ಬೆಂಗಳೂರು : ಯುವತಿಯ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಕೆಲಸ ಕಳೆದುಕೊಂಡು ಬೀದಿಗೆ ಬಂದಿರುವ ಜೊಮ್ಯಾಟೊ ಡೆಲಿವರಿ ಬಾಯ್ ಕಾಮರಾಜ್ ಪರ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಮಾಡದ ತಪ್ಪಿಗೆ ಜೈಲು ಪಾಲಾಗಿ, ಉದ್ಯೋಗ ಕಳೆದುಕೊಂಡು ಅಕ್ಷರಶಃ ಬೀದಿಗೆ ಬಂದಿರುವ ಕಾಮರಾಜ್ ಅವರನ್ನು ಬೆಂಬಲಿಸಿ ಟ್ವಿಟರ್ ನಲ್ಲಿ #MenToo ಅಭಿಯಾನ ಪ್ರಾರಂಭವಾಗಿದೆ. ಸುಳ್ಳು ಆರೋಪಗಳಿಂದ ಸಂಕಷ್ಟಕ್ಕೆ ಸಿಲುಕಿದ ಹಲವಾರು ವ್ಯಕ್ತಿಗಳ ಉದಾಹರಣೆ ನೀಡುವ ಪೋಸ್ಟ್ ಗಳು ಟ್ವಿಟರ್ ನಲ್ಲಿ ಟ್ರೆಂಡಿಂಗ್ ನಲ್ಲಿವೆ.
ಬೆಂಗಳೂರಿನ ಟ್ರಾಫಿಕ್ ನಡುವೆಯೂ ಕೇವಲ 15 ನಿಮಿಷ ತಡವಾಗಿ ಆಹಾರ ತಲುಪಿಸಿದ್ದಾನೆ. ಯುವತಿಯೇ ಈತನ ಮೇಲೆ ಹಲ್ಲೆಗೆ ಮುಂದಾಗಿ, ವಿಡಿಯೋದಲ್ಲಿ ಸುಳ್ಳು ಹೇಳಿದ್ದಾಳೆ. ಅಮಾಯಕನ ಮೇಲೆ ಆಕೆಯ ದೌರ್ಜನ್ಯ ಖಂಡನಾರ್ಹ. ಈ ಘಟನೆ ನಂತರ ಆಕೆ ಇನ್‍ಸ್ಟಾಗ್ರಾಂನಲ್ಲಿ 50 ಸಾವಿರ ಫಾಲೋವರ್ಸ್ ಹೆಚ್ಚಿಸಿಕೊಂಡಿದ್ದಾಳೆ. ಆದರೆ, ಹೊಟ್ಟೆ ಪಾಡಿಗಾಗಿ ದುಡಿಯುತ್ತಿದ್ದ ಕಾಮರಾಜ್ ಕೆಲಸ ಕಳೆದುಕೊಂಡಿದ್ದಾನೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಕೂಡ ಘಟನೆ ಕುರಿತು ಪ್ರತಿಕ್ರಿಯಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವರದಿಗಳಲ್ಲಿ ಸತ್ಯಾಂಶದ ಬಗ್ಗೆ ಗಮನ ಹರಿಸಿ. ಒಂದು ವೇಳೆ ಡೆಲಿವರಿ ಬಾಯ್ ಕಾಮರಾಜ್ ನಿರಪರಾಧಿಯಾಗಿದ್ದರೆ, ಆ ಯುವತಿಗೆ ದಂಡ ಹಾಕಿ ಎಂದು ‘ಜೊಮ್ಯಾಟೊ’ಗೆ ಆಗ್ರಹಿಸಿದ್ದಾರೆ. ಇದು ಅಮಾನವೀಯ, ನಾಚಿಕೆಗೇಡು ಮತ್ತು ಹೃದಯ ವಿದ್ರಾವಕ ಘಟನೆ, ನಾನು ಹೇಗೆ ಸಹಾಯ ಮಾಡಬಹುದೆಂದು ದಯವಿಟ್ಟು ನನಗೆ ತಿಳಿಸಿ ಎಂದು ಟ್ವೀಟ್ ಮಾಡಿದ್ದಾರೆ.
Related Articles
ಘಟನೆ ಹಿನ್ನೆಲೆ : ಗ್ರಾಹಕಿ ಮೇಲೆ ಹಲ್ಲೆ ನಡೆಸಿದ್ದ ಆರೋಪ ಕಾಮರಾಜ್ ಮೇಲೆ ಕೇಳಿ ಬಂದಿತ್ತು. ಪರಿಣಾಮ ಕೆಲಸ ಕಳೆದುಕೊಳ್ಳಬೇಕಾಯಿತು. ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನು ಪಡೆದಿರುವ ಕಾಮರಾಜ್, ‘ಮಹಿಳೆಯೇ ತಮ್ಮ ಉಂಗುರದಿಂದ ಮುಖಕ್ಕೆ ಹೊಡೆದು ಕೊಂಡಿದ್ದರು’ಹೇಳಿದ್ದಾರೆ.
‘ಸಂಚಾರ ದಟ್ಟಣೆಯಲ್ಲೂ ಕಷ್ಟಪಟ್ಟು ಯುವತಿಯ ಮನೆಗೆ ಆಹಾರ ತಲುಪಿಸಿದ್ದೆ. ಹಣ ನೀಡಬಹುದೆಂದು ಬಾಗಿಲಲ್ಲಿ ಕಾಯುತ್ತಿದ್ದೆ. ಆಹಾರ ನೀಡಿದ್ದು ತಡವಾಯಿತೆಂದು ಯುವತಿ ಜೋರಾಗಿ ಹೇಳಿದ್ದರು. ದಟ್ಟಣೆ ಹಾಗೂ ರಸ್ತೆಯಲ್ಲಿ ಕಾಮಗಾರಿಗಳು ನಡೆಯುತ್ತಿದ್ದರಿಂದ ತಡವಾಯಿತೆಂದು ಕ್ಷಮೆ ಯಾಚಿಸಿದ್ದೆ’ ಎಂದು ಕಾಮರಾಜ್ ವಿಡಿಯೊದಲ್ಲಿ ಹೇಳಿದ್ದಾರೆ.
‘ಆಹಾರಕ್ಕೆ ಹಣ ನೀಡಲು ಒಪ್ಪದ ಯುವತಿ, ಸಹಾಯವಾಣಿಗೆ ಕರೆ ಮಾಡಿದ್ದರು. ಆಹಾರ ವಾಪಸು ನೀಡುವಂತೆ ಸಹಾಯವಾಣಿ ಸಿಬ್ಬಂದಿ ಯುವತಿಗೆ ಹೇಳಿದ್ದರು. ಹೀಗಾಗಿ, ಆಹಾರದ ಪೊಟ್ಟಣವನ್ನು ಮರಳಿಸುವಂತೆ ಕೋರಿದ್ದೆ. ಅದಕ್ಕೂ ಒಪ್ಪದ ಯುವತಿ, ಬೈಯಲಾರಂಭಿಸಿದ್ದರು.’‘ಸ್ಥಳದಿಂದ ಮರಳಿ ಹೊರಟಿದ್ದೆ. ಯುವತಿಯೇ ನನ್ನ ಮೇಲೆ ಚಪ್ಪಲಿ ಎಸೆದರು. ತಮ್ಮ ಕೈಯಿಂದ ಹೊಡೆಯಲು ಬಂದರು. ನಾನು ತಪ್ಪಿಸಿಕೊಂಡೆ. ನಂತರ, ಆಕೆಯ ಕೈಯಲ್ಲಿದ್ದ ಉಂಗುರವೇ ಅವರ ಮುಖಕ್ಕೆ ತಾಗಿತ್ತು. ಅವರ ಮುಖದಲ್ಲಿ ರಕ್ತ ಬರಲಾರಂಭಿಸಿತ್ತು. ಭಯಗೊಂಡು ನಾನು ಅಲ್ಲಿಂದ ಹೊರಟೆ’ಎಂದೂ ಅವರು ವಿವರಿಸಿದ್ದಾರೆ. ಘಟನೆ ನಡೆದ ದಿನ ವಿಡಿಯೋದಲ್ಲಿ ಮಾತಾಡಿದ್ದ ಯುವತಿ, ಡೆಲಿವರಿ ಬಾಯ್‍ನಿಂದಲೇ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದರು.