Advertisement

ಬೊಳುವಾರು ಬಾಳ ಕಥನ

06:00 AM Sep 26, 2018 | |

ಕನ್ನಡದ ಭಾವಪ್ರಪಂಚದ ಪ್ರಮುಖ ಕತೆಗಾರರಲ್ಲಿ ಬೊಳುವಾರು ಮಹಮದ್‌ ಕುಂಞ ಅವರೂ ಒಬ್ಬರು. ಇತ್ತೀಚೆಗಷ್ಟೇ ಪ್ರವಾದಿ ಮಹಮ್ಮದ್‌ರ ಪತ್ನಿ ಆಯೇಷಾರ ಜೀವನ ಕುರಿತು ಅವರು ಬರೆದ “ಉಮ್ಮಾ’ ಕಾದಂಬರಿ ಸಾಹಿತ್ಯವಲಯದಲ್ಲಿ ಸದ್ದು ಮಾಡುತ್ತಿದೆ. “ಓದಿರಿ’, “ಸ್ವಾತಂತ್ರ್ಯದ ಓಟ’ ಕಾದಂಬರಿಗಳಲ್ಲೂ ಅವರು ಕಟ್ಟಿಕೊಟ್ಟ ಸಾಮಾಜಿಕ ಚಿತ್ರಣ ಅತ್ಯಾಪ್ತ. ಪ್ರವಾದಿ ಅವರ ಬದುಕಿನ ಆಯೇಷಾ ಪಾತ್ರದಷ್ಟೇ, ಬೊಳುವಾರರ ಬದುಕಿನಲ್ಲೂ ಅವರ ಪತ್ನಿ ಜುಬೇದಾ ಹಾಲುಜೇನಿನಂಥ ಮಧುರಾನುಭೂತಿ ಕಲ್ಪಿಸಿದವರು. “ನನ್ನ ಮನಸ್ಸಿಗೆ ಯಾವತ್ತೂ ವಯಸ್ಸಾಗುವುದಿಲ್ಲ’ ಎನ್ನುವ ಜುಬೇದಾ ಅವರದ್ದು ಸದಾ ಪುಟಿಯುವ ಜೀವನೋತ್ಸಾಹ. ಮಾತಿಗೊಂದು ತಮಾಷೆ, ನಗು ಇವರ ಹೆಗ್ಗುರುತು. ಮಮತಾಜ್‌ ಬೊಳುವಾರು ಮತ್ತು ಬೆನಜೀರ್‌ ಬೊಳುವಾರು ಇವರ ಇಬ್ಬರು ಪುತ್ರಿಯರು. ಇಬ್ಬರೂ ಅಮೆರಿಕವಾಸಿ. “ನಮ್ಮ ಕುಟುಂಬಕ್ಕೆ ಏನೆಲ್ಲಾ ಒಳ್ಳೆಯದಾಗಿದೆಯೋ, ಅದು ಬೊಳುವಾರರ ಒಳ್ಳೆಯತನದಿಂದ’ ಎಂದು ಜುಬೇದಾ ನಮ್ರತೆಯಿಂದ ಹೇಳುತ್ತಾರೆ…

Advertisement

– ಬೊಳುವಾರು ಅವರನ್ನು ನೀವು ಮೊದಲು ಭೇಟಿಯಾಗಿದ್ದು ಎಲ್ಲಿ? ಅವರ ಕಥೆ, ಲೇಖನಗಳ ಪರಿಚಯ ಮದುವೆಗೂ ಮೊದಲು ಇತ್ತೇ?
ನಮ್ಮದು ಅಪ್ಪಟ ಸಾಂಪ್ರದಾಯಕ ಮದುವೆ. ನಾನು ಅವರನ್ನು ಮೊದಲು ಎದುರುಗೊಂಡಿದ್ದು ಮದುವೆ ಮಂಟಪದಲ್ಲಿಯೇ. ಆಗಲೂ ಅವರನ್ನು ನೋಡಿರಲಿಲ್ಲ. ಮದುವೆ ಮುಗಿಸಿ ಮನೆಗೆ ಬಂದಾಗಲೇ ಕಣ್ತುಂಬ ನೋಡಿದ್ದು. ಅವರು ಕಥೆ, ಲೇಖನಗಳನ್ನು ಬರೆಯುತ್ತಾರೆ ಎಂದು ಕೇಳಿದ್ದೆ. ಆದರೆ, ಅವರ ಯಾವ ಬರಹವೂ ನನಗೆ ಓದುವುದಕ್ಕೆ ಸಿಕ್ಕಿರಲಿಲ್ಲ. ಮದುವೆಯಾದ ಬಳಿಕವೇ ಅವರ ಬರಹಗಳನ್ನು ಓದಿದ್ದು. ಜೊತೆಗೆ ಇತರ ಸಾಹಿತಿಗಳ ಸಾಹಿತ್ಯವನ್ನೂ ಓದುವ ಅಭಿರುಚಿ ಬೆಳೆಸಿಕೊಂಡಿದ್ದು. 

– ನಿಮ್ಮ ಬಾಲ್ಯ ಹೇಗಿತ್ತು?
ನಮ್ಮ ಊರು ಉಪ್ಪಿನಂಗಡಿ ಸಮೀಪದ ಗೋಳಿತೋಟ. ನಮ್ಮ ಅಜ್ಜ ಭಾರೀ ಶ್ರೀಮಂತರು. ನಮ್ಮದು ತುಂಬಾ ಸಂಪ್ರದಾಯಸ್ಥ ಕುಟುಂಬ. ಹೆಣ್ಣುಮಕ್ಕಳನ್ನು ಮನೆಯಿಂದ ಹೊರಗೇ ಕಳಿಸುತ್ತಿರಲಿಲ್ಲ. ಹೀಗಾಗಿ ನನ್ನ ಶಿಕ್ಷಣ ಏಳನೇ ತರಗತಿಗೇ ಮುಕ್ತಾಯವಾಯಿತು. ನಮ್ಮದು ದೊಡ್ಡ ತೋಟ ಮತ್ತು ದೊಡ್ಡ ಮನೆ. ತೋಟದಲ್ಲಿಯೇ ನಮ್ಮ ಆಟ- ಪಾಠ. ಹುಷಾರಿಲ್ಲದಿದ್ದಾಗಲೂ ಡಾಕ್ಟರ್‌ ಅನ್ನು ಮನೆಗೆ ಕರೆಸುತ್ತಿದ್ದರೇ ಹೊರತು ಆಸ್ಪತ್ರೆಗೆ ಕರಕೊಂಡು ಹೋಗುತ್ತಿರಲಿಲ್ಲ. ನಾನು ಹೊರಗಡೆ ಪ್ರಪಂಚ ನೋಡಿದ್ದೇ ಬೋಳುವಾರು ಅವರನ್ನು ಮದುವೆಯಾದ ಬಳಿಕ. ಈಗ ಹಲವಾರು ಜನರು ನೀವು ಉದ್ಯೋಗಸ್ಥೆಯಾ ಎಂದು ಕೇಳುತ್ತಾರೆ. ನಾನು “ಹೌದು, ಅಡುಗೆ ಮಾಡುತ್ತೇನೆ’ ಎನ್ನುತ್ತೇನೆ.

– ಅವರ ಬರಹಗಳಲ್ಲಿ ಯಾವುದು ನಿಮಗೆ ಅತ್ಯಂತ ಆಪ್ತ?
ಅವರು ಬರೆಯುತ್ತಿರುವಾಗಲೇ ನಾನು ಓದುತ್ತೇನೆ. ಅವರು ಪುಸ್ತಕ ಬರೆದು ಮುಗಿಸುವಾಗ ನಾನು ಅದನ್ನು ಓದಿ ಮುಗಿಸಿಯಾಗಿರುತ್ತದೆ. ನನಗೆ ಅವರೇ ಇಷ್ಟ. ಅವರು ಬರೆಯುವ ಪ್ರತಿ ಸಾಲುಗಳೂ ಇಷ್ಟ. ಅವರ ಯಾವುದಾದರೂ ಒಂದು ಪುಸ್ತಕ, ಒಂದು ಕಥೆ ಇಷ್ಟ ಎಂದು ಹೇಗೆ ಹೇಳಲಿ. ಅವರ ಅಭಿಮಾನಿಗಳಲ್ಲಿ ನಾನೇ ಮೊದಲಿಗಳು. ಅವರು ಬರೆಯುತ್ತಾ ಕೂತರೆ ನನಗೆ ಏನೋ ಖುಷಿ. ಅವರು ಕೆಲ ದಿನಗಳ ಕಾಲ ಬರಹವನ್ನು ನಿಲ್ಲಿಸಿದರೆ ನನಗೇ ಸಮಾಧಾನ ಇರುವುದಿಲ್ಲ. ರಾತ್ರಿ ತಡವಾದರೂ ಸರಿ, ನೀವು ಬರೆಯಿರಿ ಎಂದು ನಾನು ಅವರನ್ನು ಹುರಿದುಂಬಿಸುತ್ತೇನೆ. ರಾತ್ರಿಯೆಲ್ಲಾ ಕುಳಿತು ಬರೆಯುವುದರಿಂದ ನನಗೆ ತೊಂದರೆಯಾಗುತ್ತದೆ ಎಂದು ಅವರು ಮತ್ತೂಂದು ಕೋಣೆಗೆ ಹೋಗುತ್ತೇನೆ ಎನ್ನುತ್ತಾರೆ. ಆದರೆ, ನನಗೆ ಅದು ಇಷ್ಟ ಇಲ್ಲ. ನನ್ನ ಕಣ್ಣೆದುರೇ ಕೂತು ಬರೆದರೇನೇ ನನಗೆ ಖುಷಿ.

– ಲೇಖಕರ ಪತ್ನಿಯಾದ ಕಾರಣ ನಿಮಗಾದ ಲಾಭ ಮತ್ತು ನಷ್ಟಗಳು ಏನು!? 
ಅವರನ್ನು ಮದುವೆಯಾದಾಗ ನನಗೆ 17 ವರ್ಷ. ಜೊತೆಗೆ ನಾನು ಮನೆಯಿಂದ ಹೊರಹೋದವಳೇ ಅಲ್ಲ. ನನಗೆ ಹೊರಗಿನ ಪ್ರಪಂಚದಲ್ಲಿ ಹೇಗೆ ವ್ಯವಹರಿಸಬೇಕು, ಯಾರ ಜೊತೆ ಹೇಗೆ ಮಾತನಾಡಬೇಕು ಎಲ್ಲವನ್ನೂ ಅವರೇ ಕಲಿಸಿದ್ದು. ಅವರಲ್ಲದೇ ಬೇರೆ ಯಾರನ್ನಾದರೂ ಮದುವೆಯಾಗಿದ್ದರೆ ಗಂಡನಿಗೆ ಮೂರು ಹೊತ್ತು ಅಡುಗೆ ಮಾಡಿ ಬಡಿಸಿ, ನೆಂಟರಿಷ್ಟರ ನಿಖಾಗಳಿಗೆ ಹಾಜರಾಗುವುದಷ್ಟೇ ನನ್ನ ಬದುಕಾಗಿರುತ್ತಿತ್ತು. ಈಗ ಸಾಹಿತ್ಯ ಸಮಾರಂಭಗಳಿಗೆ ಹೋಗುತ್ತೇನೆ. ಗೋಷ್ಠಿಗಳಲ್ಲಿ ಕೂತು ಕೇಳುತ್ತೇನೆ. ಅವರನ್ನು ಮದುವೆಯಾಗಿ ನಾನು ಯಾವ ನಷ್ಟವನ್ನೂ ಅನುಭವಿಸಿಲ್ಲ.

Advertisement

– ಬೊಳುವಾರರದು ಸಾಮಾಜಿಕವಾಗಿ ದೊಡ್ಡ ಪರಿವಾರ. ಮನೆಗೆ ಅತಿಥಿಗಳ ಆಗಮನವಾದಾಗ ಹೇಗೆ ನಿಭಾಯಿಸುತ್ತಿದ್ದಿರಿ?
ನಾವು ಮಣಿಪಾಲದಲ್ಲಿ ಇದ್ದಾಗ ನಮ್ಮ ಮನೆಗೆ ದೊಡ್ಡ ದೊಡ್ಡ ಸಾಹಿತಿಗಳು ಬಂದಿದ್ದಾರೆ. ಯು.ಆರ್‌. ಅನಂತಮೂರ್ತಿ, ಲಂಕೇಶ್‌ ಅಂಥವರೆಲ್ಲಾ ಬಂದು ನನ್ನ ಕೈ ಅಡುಗೆ ತಿಂದು ಖುಷಿಪಟ್ಟು ಹೋಗಿದ್ದಾರೆ. ಈಗ ಯಾವುದಾದರೂ ಸಮಾರಂಭಗಳಿಗೆ ಹೋದರೆ ಹಲವಾರು ಜನ ಸಾಹಿತಿಗಳು, ಯುವ ಬರಹಗಾರರು ನಾವು ನಿಮ್ಮ ಮನೆಗೆ ಬಂದಿದ್ದೆವು, ನಿಮ್ಮ ಮನೆಯಲ್ಲಿ ಊಟ ಮಾಡಿದ್ದೇವೆ, ಚಹಾ ಕುಡಿದಿದ್ದೇವೆ ಎಂದು ಹೇಳುತ್ತಾರೆ. ಕೆಲವರು ಬಂದು ಹೋಗಿದ್ದು ನೆನಪಿರುತ್ತದೆ. ಕೆಲವರು ಬಂದದ್ದು ನೆನಪಿರುವುದಿಲ್ಲ. ಮನೆಗೆ ಯಾರೇ ಬಂದರೂ ನನಗೆ ಸತ್ಕಾರ ಮಾಡಿ ಕಳಿಸಲು ಬಹಳ ಖುಷಿ. ನಮ್ಮ ಮನೆಯಲ್ಲಿ ಏನಿರುತ್ತದೆಯೋ ಅದರಲ್ಲೇ ಸತ್ಕರಿಸಿ ಕಳಿಸುತ್ತೇವೆ. ನಮ್ಮ ಮನೆಗೆ ಬರುವ ಅತಿಥಿಗಳು ಯಾರೂ ಅತಿಥಿಗಳ ಥರಾ ಬಂದು ಸೋಫಾ ಮೇಲೆ ಕೂತು ಹೋಗುವುದಿಲ್ಲ. ಅವರು ನಮ್ಮ ಅಡುಗೆ ಮನೆವರೆಗಿನ ನೆಂಟರ ಥರ ಇದ್ದು ಹೋಗುತ್ತಾರೆ. ನಮಗೂ, ಮನೆಗೆ ಬಂದವರು ನಮ್ಮೊಡನೆ ಸಲುಗೆಯಿಂದ ಇದ್ದರೇನೇ ಖುಷಿ. 

– ಬೊಳುವಾರರ ವಿಚಾರಗಳ ಪ್ರಭಾವ ನಿಮ್ಮ ಕುಟುಂಬದವರ ಮೇಲೆ ಆಗಿದೆಯಾ?
ತುಂಬಾ ಆಗಿದೆ. ಬೊಳುವಾರರ ಕುಟುಂಬ ಮತ್ತು ನನ್ನ ತವರು ಮನೆಯಲ್ಲಿ ಬೊಳುವಾರರ ಪ್ರಭಾವ ಸಾಕಷ್ಟು ಇದೆ. ನನ್ನ ತಾಯಿ ಮನೆಯಲ್ಲಿ ಹುಡುಗಿಯರನ್ನು ಮನೆಯಿಂದ ಆಚೆ ಕಳಿಸುತ್ತಿರಲಿಲ್ಲ. ಅಂಥ ಮನೆಯಲ್ಲಿ ಇವತ್ತು ಇರುವ ಮಹಿಳೆಯರೆಲ್ಲರೂ ಪದವೀಧರೆಯರೇ. ತಾಯಿ ಮನೆಯಲ್ಲಿ ಮನೆಯ ಹೆಣ್ಣು ಮಕ್ಕಳನ್ನು ಚೆನ್ನಾಗಿ ಓದಿಸಿ ಕೆಲಸಕ್ಕೆ ಕಳಿಸಿದ್ದಲ್ಲದೇ, ಗಂಡು ಮಕ್ಕಳಿಗೆ ತಂದುಕೊಂಡ ವಧುಗಳೂ ಸುಶಿಕ್ಷಿತೆಯರೇ. ನಮ್ಮ ಇಬ್ಬರು ಮಕ್ಕಳೂ ಚೆನ್ನಾಗಿ ಓದಿದ್ದಾರೆ. ಒಬ್ಬಳು ಎಂಜಿನಿಯರ್‌, ಮತ್ತೂಬ್ಬಳು ಲಾಯರ್‌. ಇಬ್ಬರೂ ಅಮೆರಿಕದಲ್ಲಿ ನೆಲೆಸಿದ್ದಾರೆ. ಅವರಿಗೆ ಒಪ್ಪಿತವಾದ ಹುಡುಗರನ್ನು ಅವರೇ ಆರಿಸಿ ಮದುವೆಯಾಗಿದ್ದಾರೆ. 

– ನೀವೂ ಜಗಳ ಮಾಡುತ್ತೀರ? 
ಜಗಳ ಮಾಡದ ಮನೆಯೂ ಒಂದು ಮನೆಯಾ? ಅಲ್ಲಾ… ದಂಪತಿ ಜಗಳ ಮಾಡದೇ, ಹುಸಿ ಕೋಪ ತೋರದೇ, ರಾಜಿಯಾಗದೇ ಹೇಗೆ ಖುಷಿಯಿಂದ ಜೀವನ ನಡೆಸುತ್ತಾರೆ. ನನಗೆ, ಜಗಳವಿಲ್ಲದ ಮನೆಯನ್ನು ಊಹಿಸಲೂ ಸಾಧ್ಯವಿಲ್ಲ. ನಾನೂ- ಅವರೂ ಜಗಳ ಮಾಡುತ್ತೇವೆ. ಆದರೆ, ಇಷ್ಟು ವರ್ಷದಲ್ಲಿ ಒಂದು ದಿನವೂ ನಾವು 1 ನಿಮಿಷವೂ ಮಾತು ಬಿಟ್ಟಿಲ್ಲ. ಜಗಳವಾಡುವುದು, ರಾಜಿಯಾಗಿ ಏನೂ ಆಗಿಲ್ಲವೆಂಬಂತೆ ಖುಷಿಯಲ್ಲಿ ಇರುವುದು ಇದು ನಮ್ಮ ನಿತ್ಯದ ಪರಿಪಾಠ. 
 
ನಿಮ್ಮ ದಿನಚರಿ ಹೇಗಿರುತ್ತದೆ? 
 ಮನೆ ಸ್ವತ್ಛಗೊಳಿಸುವುದು, ಒಪ್ಪಗೊಳಿಸುವುದು ನನಗೆ ಒಂಥರಾ ಗೀಳು ಎಂದೇ ಹೇಳಬಹುದು. ಇದು ನನಗೆ ನನ್ನ ತಾಯಿಯಿಂದ ಬಂದ ಬಳುವಳಿ. ಈಗಲೂ ಸ್ವತ್ಛಗೊಳಿಸುವ ಕೆಲಸದಲ್ಲಿ ಸದಾ ನಿರತಳಾಗಿತರುತ್ತೇನೆ. ಮಂಡಿ ನೋವು ಇರುವುದರಿಂದ ಮಕ್ಕಳು, ಅದನ್ನೆಲ್ಲಾ ಕಡಿಮೆ ಮಾಡು ಅಂತ ಬಯ್ಯುತ್ತಿರುತ್ತಾರೆ. ಅಡುಗೆ ಮಾಡುವುದೂ ನನಗೆ ಹೆಚ್ಚು ಖುಷಿ. ನಿಯತಕಾಲಿಕೆಗಳಲ್ಲಿ ಬರುವ ಹೊಸ ಬಗೆಯ ಅಡುಗೆ ರೆಸಿಪಿಗಳನ್ನು ನೋಡಿ ಹೊಸ ಅಡುಗೆ ತಯಾರಿಸುತ್ತೇನೆ.  àರೈಸ್‌, ಚಿಕನ್‌ ಕರ್ರಿ, ಫಿಶ್‌ ಫ್ರೈ ಮಾಡುವುದರಲ್ಲಿ ನಾನು ಎಕ್ಸ್‌ಪರ್ಟ್‌. ಅವನ್ನು ನನ್ನ ಉಮ್ಮಾ ನನಗೆ ಕಲಿಸಿದ್ದು. ಬೊಳುವಾರರಿಗೆ ನೀರು ದೋಸೆ ಚಟ್ನಿ, ಗಂಜಿ- ಚಟ್ನಿಪುಡಿ ಇದ್ದರೆ ಸಾಕು ಮತ್ತೇನನ್ನೂ ಅವರು ಕೇಳುವುದಿಲ್ಲ. ಮಕ್ಕಳು ಬಂದರೆ ನಮ್ಮ ಊರಿನ ಶೈಲಿಯ ನಾನ್‌ವೆಜ್‌ ಅಡುಗೆ, ಶ್ಯಾವಿಗೆ, ನೀರು ದೋಸೆ ಕಾಯಂ.

– ನಿಮ್ಮ ಹವ್ಯಾಸಗಳು ಏನು? 
ಮುಂಚೆಯೆಲ್ಲಾ 5 ಗಂಟೆಗೇ ಎದ್ದು ಮನೆಕೆಲಸ ಮಾಡಲು ಆರಂಭಿಸುತ್ತಿದ್ದೆ. ಇಷ್ಟು ಬೇಗ ಏಕೆ ಏಳುತ್ತಿಯ, ಸ್ವಲ್ಪ ತಡವಾಗಿ ಏಳು ಎಂದು ಇವರು ಬಯ್ದು ಬಯ್ದು ಈಗ ಅದು 7 ಗಂಟೆಗೆ ಬಂದು ನಿಂತಿದೆ. ಆದರೆ, ನಿದ್ದೆ ಮಾತ್ರ ಬಹಳ ಕಡಿಮೆಯಾಗಿದೆ. ಫೋನ್‌ನಲ್ಲಿ ಮಕ್ಕಳ ಜೊತೆ ಮಾತಾಡಲು, ಅಕ್ಕತಂಗಿಯರ ಜೊತೆ ಹರಟಲು ಸುಮಾರು ಸಮಯ ಮೀಸಲು. ಜೊತೆಗೆ ಪುಸ್ತಕಗಳನ್ನು ಓದುತ್ತೇನೆ. ಕಮಲ ಹಾಸನ್‌, ಅನಂತನಾಗ್‌ ಸಿನಿಮಾಗಳು ಟೀವಿಯಲ್ಲಿ ಬಂದರೆ ತಪ್ಪದೇ ನೋಡುತ್ತೇನೆ. ಆದರೆ, ಅಪ್ಪಿತಪ್ಪಿಯೂ ಧಾರಾವಾಹಿ ನೋಡುವ ಅಭ್ಯಾಸ ಮಾಡಿಕೊಂಡಿಲ್ಲ. “ಅಗ್ನಿಸಾಕ್ಷಿ’ ಧಾರಾವಾಹಿ ಆರಂಭವಾದ ಮೇಲೆ ನಾನು 3 ಬಾರಿ ಮಕ್ಕಳನ್ನು ಕಾಣಲು ಅಮೆರಿಕಕ್ಕೆ ಹೋಗಿ ಬಂದೆ. ಬಹುಶಃ ನಾಲ್ಕನೇ ಬಾರಿ ಹೋಗಿ ಬರುವಾಗ ಆ ಧಾರಾವಾಹಿ ಮುಗಿಯಬಹುದೇನೋ!

– ಯಾವೆಲ್ಲಾ ದೇಶ ಸುತ್ತಿದ್ದೀರ?
ಬೊಳುವಾರರ ಒಳ್ಳೆಯ ಗುಣದ ಕಾರಣಕ್ಕೋ ಏನೊ ನಮಗೆ ಚಿನ್ನದಂಥ ಅಳಿಯಂದಿರು ಸಿಕ್ಕಿದ್ದಾರೆ. ಮಕ್ಕಳ ಮನೆಗೆ, ಅವರ ಜೊತೆ ಪ್ರವಾಸಕ್ಕೆಂದು ಇಬ್ಬರೂ ಅಮೆರಿಕ, ಲಂಡನ್‌, ದುಬೈ, ಸಿಂಗಾಪುರ ಮುಂತಾದ ದೇಶಗಳಿಗೆ ಹೋಗಿದ್ದೇನೆ.

– ಬೊಳುವಾರರಿಗೆ ಪ್ರಶಸ್ತಿಗಳು ಬಂದಾಗ ನಿಮಗೆ ಹೇಗನ್ನಿಸುತ್ತದೆ?
ಅವರಿಗೆ ಪ್ರಶಸ್ತಿ, ಸನ್ಮಾನವೆಲ್ಲಾ ನನಗೆ ಸಂಭ್ರಮದ ಕ್ಷಣಗಳು. ಅವರ ಲೇಖನ, ಕಥೆಗಳಿಗೆ ಬಂದ ಗೌರವ ಧನ, ಪುಸ್ತಕಗಳಿಗೆ ಬಂದ ರಾಯಲ್ಟಿ ಹಣ ಯಾವುದನ್ನೂ ನಾನು ಇದುವರೆಗೆ ಕಳೆದಿಲ್ಲ. ಮೊದಲೆಲ್ಲಾ ಸಣ್ಣ ಮೊತ್ತದ ಗೌರವಧನ ಬಂದಾಗ ಸ್ಟೀಲ್‌ ಪಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೆ. ಹೆಚ್ಚು ಹಣ ಬಂದಾಗ ಚಿನ್ನ ಖರೀದಿಸಿದ್ದೇನೆ. ಇವೆಲ್ಲವನ್ನೂ ಜತನವಾಗಿ ಕಾಪಾಡಿಕೊಂಡಿದ್ದೇನೆ. ನನ್ನ ಅಡುಗೆ ಮನೆಯಲ್ಲಿ ವಸ್ತುಗಳು ಕಾಲಕಾಲಕ್ಕೆ ಬದಲಾಗಿವೆ. ಆದರೆ, ಅವರ ಬರವಣಿಗೆಗೆ ಸಿಕ್ಕ ಹಣದಲ್ಲಿ ತೆಗೆದುಕೊಂಡ ಯಾವ ವಸ್ತುವನ್ನೂ ನಾನು ಕಳೆದಿಲ್ಲ. 

– ಇವತ್ತಿನ ದಂಪತಿಗೆ ಸುಖ ಸಂಸಾರದ ಗುಟ್ಟು ಹೇಳುವುದಾದರೆ? 
ಗಂಡ- ಹೆಂಡತಿ ಮಧ್ಯ ಅನುಮಾನಗಳಿಗೆ ಆಸ್ಪದ ಇರಬಾರದು. ಹಠ, ಜಿದ್ದು ದಾಂಪತ್ಯದ ಸವಿಯನ್ನು ನುಂಗಿಹಾಕುತ್ತದೆ. ಗಂಡ- ಹೆಂಡತಿಯಲ್ಲಿ ಯಾರು ಸೋತರೇನು, ಯಾರು ಗೆದ್ದರೇನು, ದಾಂಪತ್ಯದಲ್ಲಿ, ಕಳಕೊಳ್ಳಲು ಏನೂ ಇರುವುದಿಲ್ಲ. 

– ನಿಮ್ಮ ನೆಚ್ಚಿನ ಲೇಖಕರು ಮತ್ತು ಪುಸ್ತಕಗಳು?
ಶಿವರಾಮ ಕಾರಂತರು ಮತ್ತು ಅನಂತಮೂರ್ತಿ ಅವರು ನನ್ನ ನೆಚ್ಚಿನ ಲೇಖಕರು. “ಮೂಕಜ್ಜಿಯ ಕನಸುಗಳು’ ಓದಿ ಆ ಗುಂಗಿನಲ್ಲೇ ಹಲವಾರು ದಿನಗಳನ್ನು ಕಳೆದಿದ್ದೆ.

– ಚೇತನ ಜೆ.ಕೆ. 

Advertisement

Udayavani is now on Telegram. Click here to join our channel and stay updated with the latest news.

Next