ಪಾಯಿಂಟ್!
Advertisement
ವಿಲನ್ ಪಾತ್ರದ ಮೂಲಕ ಸಿನಿ ಪಯಣ ಆರಂಭ:ಭಾರತೀಯ ಸಿನಿಮಾರಂಗದ ನಟ, ನಿರ್ಮಾಪಕ ಮತ್ತು ರಾಜಕಾರಣಿಯಾಗಿದ್ದ ವಿನೋದ್ ಖನ್ನಾ. ತಮ್ಮ ಭಾವಪೂರ್ಣ ಅಭಿನಯಕ್ಕಾಗಿ ಎರಡು ಫಿಲ್ಮ್ ಫೇರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. 1968ರಲ್ಲಿ ಅಡ್ರುಥಿ ಸುಬ್ಬಾ ರಾವ್ ನಿರ್ದೇಶನದ Man ka Meet ಸಿನಿಮಾದಲ್ಲಿ ಖನ್ನಾ ಆ್ಯಂಗ್ರಿ ಯಂಗ್ ಮ್ಯಾನ್ ವಿಲನ್ ಪಾತ್ರದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದರು. ಈ ಚಿತ್ರದಲ್ಲಿ ಸುನೀಲ್ ದತ್ ಹೀರೋ ಆಗಿದ್ದರು. ನಂತರ 1970ರಲ್ಲಿ ತೆರೆಕಂಡಿದ್ದ ಆನ್ ಮಿಲೋ ಸಜ್ನಾ ಚಿತ್ರದಲ್ಲಿ ರಾಜೇಶ್ ಖನ್ನಾ ಜತೆಗೆ ವಿನೋದ್ ಖನ್ನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 1971ರ ರಾಜ್ ಖೋಸ್ಲಾ ನಿರ್ದೇಶನದ “ಮೇರಾ ಗಾಂವ್, ಮೇರಾ ದೇಶ್” ಸಿನಿಮಾದಲ್ಲಿ ಡೆಡ್ಲಿ ಡಕಾಯಿತ ಜಬ್ಬಾರ್ ಸಿಂಗ್ ಪಾತ್ರದಲ್ಲಿ ಖನ್ನಾ ಪ್ರೇಕ್ಷಕರ ಮನಗೆದ್ದಿದ್ದರು. ನಂತರ ದೇಶ್, ಕುಛ್ ದಾಘೇ, ರಾಜ್ ಪುತ್ ಸಿನಿಮಾದ ಮೂಲಕ ಜನಪ್ರಿಯರಾಗಿದ್ದರು. ದ ಬರ್ನಿಂಗ್ ಟ್ರೈನ್ (1980), ಏಕ್ ಔರ್ ಏಕ್ ಗ್ಯಾರಾ(1981) ಸಿನಿಮಾದಲ್ಲಿ ಖನ್ನಾ ಹೀರೋ ಆಗಿದ್ದರು. ಅದೇ ರೀತಿ 1974ರ ಹಾತ್ ಕಿ ಸಫಾಯಿ, ಮುಕ್ ದ್ದಾರ್ ಕಾ ಸಿಕಂದರ್ (1978), ಅಮರ್ ಅಕ್ಬರ್ ಅಂತೋನಿ (1977), ಹೀರಾ ಫೇರಿ (1976), ಖೂನ್ ಪಸಿನಾ(1977), ಖುರ್ಬಾನಿ (1980) ಚಿತ್ರಗಳಲ್ಲಿ ಖನ್ನಾ ಹೀರೋ ಆಗಿ ಮಿಂಚಿದ್ದರು.
ಅಂದು ಅಮಿತಾಬ್ ಮತ್ತು ಶಶಿ ಕಪೂರ್ ತೆರೆಮೇಲೆ ಹೆಸರುವಾಸಿ ಜೋಡಿಯಾಗಿತ್ತು. ಏತನ್ಮಧ್ಯೆ ವಿನೋದ್ ಖನ್ನಾ ಕೂಡಾ ಬಚ್ಚನ್ ಗೆ ಉತ್ತಮ ಜೋಡಿ ಎಂಬುದಾಗಿ ಶಶಿ ಕಪೂರ್ ಖುದ್ದಾಗಿ ನಿರ್ದೇಶಕರಿಗೆ ಆಫರ್ ಕೊಟ್ಟಿದ್ದರಂತೆ. ದೀವಾರ್ (1972) ಸಿನಿಮಾದಲ್ಲಿಯೂ ಬಚ್ಚನ್ ಗೆ ಫೈಟ್ ಸೀನ್ ನಲ್ಲಿ ಖಾನ್ ಉತ್ತಮ ಜೋಡಿಯಾಗುತ್ತಾರೆ ಎಂದು ಶಶಿ ಕಪೂರ್ ಹೇಳಿದ್ದರು. ಆದರೆ ದೀವಾರ್ ನಲ್ಲಿ ಅವಕಾಶ ಸಿಗಲಿಲ್ಲವಾದರೂ ನಂತರ ಅಮರ್ ಅಕ್ಬರ್ ಅಂತೋನಿ ಸಿನಿಮಾದಲ್ಲಿ ಮೂವರು ಸ್ಟಾರ್ ನಟರು ಒಟ್ಟಿಗೆ ನಟಿಸಿರುವುದು ಹೆಗ್ಗಳಿಕೆಯ ವಿಚಾರ.
Related Articles
ಬಾಲಿವುಡ್ ನಲ್ಲಿ ಸ್ಟಾರ್ ನಟನಾಗಿ ಮೆರೆಯುತ್ತಿದ್ದ ಸಂದರ್ಭದಲ್ಲಿಯೇ ತಾನು ನಟನೆಯಿಂದ ನಿವೃತ್ತಿ ಹೊಂದುತ್ತಿರುವುದಾಗಿ ಘೋಷಿಸುವ ಮೂಲಕ ಇಡೀ ಚಿತ್ರರಂಗಕ್ಕೆ ಶಾಕ್ ನೀಡಿದ್ದು ವಿನೋದ್ ಖನ್ನಾ. ಆಧ್ಯಾತ್ಮಿಕದ ಕಡೆ ವಾಲಿದ್ದ ವಿನೋದ್ ಖನ್ನಾ ಓಶೋ ರಜನೀಶ್ ಅವರ ಅನುಯಾಯಿಯಾಗಿಬಿಟ್ಟಿದ್ದರು. ಎಲ್ಲರಿಗಿಂತ ಹೆಚ್ಚಾಗಿ ಪತ್ನಿ ಗೀತಾಂಜಲಿಗೂ ಆಘಾತವಾಗಿಬಿಟ್ಟಿತ್ತು. ಬಾಲ್ಯದ ಗೆಳತಿಯಾಗಿದ್ದ ಗೀತಾಂಜಲಿಯನ್ನು ಇಷ್ಟಪಟ್ಟು ವಿನೋಧ್ ಖನ್ನಾ ಮದುವೆಯಾಗಿದ್ದರು. ಜತೆಗೆ ಇಬ್ಬರು ಮುದ್ದಿನ ಮಕ್ಕಳನ್ನು ಬಿಟ್ಟು ಖನ್ನಾ ಸನ್ಯಾಸಿಯಾಗಲು ಹೊರಟು ಬಿಟ್ಟಿರುವುದು ಯಾಕೆ ಎಂಬುದು ಅವರಿಗೂ ನಿಗೂಢವಾಗಿತ್ತಂತೆ!
Advertisement
ಆರಂಭದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದ ಖನ್ನಾ ವಾರಾಂತ್ಯದಲ್ಲಿ ಪುಣೆಗೆ ತೆರಳಿ ರಜನೀಶ್ ಜತೆಗೆ ಇರುತ್ತಿದ್ದರು. ರಜನೀಶ್ ಜತೆಗಿನ ಅತೀಯಾದ ಒಡನಾಟದ ಗೀಳಿನಿಂದ ನಿರ್ದೇಶಕರು ಕಳವಳ ವ್ಯಕ್ತಪಡಿಸುತ್ತಿದ್ದರಂತೆ. ಕೊನೆಗೆ ಓಶೋ ರಜನೀಶ್ ಆಶ್ರಮದಲ್ಲಿನ ವಿವಾದದಿಂದಾಗಿ ಓಶೋ ಪುಣೆಯಿಂದ ಅಮೆರಿಕದ ಓರೆಗಾಂವ್ ಗೆ ತೆರಳಲು ನಿರ್ಧರಿಸಿದ್ದರು. ಜತೆಗೆ ತನ್ನ ಪ್ರೀತಿಯ ಅನುಯಾಯಿ ಖನ್ನಾ ಕೂಡಾ ಅಮೆರಿಕಕ್ಕೆ ಬರಬೇಕು ಎಂದು ಫರ್ಮಾನು ಹೊರಡಿಸಿದ್ದರು. ಖನ್ನಾ ಕೂಡಾ ಅದನ್ನು ಶಿರಸಾ ಪಾಲಿಸಿಬಿಟ್ಟಿದ್ದರು.
ಅಮೆರಿಕದ ರಜನೀಶ್ ಪುರಂ(ಓರೆಗಾಂವ್)ನಲ್ಲಿ ವಿನೋದ್ ಖನ್ನಾ ತನ್ನ ಕೆಲವು ಭಾರತೀಯ ಗೆಳೆಯರ ಜತೆ ಸೇರಿ ಬರೋಬ್ಬರಿ ಐದು ವರ್ಷಗಳ ಕಾಲ ಸನ್ಯಾಸಿಯಾಗಿ ಆಶ್ರಮದಲ್ಲಿ ಇದ್ದಿದ್ದರು. ಅಲ್ಲಿ (ಪುಣೆ ಸೇರಿದಂತೆ) ಗಾರ್ಡನ್ ಕೆಲಸ ಮಾಡುತ್ತ, ಶೌಚಾಲಯ ಸ್ವಚ್ಚಗೊಳಿಸುವ, ಅಡುಗೆ ಕೆಲಸ ಮಾಡುತ್ತ ಕಾಲ ಕಳೆದಿದ್ದರು. ನಂತರ ಓಶೋ ರಜನೀಶ್ ಅವರು ಪುಣೆಯಲ್ಲಿರುವ ಆಶ್ರಮವನ್ನು ನೀನೇ ಮುನ್ನಡೆಸಿಕೊಂಡು ಹೋಗಬೇಕೆಂಬ ಬೇಡಿಕೆಯನ್ನು ಖನ್ನಾ ಮುಂದಿಟ್ಟಿದ್ದರು. ಆದರೆ ಇದು ತನ್ನಿಂದ ಅಸಾಧ್ಯವಾದ ಕೆಲಸ ಎಂದು ಹೇಳಿದ್ದರು. ನಾನು ಅಮೆರಿಕದಲ್ಲಿರುವ ನನ್ನ ಗುರುವನ್ನು ಬಿಟ್ಟು ಮತ್ತೆ ಬಾಲಿವುಡ್ ಗೆ ಮರಳುತ್ತಿದ್ದೇನೆ. ಇದೊಂದು ಕಠಿಣವಾದ ನಿರ್ಧಾರವಾಗಿದೆ ಎಂದು ಖನ್ನಾ ಪ್ರಕಟಣೆ ನೀಡಿದ್ದರು!
ಅಮೆರಿಕದ ಓರೆಗಾಂವ್ ನ ರಜನೀಶ್ ಪುರಂನಲ್ಲಿ ಖನ್ನಾ ಸನ್ಯಾಸಿಯಾಗಿದ್ದರಿಂದ ಸೂಪರ್ ಸ್ಟಾರ್ ಪಟ್ಟದಿಂದ ವಂಚಿತರಾಗುವಂತಾಗಿತ್ತು. ಒಂದು ವೇಳೆ ವಿನೋದ್ ಖನ್ನಾ ಬಾಲಿವುಡ್ ನಲ್ಲಿ ಉಳಿದುಬಿಟ್ಟಿದ್ದರೆ ಅಮಿತಾಬ್ ಬಚ್ಚನ್ ಸೂಪರ್ ಸ್ಟಾರ್ ಪಟ್ಟಕ್ಕೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿದ್ದರು. ಆದರೆ ಖನ್ನಾ ಗೈರುಹಾಜರಿಯಿಂದ ಅಮಿತಾಬ್ ಸೂಪರ್ ಸ್ಟಾರ್ ಪಟ್ಟಕ್ಕೆ ಯಾವುದೇ ತೊಡಕು ಉಂಟಾಗಲಿಲ್ಲ.
ಪತ್ನಿ ಡೈವೋರ್ಸ್, ನಟನೆಯಿಂದ ರಾಜಕೀಯಕ್ಕೆ:1985ರಲ್ಲಿ ವಿನೋದ್ ಖನ್ನಾ ಮತ್ತು ಗೀತಾಂಜಲಿ ವಿಚ್ಚೇದನ ಪಡೆದುಕೊಂಡುಬಿಟ್ಟಿದ್ದರು. ಅಮೆರಿಕದಿಂದ ಖನ್ನಾ ಭಾರತಕ್ಕೆ ವಾಪಸ್ ಆದ ಮೇಲೆ ಕವಿತಾ ದಫ್ತರಿಯನ್ನು ವಿವಾಹವಾಗಿದ್ದರು. ಖನ್ನಾ ಮಕ್ಕಳಾದ ರಾಹುಲ್ ಹಾಗೂ ಅಕ್ಷಯೆ ಬಾಲಿವುಡ್ ನಟರಾಗಿ ಪ್ರಸಿದ್ದಿಯಾಗಿದ್ದರು. 1997ರಲ್ಲಿ ಖನ್ನಾ ಭಾರತೀಯ ಜನತಾ ಪಕ್ಷ ಸೇರ್ಪಡೆಗೊಂಡಿದ್ದರು. ನಂತರ ಪಂಜಾಬ್ ನ ಗುರುದಾಸ್ ಪುರ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. 1999ರಲ್ಲಿ ಲೋಕಸಭೆಗೆ ಪುನರಾಯ್ಕೆಗೊಂಡಿದ್ದು ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾಗಿದ್ದರು. ಆರು ತಿಂಗಳ ಬಳಿಕ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವರಾಗಿ ನೇಮಕಗೊಂಡಿದ್ದರು. 2004ರಲ್ಲಿಯೂ ಚುನಾವಣೆಯಲ್ಲಿ ಜಯಗಳಿಸಿದ್ದರು. ಆದರೆ 2009ರ ಸಾರ್ವತ್ರಿಕ ಚುನಾವಣೆಯಲ್ಲಿ ಖನ್ನಾ ಸೋತಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಿದ್ದರು. ಹೀಗೆ ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾದ ಹೆಗ್ಗಳಿಕೆ ವಿನೋದ್ ಖನ್ನಾ ಅವರದ್ದು. ಮೂತ್ರಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಖನ್ನಾ 2017ರ ಏಪ್ರಿಲ್ 27ರಂದು ನಿಧನರಾಗಿದ್ದರು. ವಿಲನ್ ಆಗಿ, ಸನ್ಯಾಸಿಯಾಗಿ, ಸಿಂಥಾಲ್ ಸಾಬೂನಿನ ಜಾಹೀರಾತಿನಲ್ಲಿ ಮಿಂಚಿದ್ದ, ರಾಜಕಾರಣಿಯಾಗಿ ಜನಾನುರಾಗಿದ್ದ ವಿನೋದ್ ಖನ್ನಾ ನೆನಪು ಮಾತ್ರ ಸದಾ ನಮ್ಮೊಂದಿಗೆ ಇರಲಿದೆ… *ನಾಗೇಂದ್ರ ತ್ರಾಸಿ