Advertisement

ಅಪಾಯದಲ್ಲಿ ಉದ್ಯಾವರ ಬೊಳ್ಜೆ –ಮಣಿಪುರ ಸಂಪರ್ಕ ಸೇತುವೆ

02:05 AM Dec 26, 2018 | Karthik A |

ಕಟಪಾಡಿ: ಉದ್ಯಾವರ ಬೊಳ್ಜೆ-ಮಣಿಪುರವನ್ನು ಸಂಪರ್ಕಿಸುವ ಪಾಪನಾಶಿನಿ ಹೊಳೆಗೆ ಅಡ್ಡಲಾಗಿ ನಿರ್ಮಿಸಿರುವ ಕಾಲು ಸೇತುವೆಯೊಂದು ಬಳಕೆಗೆ ಅಪಾಯಕಾರಿಯಾಗಿ ಪರಿಣಮಿಸಿದ್ದು ಯಾವುದೇ ಕ್ಷಣದಲ್ಲೂ ಕುಸಿಯುವ ಸ್ಥಿತಿಯಲ್ಲಿದೆ. ಈ ಬಾರಿಯ ಮಳೆಗಾಲದಲ್ಲಿ ಇದಕ್ಕೆ ತೀವ್ರ ಹಾನಿ ಉಂಟಾಗಿತ್ತು. ನೆರೆ ನೀರಿನ ರಭಸಕ್ಕೆ ಸೇತುವೆಯ ಇಕ್ಕೆಲಗಳಲ್ಲಿ ಸುರಕ್ಷತೆಗಾಗಿ ಅಳವಡಿಸಲಾಗಿದ್ದ ಹಿಡಿಕೆಗಳು ಬುಡ ಸಮೇತ ಕಿತ್ತು ಬಂದು ಅಲ್ಲಲ್ಲಿ ನೇತಾಡುತ್ತಿವೆ.

Advertisement

ಮಳೆಗಾಲದಲ್ಲಿ ಮತ್ತಷ್ಟು ಸಂಕಷ್ಟ 
ಈ ಭಾಗದಲ್ಲಿ ಉಪ್ಪು ನೀರಿನ ತಡೆ ಮತ್ತು ಕೃಷಿ ಚಟುವಟಿಕೆಗೆ ಸಾಕಷ್ಟು ಪ್ರಯೋಜನಕಾರಿಯಾಗಿರುವ ಈ ಸೇತುವೆ ಉದ್ಯಾವರ ಮತ್ತು ಮಣಿಪುರ ಗ್ರಾಮವನ್ನು ಸಂಪರ್ಕಿಸುತ್ತದೆ. ಇದೀಗ ಶಿಥಿಲಗೊಂಡಿರುವ ಸೇತುವೆಯನ್ನು ಸರಿಪಡಿಸದಿದ್ದಲ್ಲಿ ಮುಂದಿನ ಮಳೆಗಾಲದಲ್ಲೂ ಸಂಕಷ್ಟವನ್ನು ಈ ಭಾಗದ ಜನತೆ ಎದುರಿಸಬೇಕಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಇಲ್ಲಿ ಕೃಷಿಕರು ಹೆಚ್ಚಾಗಿದ್ದು ಅಂಗನವಾಡಿಯೊಂದು ಈ ಭಾಗದಲ್ಲಿ ಕಾರ್ಯಾಚರಿಸುತ್ತಿದೆ. ಈ ಸೇತುವೆಯನ್ನೇ ಸಂಪರ್ಕಕ್ಕಾಗಿ ಅನಿವಾರ್ಯವಾಗಿ ಬಳಸುತ್ತಿದ್ದಾರೆೆ.

ಶಿಥಿಲ ಸೇತುವೆ ವಿಸ್ತರಿಸಿ 
ಈಗ ಶಿಥಿಲಗೊಂಡಿರುವ ಹಳೆಯದಾದ ಸೇತುವೆಯ ವಿಸ್ತರಣೆ ಮಾಡಿ ಸೂಕ್ತ ಸುರಕ್ಷತೆ ಕಲ್ಪಿಸಬೇಕು ಎಂದು ಸ್ಥಳೀಯ ಮಣಿಪುರ ರತ್ನಾಕರ್‌ ಸಾಲ್ಯಾನ್‌ ಬೇಡಿಕೆಯನ್ನಿರಿಸಿದ್ದಾರೆ.

ದೇವೇಗೌಡರಿಂದ ಉದ್ಘಾಟನೆ
ಈ ಸೇತುವೆಯು ಉಪ್ಪು ನೀರಿನ ತಡೆ ಮತ್ತು ಕಾಲುಸಂಕವಾಗಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಲ್ಪಟ್ಟಿದ್ದು 1986ರಲ್ಲಿ ಅಂದಿನ ಲೋಕೋಪಯೋಗಿ ಮತ್ತು ನೀರಾವರಿ ಸಚಿವರಾಗಿದ್ದ 
– ಎಚ್‌.ಡಿ. ದೇವೇಗೌಡ (ಮಾಜಿ ಪ್ರಧಾನಿ) ಉದ್ಘಾಟಿಸಿದ್ದರು.

ಶಿಥಿಲವಾಗಿಲ್ಲ
ಈ ಸೇತುವೆ ದುರಸ್ತಿ ಬಗ್ಗೆ ಎಸ್ಟಿಮೇಟ್‌ ಸಿದ್ಧಪಡಿಸಲಾಗಿದೆ. ಜನವರಿಯೊಳಗಾಗಿ ಸುರಕ್ಷತಾ ಕಾಮಗಾರಿ ಕೈಗೊಳ್ಳಲಾಗುತ್ತದೆ. ಕಾಲು ಸಂಕ ಶಿಥಿಲವಾಗಿಲ್ಲ. ಪ್ರಕೃತಿ ವಿಕೋಪದಡಿ 4 ಲ.ರೂ. ಅನುದಾನ ಬಳಸಿಕೊಂಡು ಹ್ಯಾಂಡಲ್ಸ್‌ ಅಳವಡಿಸಿ ಸುರಕ್ಷತಾ ಕ್ರಮ ಕೈಗೊಳ್ಳಲಾಗುವುದು.
– ದೇವಾನಂದ್‌, ಸಹಾಯಕ ಎಂಜಿನಿಯರ್‌, ಸಣ್ಣ ನೀರಾವರಿ ಇಲಾಖೆ

Advertisement

ಪರಿಶೀಲನೆ 
ಮಳೆಗಾಲದ ನೆರೆಯಿಂದ ಸೇತುವೆಗೆ ಭಾರೀ ಹಾನಿಗೀಡಾಗಿದ್ದು, ಸ್ಥಳೀಯ ವಾರ್ಡ್‌ ಸದಸ್ಯರ ಜತೆ ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಸೂಕ್ತ ಕ್ರಮಕ್ಕಾಗಿ ಸಣ್ಣ ನೀರಾವರಿ ಇಲಾಖೆಯ ಗಮನಕ್ಕೆ ವರದಿ ಕಳುಹಿಸಿಕೊಡಲಾಗಿದೆ. ನೆರೆಯ ಮಣಿಪುರ ಗ್ರಾಮದ ಅಧಿಕಾರಿಯೂ ಈ ಬಗ್ಗೆ ವರದಿಯನ್ನು ಇಲಾಖೆಗೆ ಕಳುಹಿಸಿ ಜನರಿಗಾಗುವ ಸಮಸ್ಯೆ ಬಗ್ಗೆ ಗಮನಕ್ಕೆ ತಂದಿದ್ದಾರೆ.
– ರಮಾನಂದ ಪುರಾಣಿಕ್‌, ಉದ್ಯಾವರ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next