನ‌ ವಿಷಗಳು ಮಾರ್ಕೆಟ್‌ನಲ್ಲಿ ದೊರಕುತ್ತಿವೆ. ಇದನ್ನು ಎಣ್ಣೆ ತಿಂಡಿಗಳಲ್ಲಿ ಬೆರೆಸಿಟ್ಟಾಗ ಅದನ್ನು ತಿಂದ ಇಲಿ ಹೆಗ್ಗಣ ಇತ್ಯಾದಿಗಳು ಸಾಯುತ್ತವೆ. ಇದನ್ನು ನಾಯಿ ಬೆಕ್ಕುಗಳು ಕೂಡ ತಪ್ಪಿ ತಿಂದರೆ ಸಾವು ಖಂಡಿತ. ನಾಯಿ ಸ್ವಲ್ಪ ರುಚಿ ನೋಡಿದರೂ ಸಾಕು ಆಗ ಸಾಯುವುದಿಲ್ಲ. ಆಹಾರ ಸಂಪೂರ್ಣ ತ್ಯಜಿಸಿ ನೀರನ್ನು ಕುಡಿದು ಕೃಷವಾಗಿ ಕೆಲವೇ ದಿನಗಳಲ್ಲಿ ಸಾವನ್ನಪ್ಪುತ್ತದೆ. ಆಯುರ್ವೇದ ಗ್ರಂಥಗಳ ಪುಟಗಳನ್ನು ಮೊಗಚಿದರೆ ಅಡಿಕೆಯ ಹಲವಾರು ಔಷಧೀಯ ಗುಣಗಳು ನಿಮ್ಮೆದುರಿಗೆ ಬರುತ್ತವೆ. ವೇದಗಳ ಮತ್ತು ಪುರಾಣಗಳ ಕಾಲದಲ್ಲಿ ಅಡಿಕೆಯ ಉಪಯೋಗದ ಬಗ್ಗೆ ಸಾಕಷ್ಟು ಮಾಹಿತಿಗಳಿತ್ತು. ಈಗ ಅಡಿಕೆಯನ್ನು ಮೆಲ್ಲುವುದು ಕ್ಯಾನ್ಸರ್‌ಕಾರಕ ಎಂದು ಗುಲ್ಲೆಬ್ಬಿಸುತ್ತಿದ್ದಾರೆ. ಇದಕ್ಕೆ ಕಾರಣ ವಿಶ್ಲೇಷಿಸಿದರೆ ಖಳನಾಯಕನಾಗಿ ಕಾಣಿಕೊಳ್ಳುವುದು ಈ ವಿಷದ ಮಾತ್ರೆ.

ಅಲ್ಯುಮಿನಿಯಂ ಫಾಸ್‌ಫೈಡ್‌ ಕೆಂಪು ರಂಜಕ ಮತ್ತು ಅಲ್ಯುಮೀನಿಯಂನ್ನು ಉರಿಸಿ ತಯಾರಿಸುತ್ತಾರೆ. ಅಲ್ಯುಮಿನಿಯಂ ಫಾಸ್‌ಫೈಡ್‌ ಗಾಳಿಯಲ್ಲಿರುವ ನೀರಿನಂಶ ದೊರೆತೊಡನೆ ಕರಗಿ ಫಾಸಿ#àನ್‌ ವಿಷ ಗಾಳಿಯಾಗಿ ಹೊರ ಬರುತ್ತದೆ. ಮಾತ್ರೆ ಕಾಣೆಯಾಗುತ್ತದೆ. ಅಥವಾ ಅಲ್ಪ ಪ್ರಮಾಣದ ಹುಡಿ ಉಳಿದಿರುತ್ತದೆ. ಫಾಸಿ#àನ್‌ ನೇರವಾಗಿ ಜೀವಿಯ ಉಸಿರಾಟ ಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಈ ವಿಷ ಗಾಳಿ ಸೇವಿಸಿದ ಮೂಷಕಗಳು,ತಿಗಣೆ, ಹುಳ,ಹುಪ್ಪಟೆಗಳು ಮರಣವನ್ನಪ್ಪುತ್ತವೆ. ಮನುಷ್ಯರು ಈ ಗಾಳಿ ಸೇವಿಸಿದವರಿಗೆ ಶ್ವಾಸನಾಳದಲ್ಲಿ ಕೆರೆತ, ಕೆಮ್ಮು, ತಲೆಸುತ್ತು¤, ವಾಂತಿ, ಹೊಟ್ಟೆ ನೋವು ಬರುತ್ತದೆ. ಉಸಿರಾಟದ ಮೂಲಕ ರಕ್ತಕ್ಕೆ ಸೇರಿದಾಗ ನಾಡಿ ಬಡಿತ ಮತ್ತು ಕಿಡ್ನಿಯ ಕ್ರಿಯೆ ನಿಧಾನವಾಗುತ್ತದೆ ಅಥವಾ ವಿಫ‌ಲವಾಗಿ ಸಾವು ಹತ್ತಿರ ಬರುತ್ತದೆ. ದಿನ ನಿತ್ಯ ಅತ್ಯಲ್ಪ ಪ್ರಮಾಣದಲ್ಲಿ ಸೇವಿಸುತ್ತಿದ್ದರೆ ಜೀವಕೋಶಗಳು ಸಾಯುತ್ತಾ ಕ್ಯಾನ್ಸರ್‌ಗೆ ತುತ್ತಾಗುತ್ತಾನೆ.

ದವಸ ಧಾನ್ಯಗಳನ್ನು ಹುಳ ಬೀಳದಂತೆ ಸಂರಕ್ಷಿಸಿಡಲು ಇದಲ್ಲದೆ ಬೇರೆ ದಾರಿ ಇಲ್ಲ ಎಂದು ವಾದಿಸುವ ಕೃಷಿಕರು, ವ್ಯಾಪಾರಿಗಳಿದ್ದಾರೆ. ಬೇಳೆ ಕಾಳುಗಳನ್ನು ನಾವು ತೊಳೆದು, ಬೇಯಿಸಿ ಉಪಯೋಗಿಸುತ್ತೇವೆ. ತೊಳೆದು ಬೇಯಿಸಿದಾಗ ಇದರ ವಿಷದಂಶ ಕಡಿಮೆಯಾಗುವುದು ಸತ್ಯ. ಆದರೆ ಅಲ್ಪ ಪ್ರಮಾಣದಲ್ಲಿ ನಮ್ಮ ಹೊಟ್ಟೆ ಸೇರುವುದು ಖಚಿತ. ಆದರೆ ಅಡಿಕೆ ಈ ರೀತಿಯಲ್ಲ. ಮಾತ್ರೆ ಹಾಕಿದ ಅಡಿಕೆಯನ್ನು ಪುಡಿಮಾಡಿ ಹಾಗೆಯೇ ಸೇವಿಸುತ್ತಾರೆ. ತೊಳೆಯುವ, ಕುದಿಸುವ ಪರಿಪಾಠವಿಲ್ಲ. ಮಾಡಿದರೂ ಅಡಿಕೆಯ ರುಚಿ ಕೆಡುತ್ತದೆ. ಈಗ ಹೇಳಿ ಇದನ್ನು ಅರಿಯದೆ ತಿಂದವನ ಆರೋಗ್ಯ ಸ್ಥಿತಿ ಏನಾಗಬಹುದು. ಕ್ವಿಕ್‌ ಫಾಸ್‌ ಹಾಕಿದ ಅಡಿಕೆಯನ್ನು ಲ್ಯಾಬ್‌ನಲ್ಲಿ ಪರೀಕ್ಷಿಸಿದರೆ ಖಂಡಿತ ಫಾಸಿ#àನ್‌ ಅಂಶ ಕಂಡು ಬರಬಹುದು. ಆದರೆ ಯಾರೂ ಪರೀಕ್ಷಿಸಲು ಹೋಗಿಲ್ಲ. ತಮ್ಮ ತಲೆಗೆ ತಾವೇ ಚಪ್ಪಡಿ ಕಲ್ಲು ಎಳೆದುಕೊಳ್ಳಲು ಯಾರೂ ಸಿದ್ಧರಿಲ್ಲ.

ವಿದೇಶಗಳಲ್ಲೂ ಈ ಮಾತ್ರೆಯ ವಿಷಾನಿಲದಿಂದ ಸಾವನ್ನಪ್ಪಿದ್ದಾರೆ. ಇದು ನಿರ್ಧರಿತವಾದೊಡನೆ ಆ ದೇಶಗಳಲ್ಲಿ ಈ ಮಾತ್ರೆಯನ್ನು ಸಂಪೂರ್ಣ ನಿಷೇಧಿಸಿದ್ದಾರೆ. ಅಲ್ಲಿ ಯಾರಲ್ಲಾದರೂ ಈ ಮಾತ್ರೆ ಅಕ್ರಮವಾಗಿ ಕಂಡು ಬಂದಲ್ಲಿ ಜೈಲು ಸಜೆ ಕಾದಿರುತ್ತದೆ. ಆದರೂ ಅಭಿವೃದ್ಧಿ ಹೊಂದದ ರಾಷ್ಟ್ರಗಳಲ್ಲಿ ನಮ್ಮಂತೆ ಇದರ ಉಪಯೋಗ ಹೆಚ್ಚಾಗಿದೆ.

ಅನೇಕ ಮಂದಿ ಸಾವಯವ ಕೃಷಿಕರು ತಮ್ಮ ಬೇಳೆ ಕಾಳುಗಳನ್ನು ಸಂರಕ್ಷಿಸಲು ಸಾವಯವ ಕ್ರಮವನ್ನು ಅನುಸರಿಸಿ ಯಶಸ್ವಿ ಯಾ ಗಿದ್ದಾರೆ. ಕಹಿ ಬೇವಿನ ಮತ್ತು ಲವಂಗದ ಕಾಯಿ, ಎಣ್ಣೆ, ಒಣಗಿದೆ ಎಲೆ, ಕರಿಮೆಣಸಿನ ಕಾಳುಗಳು, ಗೇರುಬೀಜದ ಸಿಪ್ಪೆ ಇತ್ಯಾದಿ ಗಳನ್ನು ಬೇಳೆ ಕಾಳುಗಳ, ಸುಲಿದ ಅಡಿಕೆ ಜೊತೆಗೆ ಸೇರಿಸಿಟ್ಟು ಯಶಸ್ವಿಯಾಗಿದ್ದಾರೆ. ಇವೆಲ್ಲ ಆಹಾರ ವಸ್ತುಗಳಲ್ಲದೆ ಔಷಧೀಯ ಗುಣವುಳ್ಳ ಕೀಟ ನಾಶಕಗಳೂಆಗಿವೆ. ಆದರೆ ಇದನ್ನು ಉಪಯೋಗಿಸುವಲ್ಲಿ ಪರಿಶ್ರಮ ಹೆಚ್ಚು ಬೇಕು. ಬೇಳೆ ಕಾಳು, ಅಡಿಕೆ ಉಪಯೋಗಿಸುವವರಿಗೆ ಇದರಿಂದ ಯಾವುದೇ ಹಾನಿ ಇಲ್ಲ. ಕೃಷಿ ಉತ್ಪನ್ನಗಳನ್ನು ಸಂರಕ್ಷಿಸಲು ಭದ್ರವಾದ ಗಾಳಿಯಾಡದ ಕೋಣೆಯಲ್ಲಿಟ್ಟು ಗಂಧಕದ ಹೊಗೆ ಹಾಕುವ ಹ್ಯುಮಿಗೇಷನ್‌ ಎನ್ನುವ ಕ್ರಮ ಉತ್ತಮ ವಿಧಾನ ಎನಿಸಿದೆ.

ಅತಿ ಆಸೆ ನಮ್ಮವರನ್ನು ಮೃತ್ಯುಕೂಪಕ್ಕೆ ತಳ್ಳುತ್ತಿದೆಯೇ? ನನ್ನ ಕೃಷಿ ಉತ್ಪನ್ನದಿಂದ, ನಾನು ಮಾಡುವ ವ್ಯಾಪಾರದಿದ ನನಗೆ ಮಾತ್ರ ಲಾಭವಾದರೆ ಸಾಕು ಎನ್ನುವ ಸ್ವಾರ್ಥವನ್ನು ಬಿಡಬೇಕು. ಇದನ್ನು ಉಪಯೋಗಿಸುವವರ‌ೂ ನಾಳೆಯ ನಮ್ಮ ಉತ್ಪನ್ನವನ್ನು ಖರೀದಿಸಲು ಜೀವಂತ ಇರಬೇಕು ಎಂದು ತಿಳಿಯುವ ಮಾನವೀಯತೆ ನಾವು ತೋರಿದರೆ ಸಾಕು. ಈ ವಿಷಾನಿಲದ ಬಾಂಬ್‌ ನೀವು ಮುಂದೆ ಉಪಯೋಗಿಸಲಾರಿರಿ.

– ಶಂಕರ್‌ ಸಾರಡ್ಕ

Advertisement

Udayavani is now on Telegram. Click here to join our channel and stay updated with the latest news.

Next