ಅಫ್ಘಾನಿಸ್ತಾನ : ಬಾಂಬ್ ಸ್ಫೋಟಗೊಂಡು ಕನಿಷ್ಠ 25 ಜನರು ಮೃತಪಟ್ಟಿರುವ ಘಟನೆ ಅಫ್ಘಾನಿಸ್ತಾನದ ಪಶ್ಚಿಮ ಕಾಬೂಲ್‌ನಲ್ಲಿ ಶನಿವಾರ ( ಮೇ.08) ನಡೆದಿದೆ.
ಇಲ್ಲಿಯ ಶಾಲೆಯೊಂದರ ಸಮೀಪ ಬಾಂಬ್ ಸ್ಫೋಟಗೊಂಡಿದೆ. ದುರ್ಘಟನೆಯಲ್ಲಿ ಮಡಿದವರು ಬಹುತೇಕ ವಿದ್ಯಾರ್ಥಿಗಳಾಗಿದ್ದಾರೆ ಎಂದು ಆಫ್ಘನ್ ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ನಾಗರಿಕರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿರುವುದನ್ನು ತಾಲಿಬಾನ್ ಸಂಘಟನೆ ಖಂಡಿಸಿದೆ. ಹಾಗೂ ಘಟನೆಯ ಹೊಣೆ ಹೊರಲು ಅದು ನಿರಾಕರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಿಂದ ಆಕ್ರೋಶಗೊಂಡ ಜನಸಮೂಹ ಆಂಬ್ಯುಲೆನ್ಸ್ ಮೇಲೆ ದಾಳಿ ಮಾಡಿದ್ದು, ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಗ್ಯ ಸಚಿವಾಲಯದ ವಕ್ತಾರ ಗುಲಾಮ್ ದಸ್ತಿಗರ್ ನಜಾರಿ ಹೇಳಿದ್ದಾರೆ. ನೆರವಿಗೆ ಧಾವಿಸಿದ ಆರೋಗ್ಯ ಕಾರ್ಯಕರ್ತರ ಮೇಲಿನ ಹಲ್ಲೆ ಮಾಡದಂತೆ ಕೇಳಿಕೊಂಡಿರುವ ಸಚಿವರು ಆ್ಯಂಬುಲೆನ್ಸ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಕರ್ತವ್ಯ ನಿಭಾಯಿಸಲು ಸಹಕರಿಸಿ ಎಂದು ಮನವಿ ಮಾಡಿದ್ದಾರೆ.
ಕನಿಷ್ಠ 50 ಜನರು ಸಹ ಗಾಯಗೊಂಡಿದ್ದಾರೆ ಮತ್ತು ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಏರಿಯನ್ ಮತ್ತು ನಜಾರಿ ಇಬ್ಬರೂ ಹೇಳಿದರು. ಇಸ್ಲಾಮಿಕ್ ಸ್ಟೇಟ್ ಗುಂಪು ಈ ಹಿಂದೆ ಅದೇ ಪ್ರದೇಶದಲ್ಲಿ ಅಲ್ಪಸಂಖ್ಯಾತ ಶಿಯಾಗಳ ವಿರುದ್ಧ ದಾಳಿಗಳನ್ನು ಹೇಳಿಕೊಂಡಿದ್ದರೂ, ಸಧ್ಯ ದಾಳಿಯ ಹೊಣೆ ಯಾರೂ ಹೊತ್ತಿಲ್ಲ.
ಆಸ್ಪತ್ರೆ ಎದುರು ಜನಸಾಗರ :
ದುರ್ಘಟನೆಯಲ್ಲಿ ಮೃತಪಟ್ಟವರ ಶವ ಹಾಗೂ ಗಾಯಗೊಂಡವರನ್ನು ಮೊಹಮ್ಮದ ಅಲಿ ಜಿನ್ನಾ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಸಂಬಂಧಿಕರ ರೋಧನ ಮುಗಿಲು ಮುಟ್ಟುವಂತಿತ್ತು. ಇನ್ನು ಗಾಯಗೊಂಡವರ ಜೀವ ಬದುಕಿಸಲು ನೂರಾರು ಜನ ರಕ್ತ ದಾನ ಮಾಡಲು ಸಾಲುಗಟ್ಟಿ ನಿಂತ ದೃಶ್ಯಗಳು ಆಸ್ಪತ್ರೆಯ ಮುಂಭಾಗದಲ್ಲಿ ಕಂಡು ಬಂದವು.