Advertisement

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

06:00 PM Apr 25, 2024 | Team Udayavani |

ಲೋಕಸಭಾ ಚುನಾವಣಾ ಅಖಾಡ ಸಿದ್ದವಾಗಿದೆ. ಈಗಾಗಲೇ ಮೊದಲ ಹಂತದ ಮತದಾನ ನಡೆದಿದೆ. ಶುಕ್ರವಾರ(ಏ.26 ರಂದು) ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ ದೇಶದ 13 ರಾಜ್ಯಗಳ 89 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

Advertisement

ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕು. ನಾವೆಲ್ಲರೂ ತಪ್ಪದೇ ಮತದಾನ ಮಾಡಬೇಕು. ಆದರೆ ಭಾರತದಲ್ಲಿದ್ದು, ಇಲ್ಲಿನ ಮನರಂಜನಾ ಕ್ಷೇತ್ರದಲ್ಲಿ ಬೆಳೆದು ನಿಂತ ಕೆಲ ಸೆಲೆಬ್ರಿಟಿಗಳು ಮತದಾನ ಮಾಡುವಂತಿಲ್ಲ. ಯಾರು ಆ ಕಲಾವಿದರು ಮತ್ತು ಯಾಕೆ ಅವರು ದೇಶದಲ್ಲಿ ಮತದಾನ ಹಕ್ಕನ್ನು ಹೊಂದಿಲ್ಲ ಎನ್ನುವುದನ್ನು ನೋಡಿಕೊಂಡು ಬರೋಣ ಬನ್ನಿ..

ಆಲಿಯಾ ಭಟ್‌: ಬಾಲಿವುಡ್‌ ನಟಿ ಆಲಿಯಾ ಭಟ್‌ ಭಾರತದಲ್ಲಿ ಮತದಾನ ಮಾಡುವ ಹಕ್ಕನ್ನು ಹೊಂದಿಲ್ಲ. ಆಲಿಯಾ ತನ್ನ ತಾಯಿಯಿಂದ ಪಡೆದ ಬ್ರಿಟಿಷ್ ಪೌರತ್ವದ ಕಾರಣದಿಂದಾಗಿ ಭಾರತೀಯ ಚುನಾವಣೆಗಳಲ್ಲಿ ಮತ ಚಲಾಯಿಸಲು ಅರ್ಹರಾಗಿಲ್ಲ. ಅವರ ಸೋನಿ ರಜ್ದಾನ್ ಇಂಗ್ಲೆಂಡ್‌ ಅವರಾಗಿದ್ದು, ಆಲಿಯಾ ಅಲ್ಲೇ ಹುಟ್ಟಿದ ಕಾರಣದಿಂದ ಅವರ ಪೌರತ್ವ ಕೂಡ ಅದೇ ದೇಶದಾಗಿದೆ.

ಕ್ರತಿನಾ ಕೈಫ್:‌ ಬಾಲಿವುಡ್‌ ನ ಮತ್ತೊಬ್ಬ ಸ್ಟಾರ್‌ ನಟಿಯಾಗಿರುವ ಕತ್ರಿನಾ ಕೈಫ್‌ ಭಾರತದ ಪೌರತ್ವವನ್ನು ಹೊಂದಿಲ್ಲ. ಬ್ರಿಟಿಷ್ ಪೌರತ್ವವನ್ನು ಹೊಂದಿರುವ ಅವರು ಹಾಂಗ್‌ ಕಾಂಗ್‌ ನಲ್ಲಿ ಹುಟ್ಟಿದ್ದರು. ಆ ಬಳಿಕ ಲಂಡನ್‌ ಗೆ ತೆರಳಿ ಅಲ್ಲಿನ ಪೌರತ್ವವನ್ನು ಪಡೆದು, ನಟನಾ  ವೃತ್ತಿಗಾಗಿ ಭಾರತಕ್ಕೆ ಮರಳಿದರು. ಅವರ ಬ್ರಿಟಿಷ್‌ ಪೌರತ್ವದಿಂದಾಗಿ ಅವರು ಮತದಾನದ ಹಕ್ಕನ್ನು ಹೊಂದಿಲ್ಲ.

ಜಾಕ್ವೆಲಿನ್ ಫರ್ನಾಂಡಿಸ್: ಜಾಕ್ವೆಲಿನ್ ಇಂದು ಬಾಲಿವುಡ್‌ ನಲ್ಲಿ ದೊಡ್ಡ ಹೆಸರು ಮಾಡಿದ್ದರೂ ಅವರು ಶ್ರೀಲಂಕಾ ಮೂಲದವರಾಗಿದ್ದಾರೆ. ಶ್ರೀಲಂಕಾದಲ್ಲಿ ಬ್ಯೂಟಿ ಸ್ಪರ್ಧೆಯಲ್ಲಿ ಕಿರೀಟ ಪಡೆದ ಬಳಿಕ ಭಾರತದ ಸಿನಿರಂಗದಲ್ಲಿ ಗುರುತಿಸಿಕೊಂಡು ಖ್ಯಾತಿಯಾದ ಅವರು ಶ್ರೀಲಂಕಾ ಪೌರತ್ವವನ್ನು ಹೊಂದಿದ್ದಾರೆ. ಇವರ ತಂದೆ ಶ್ರೀಲಂಕಾದವರಾಗಿದ್ದು, ತಾಯಿ ಮಲೇಷಿಯಾದವರಾಗಿದ್ದಾರೆ. ಇವರು ಬಹ್ರೇನ್‌ನಲ್ಲಿ ಜನಿಸಿದರು. ಭಾರತವನ್ನು ತಮ್ಮ ವೃತ್ತಿಪರ ನೆಲೆಯನ್ನಾಗಿ ಜಾಕ್ವೆಲಿನ್ ಮಾಡಿಕೊಂಡಿದ್ದಾರೆ.

Advertisement

ಇಮ್ರಾನ್‌ ಖಾನ್:‌ ನಟನಾಗಿ ಬಾಲಿವುಡ್‌ ನಲ್ಲಿ ಗುರುತಿಸಿಕೊಂಡಿರುವ ಇಮ್ರಾನ್‌ ಖಾನ್‌ ಹುಟ್ಟಿದ್ದು ಅಮೆರಿಕಾದಲ್ಲಿ ಬೆಳೆದದ್ದು ವಿಸ್ಕಾನ್ಸಿನ್‌ನ ಮ್ಯಾಡಿಸನ್‌ನಲ್ಲಿ. ಸಾಫ್ಟ್‌ವೇರ್ ಇಂಜಿನಿಯರ್ ತಂದೆ ಮತ್ತು ಮನಶ್ಶಾಸ್ತ್ರಜ್ಞ ತಾಯಿಗೆ ಜನಿಸಿದ ಅವರು ತಮ್ಮ ಪೋಷಕರ ವಿಚ್ಛೇದನದ ನಂತರ ಭಾರತಕ್ಕೆ ತೆರಳಿದರು. ಅಮೀರ್‌ ಖಾನ್‌ ಇವರ ಚಿಕ್ಕಪ್ಪನಾಗಿದ್ದು, ಅವರ ಸಂಪರ್ಕದಿಂದ ಬಾಲಿವುಡ್‌ ಇಮ್ರಾನ್‌ ಖಾನ್‌ ಬಂದರು. ಆದರೆ  ಅಮೇರಿಕನ್ ಪೌರತ್ವದಿಂದ ಅವರು ದೇಶದಲ್ಲಿ ಮತದಾನ ಮಾಡುವ ಹಕ್ಕನ್ನು ಹೊಂದಿಲ್ಲ.

ಸನ್ನಿ ಲಿಯೋನ್:‌ ಬಾಲಿವುಡ್‌ನ ಮತ್ತೊಬ್ಬ ಖ್ಯಾತ ನಟಿ ಸನ್ನಿ ಲಿಯೋನ್‌ ಭಾರತದಲ್ಲಿ ಮತದಾನದ ಹಕ್ಕನ್ನು ಹೊಂದಿಲ್ಲ. ಕೆನಡಿಯನ್-ಅಮೇರಿಕನ್ ಪೌರತ್ವವನ್ನು ಲಿಯೋನ್‌ ಪಡೆದಿದ್ದಾರೆ.  ಕೆನಡಾದಲ್ಲಿ ಜನಿಸಿದ ಅವರು ಅಲ್ಲಿನ ಪೌರತ್ವವನ್ನು ಹೊಂದಿರುವ ಕಾರಣದಿಂದ ಮತದಾನದ ಹಕ್ಕನ್ನು ಹೊಂದಿಲ್ಲ.

ನೋರಾ ಫತೇಹಿ: ಬಿಟೌನ್‌ ನ ಹಾಟ್‌ ಬೆಡಗಿ ನೋರಾ ಫತೇಹಿ  ಕೆನಡಿಯನ್-ಮೊರೊಕನ್ ಮೂಲದವರಾಗಿದ್ದು, ಕೆನಡಾದ ಪೌರತ್ವವನ್ನು ಹೊಂದಿದ್ದಾರೆ. ಈ ಕಾರಣದಿಂದ ಅವರು ನಮ್ಮ ದೇಶದಲ್ಲಿ ಮತದಾನ ಮಾಡುವ ಹಕ್ಕನ್ನು ಹೊಂದಿಲ್ಲ.

ನರ್ಗೀಸ್ ಫಕ್ರಿ: ಅಮೆರಿಕಾ ಮೂಲದ ನಟಿ ಹಾಗೂ ರೂಪದರ್ಶಿಯಾಗಿರುವ ಇವರು ʼರಾಕ್‌ ಸ್ಟಾರ್‌ʼ ಸಿನಿಮಾದ ಮೂಲಕ ಬಾಲಿವುಡ್‌ ನಲ್ಲಿ ಛಾಪು ಮೂಡಿಸಿದ್ದಾರೆ. ಅಮೆರಿಕದ ಪೌರತ್ವ ಹೊಂದಿರುವ ಕಾರಣದಿಂದ ಇವರು ಇಲ್ಲಿ ಮತದಾನ ಮಾಡುವ ಹಕ್ಕನ್ನು ಹೊಂದಿಲ್ಲ.

ಕಲ್ಕಿ ಕೋಚ್ಲಿನ್: ಫ್ರೆಂಚ್‌ ಪ್ರಜೆಯಾಗಿರುವ ಕಲ್ಕಿ ಭಾರತ ಸಿನಿಮಾರಂಗದಲ್ಲಿ ತನ್ನ ನಟನೆಯ ಮೂಲಕ ಅಪಾರ ಮಂದಿಯ ಮನ ಗೆದ್ದಿದ್ದಾರೆ. ಭಾರತದಲ್ಲಿ ಹುಟ್ಟಿ ಬೆಳೆದರೂ ಅವರ ಪೋಷಕರ ಕಾರಣದಿಂದ ಅವರು ಫ್ರಾನ್ಸ್‌ ಪೌರತ್ವವನ್ನು ಹೊಂದಿದ್ದಾರೆ.  ಕೋಚ್ಲಿನ್ ಭಾರತದ ಆರೋವಿಲ್ಲೆಯಲ್ಲಿ ಬೆಳೆದಿದ್ದು ಲಂಡನ್ ವಿಶ್ವವಿದ್ಯಾಲಯದ ಗೋಲ್ಡ್ ಸ್ಮಿತ್ಸ್‌ನಿಂದ ಡ್ರಾಮಾ ಮತ್ತು ರಂಗಭೂಮಿಯಲ್ಲಿ ಶಿಕ್ಷಣವನ್ನು ಪಡೆದರು. ಫ್ರಾನ್ಸ್ ಪ್ರಜೆಯಾಗಿರುವ ಆಕೆಯ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ.

ಇಲಿಯಾನಾ ಡಿಕ್ರೂಜ್:  ಹಿಂದಿ ಸೇರಿದಂತೆ ಸೌತ್‌ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ಇಲಿಯಾನ ಭಾರತದಲ್ಲಿ ಮತದಾನ ಮಾಡುವ ಹಕ್ಕನ್ನು ಹೊಂದಿಲ್ಲ. ಇಲಿಯಾನಾ ಪೋರ್ಚುಗೀಸ್ ಮೂಲದರಾಗಿದ್ದು ,ಪೋರ್ಚುಗೀಸ್ ಪಾಸ್‌ಪೋರ್ಟ್ ಹೊಂದಿದ್ದಾರೆ. 2014 ರಲ್ಲಿ ಪೋರ್ಚುಗೀಸ್ ರಾಷ್ಟ್ರೀಯತೆಯನ್ನು ಪಡೆದುಕೊಂಡರು. ಇವರ ಪೋರ್ಚುಗೀಸ್ ಪೌರತ್ವದಿಂದ ಭಾರತೀಯ ಚುನಾವಣೆಗಳಲ್ಲಿ ಅವರು ಮತ ಚಲಾಯಿಸಲು ಹಕ್ಕನ್ನು ಹೊಂದಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next