ಮುಂಬಯಿ: ಬಾಲಿವುಡ್ ನಲ್ಲಿ ಈ ವರ್ಷ ಮತ್ತೊಂದು ಚಿತ್ರ 100 ಕೋಟಿ ಕ್ಲಬ್ ಸೇರಿದೆ. ಆ ಮೂಲಕ ಬಿಟೌನ್ ನಲ್ಲಿ ವಿನ್ನಂಗ್ ಟ್ರ್ಯಾಕ್ ಮುಂದುವರೆದಿದೆ. ಕರಣ್ ಜೋಹರ್ 7 ವರ್ಷದ ಬಳಿಕ ನಿರ್ದೇಶನ ಫೀಲ್ಡ್ ಗಿಳಿದು ಕಮಾಲ್ ಮಾಡಿದ್ದಾರೆ. ಅವರ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ರೊಮ್ಯಾಂಟಿಕ್ ಕಾಮಿಡಿ ಕಥಾಹಂದರದ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮೋಡಿ ಮಾಡುವುದರ ಜೊತೆಗೆ ಪ್ರೇಕ್ಷಕರ ಮನವನ್ನೂ ಗೆದ್ದಿದೆ.
ಜು.28 ರಂದು ರಿಲೀಸ್ ಆದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ರಿಲೀಸ್ ಆದ 10ನೇ ದಿನಕ್ಕೆ ಇಂಡಿಯನ್ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ರೂ.ಯ ಗಳಿಕೆ ಕಂಡಿದೆ. ಭಾನುವಾರ (ಆ.6 ರಂದು) ಸಿನಿಮಾ 13.50 ಕೋಟಿ ರೂಪಾಯಿಯನ್ನು ಗಳಿಸಿದೆ. ಭಾರತದಲ್ಲಿ 10 ದಿನದಲ್ಲಿ 105.08 ಕೋಟಿ ರೂಪಾಯಿಯನ್ನು ಸಿನಿಮಾ ಗಳಿಸಿದೆ.
ಸಿನಿಮಾದಲ್ಲಿ ಪಂಜಾಬ್ ಮೂಲದ ರಾಕಿ (ರಣವೀರ್ ಸಿಂಗ್) ಬೆಂಗಾಳಿ ಮೂಲದ ರಾಣಿ (ಆಲಿಯಾ ಭಟ್) ಪ್ರೇಮಕಥೆಯನ್ನು ತೋರಿಸಲಾಗಿದೆ. ಕರಣ್ ಜೋಹರ್ ಅವರ ಹಿಂದಿನ ಕೆಲ ಸಿನಿಮಾದಲ್ಲಿರುವಂತೆ ಈ ಸಿನಿಮಾದಲ್ಲೂ ಕೌಟುಂಬಿಕ ಕಥೆಯನ್ನು ತೋರಿಸಲಾಗಿದೆ. ಇದಲ್ಲದೇ ಸಿನಿಮಾದಲ್ಲಿ ಸ್ತ್ರೀವಾದ, ಪುರುಷ ಸಮಾಜದ ವಿಚಾರವನ್ನು ಆಧುನಿಕ ರೀತಿಯಲ್ಲಿ ತೋರಿಸಲಾಗಿದೆ.
ಧರ್ಮೇಂದ್ರ – ಶಬಾನಾ ಅಜ್ಮಿ ನಡುವಿನ ಕಿಸ್ಸಿಂಗ್ ಸೀನ್, ರಾಕಿ (ರಣವೀರ್) ರಾಣಿಯ ತಾಯಿ (ಚುರ್ನಿ ಗಂಗೂಲಿ) ಜೊತೆಗೆ ಒಳ ಉಡುಪುಗಳ ಶಾಪಿಂಗ್‌ಗೆ ಹೋಗುವ ದೃಶ್ಯ ಹೀಗೆ ಕೆಲವೊಂದು ವಿಚಾರಗಳಿಂದ ಸಿನಿಮಾ ಸದ್ದು ಮಾಡಿದೆ.
ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.