ಮುಂಬಯಿ: ಹೃದಯಾಘಾತದಿಂದ ಬಾಲಿವುಡ್ ನ ಹಿರಿಯ ನಟ ಸತೀಶ್ ಕೌಶಿಕ್ (66) ನಿಧನರಾಗಿದ್ದಾರೆ.
ಬಾಲಿವುಡ್ ನಲ್ಲಿ ಅನೇಕ ಹಾಸ್ಯ ಪಾತ್ರಗಳಲ್ಲಿ ಮಿಂಚಿ, ನಿರ್ದೇಶಕ, ನಿರ್ಮಾಪಕರಾಗಿಯೂ ಖ್ಯಾತಿಗಳಿಸಿದ್ದ ಸತೀಶ್ ಕೌಶಿಕ್ ಬುಧವಾರ ನಿಧನರಾಗಿದ್ದಾರೆ.ಬುಧವಾರ ಗುರುಗ್ರಾಮ್ ನಲ್ಲಿ ಆಪ್ತರೊಬ್ಬರನ್ನು ಭೇಟಿಯಾಗಲು ತೆರಳುತ್ತಿದ್ದಾಗ ಅವರ ಆರೋಗ್ಯದಲ್ಲಿ ಏರುಪೇರಾಗಿ ಹೃದಯಾಘಾತವಾಗಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ತಿಳಿಸಿದೆ.
“ಜೀವನದ ಅಂತಿಮ ಸತ್ಯ ಸಾವು ಎಂಬುದು ನನಗೆ ಗೊತ್ತು. ನಾನು ನನ್ನ ಸ್ನೇಹಿತನ ಸಾವಿನ ವಿಷಯವನ್ನು ಬರೆಯುತ್ತೇನೆಂದು ಯಾವತ್ತೂ ಊಹಿಸಿಯೂ ಇರಲಿಲ್ಲ. 45 ವರ್ಷದ ಈ ಸ್ನೇಹತಕ್ಕೆ ಇಂಥ ಹಠಾತ್ ಪೂರ್ಣ ವಿರಾಮ ಬಿದ್ದಿದೆ. ನೀವು ಇಲ್ಲದೆ ಜೀವನ ಮೊದಲಿನಂತೆ ಇರುವುದಿಲ್ಲ ಸತೀಶ್ ಓಂ ಶಾಂತಿ” ಎಂದು ಸ್ನೇಹಿತ ಅನುಪಮ್ ಖೇರ್ ಬರೆದುಕೊಂಡಿದ್ದಾರೆ.
ಏಪ್ರಿಲ್, 13, 1956 ರಲ್ಲಿ ಹರ್ಯಾಣದಲ್ಲಿ ಜನಿಸಿದ, ಸತೀಶ್ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಮತ್ತು ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಹಳೆಯ ವಿದ್ಯಾರ್ಥಿ ಮತ್ತು ರಂಗಭೂಮಿಯ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
Related Articles
ʼಮಿಸ್ಟರ್ ಇಂಡಿಯಾʼ, ʼದೀವಾನಾ ಮಸ್ತಾನಾʼ, ʼಬ್ರೀಕ್ ಲೇನ್ʼ,ʼಸಾಜನ್ ಚಲೇ ಸಸುರಲ್ʼ ಮುಂತಾದ ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇದಲ್ಲದೇ ಅವರು ನಿರ್ದೇಶನ ಮಾಡಿದ ಜನಪ್ರಿಯ ಸಿನಿಮಾಗಳತ್ತ ಗಮನ ಹರಿಸಿದರೆ, ʼರೂಪ್ ಕಿ ರಾಣಿ ಚೋರೋನ್ ಕಾ ರಾಜಾʼ, ʼಪ್ರೇಮ್ʼ, ʼಹಮ್ ಆಪ್ಕೆ ದಿಲ್ ಮೇ ರೆಹತೇ ಹೈʼ ,ʼತೇರೆ ನಾಮ್ʼ ಮುಂತಾದ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.
ಇತ್ತೀಚೆಗೆ ( ಮಾ.7 ರಂದು) ಸತೀಶ್ ಜಾವೇದ್ ಅಖ್ತರ್ ಅವರ ಹೋಳಿ ಪಾರ್ಟಿಯಲ್ಲಿ ಭಾಗಿಯಾಗಿದ್ದರು.
ಸತೀಶ್ ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ.
ನಟನ ನಿಧನಕ್ಕೆ ಬಾಲಿವುಡ್ ಸಿನಿರಂಗ ಕಂಬನಿ ಮಿಡಿದಿದೆ.