ಮಂಡ್ಯ: ದ್ವೀಪ ರಾಷ್ಟ್ರ ಶ್ರೀಲಂಕಾದ ಕೊಲಂಬೋದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಮಂಡ್ಯದಲ್ಲೂ ಹೈ-ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕ ಸ್ಥಳಗಳು, ಪ್ರವಾಸಿ ತಾಣಗಳು ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ವಿಶ್ವವಿಖ್ಯಾತ ಕೃಷ್ಣರಾಜಸಾಗರ ಜಲಾಶಯದ ಮೇಲೂ ಹದ್ದಿನ ಕಣ್ಣಿಡಲಾಗಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಜೊತೆಗೆ ಪೊಲೀಸ್ ಭದ್ರತೆ ಯನ್ನೂ ಹೆಚ್ಚಿಸಲಾಗಿದೆ. ಜಲಾಶಯ ಹಾಗೂ ಬೃಂದಾವನ ವೀಕ್ಷಣೆಗೆ ಬರುವ ಪ್ರವಾಸಿಗರು ಹಾಗೂ ವಾಹನ ಗಳನ್ನು ಸಂಪೂರ್ಣ ತಪಾಸಣೆಗೊಳ ಪಡಿಸ ಲಾಗುತ್ತಿದೆ. ಅನುಮಾನಾಸ್ಪದ ವ್ಯಕ್ತಿಗಳ ಮೇಲೂ ನಿಗಾ ವಹಿಸಲಾಗುತ್ತಿದೆ.
ಸಾರ್ವಜನಿಕ ಸ್ಥಳಗಳಾದ ದೇವಾಲಯಗಳು, ಚರ್ಚ್, ಮಸೀದಿ, ಬಸ್, ರೈಲ್ವೆ ನಿಲ್ದಾಣ, ಚಿತ್ರಮಂದಿರಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳು, ಶಿಂಷಾ, ಬ್ಲಿಫ್, ಪ್ರವಾಸಿ ತಾಣಗಳು, ಜಿಲ್ಲೆಯ ಪ್ರಮುಖ ದೇವಾಲಯಗಳಿಗೆ ಆಗಮಿಸುವ ಪ್ರವಾಸಿಗರ ಮೇಲೆ ತೀವ್ರ ಪರಿಶೀಲನೆ ನಡೆಸಲಾಗುತ್ತಿದೆ. ಶ್ವಾನದಳ, ಬಾಂಬ್ ನಿಷ್ಕ್ರೀಯ ದಳದಿಂದ ಪರಿಶೀಲನೆ ನಡೆಸಲಾಗುತ್ತಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಡಿ.ಶಿವಪ್ರಕಾಶ್ ನೇತೃತ್ವದಲ್ಲಿ ತಪಾಸಣೆ ನಡೆಸಲಾಗುತ್ತಿದೆ.
ಅನುಮಾನಾಸ್ಪದ ವ್ಯಕ್ತಿಗಳು ಓಡಾಡುವುದು, ಅಪರಿಚಿತ ಬ್ಯಾಗ್‌ಗಳು ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬಂದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಗೆ ತಿಳಿಸುವಂತೆ ಮನವಿ ಮಾಡಲಾಗಿದೆ.
ಕೆಆರ್‌ಎಸ್‌ನಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಅಣೆಕಟ್ಟೆ ಮೇಲೆ ಹದ್ದಿನ ಕಣ್ಣಿಟ್ಟಿದೆ. ಪೊಲೀಸ್ ಇಲಾಖೆಯಿಂದಲೂ ಸಿಬ್ಬಂದಿಯನ್ನು ಗಸ್ತಿಗೆ ನಿಯೋಜಿ ಸಲಾಗಿದೆ. ನಿತ್ಯ ಮೂರ್‍ನಾಲ್ಕು ಬಾರಿ ವಾಹನಗಳು ಹಾಗೂ ಪ್ರವಾಸಿಗರನ್ನು ತಪಾಸಣೆ ಮಾಡಿ ಒಳಬಿಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಿ.ಶಿವಪ್ರಕಾಶ್ ತಿಳಿಸಿದ್ದಾರೆ.