ಮುಂಬಯಿ: ಬಾಲಿವುಡ್‌ನಲ್ಲಿ ತಾಯಿ ಪಾತ್ರಗಳಿಂದಲೇ ಪ್ರಖ್ಯಾತರಾಗಿದ್ದ ನಟಿ ರೀಮಾ ಲಾಗೂ (59) ಹೃದಯಸ್ತಂಭನಕ್ಕೊಳಗಾಗಿ ಗುರುವಾರ ನಸುಕಿನ ಜಾವ ಇಹಲೋಕ ತ್ಯಜಿಸಿದ್ದಾರೆ.
ಬುಧವಾರ ತಡರಾತ್ರಿ ಅವರು ಎದೆ ನೋವಿನಿಂದ ಬಳಲಿದ್ದು, ಕೂಡಲೇ ಇಲ್ಲಿನ ಕೋಕಿಲಾ ಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಯಿತು. ಮುಂಜಾನೆ 3.30ಕ್ಕೆ ಹೃದಯಾಘಾತದಿಂದ ಕೊನೆಯುಸಿರೆಳೆದರು ಎಂದು ರೀಮಾರ ಅಳಿಯ ತಿಳಿಸಿದ್ದಾರೆ.
ರೀಮಾ ತಮ್ಮ 30ನೇ ವಯಸ್ಸಿನಲ್ಲಿ ಅಮೀರ್ ಖಾನ್ ಅಭಿನಯದ “ಖಯಾಮತ್ ಸೆ ಖಯಾಮತ್ ತಕ್’ ಚಿತ್ರದಿಂದ ನಟನಾ ವೃತ್ತಿ ಆರಂಭಿಸಿದವರು. ಅಂದಿನಿಂದ ಇಂದಿನವರೆಗೂ ಅವರು ತಾಯಿ ಪಾತ್ರದಲ್ಲೇ ಕಾಣಿಸಿಕೊಂಡು, ಬಾಲಿವುಡ್‌ನ ಜನಪ್ರಿಯ ನಟಿ ಎನಿಸಿಕೊಂಡವರು. ಪ್ರಮುಖ ನಟರಾದ ಶಾರುಖ್ ಖಾನ್, ಸಲ್ಮಾನ್ ಖಾನ್, ಮಾಧುರಿ ದೀಕ್ಷಿತ್ ಮುಂತಾದವರಿಗೆ ತಾಯಿಯಾಗಿ ನಟಿಸಿದವರು. ಹಮ್ ಆಪ್ ಕೆ ಹೈ ಕೌನ್, ಕಲ್ ಹೊ ನಾ ಹೊ, ಸಾಜನ್ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಇವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ನಟರಾದ ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಆಮೀರ್ ಖಾನ್, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.
ಗುರುವಾರ ಮಧ್ಯಾಹ್ನ ಮುಂಬಯಿಯ ಓಶಿವಾರಾ ರುದ್ರಭೂಮಿಯಲ್ಲಿ ರೀಮಾ ಲಾಗೂ ಅವರ ಅಂತ್ಯಧಿಕ್ರಿಯೆ ನೆರವೇರಿತು.