ಲಾ ಪಾಝ್: ಕಳೆದ ತಿಂಗಳು ಬೋಲಿವಿಯಾದಲ್ಲಿ ನಡೆದಿದ್ದ ವಿವಾದಾತ್ಮಕ ಅಧ್ಯಕ್ಷೀಯ ಚುನಾವಣೆಯಲ್ಲಿ ಇವೋ ಮೊರಾಲೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು, ಬಳಿಕ ಭಾರೀ ಗಲಭೆ ಆರಂಭವಾಗಿತ್ತು. ಇದೀಗ ಹಿಂಸಾಚಾರವನ್ನು ನಿಗ್ರಹಿಸುವ ನಿಟ್ಟಿನಲ್ಲಿ ಮೊರಾಲೆಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ಏತನ್ಮಧ್ಯೆ ಬೋಲಿವಿಯಾದಲ್ಲಿ ಮತ್ತಷ್ಟು ಅಶಾಂತಿ ಭುಗಿಲೆದ್ದು ಕ್ಷಿಪ್ರಕ್ರಾಂತಿ ನಡೆಯುವ ಮೂಲಕ ತನ್ನನ್ನು ಬಂಧಿಸಿ ಬಲಿಪಶುವನ್ನಾಗಿ ಮಾಡುವ ಸಾಧ್ಯತೆ ಇದ್ದಿರುವುದಾಗಿ ಇವೋ ಮೊರಾಲೆಸ್ ಆತಂಕ ವ್ಯಕ್ತಪಡಿಸಿರುವುದಾಗಿ ವರದಿ ವಿವರಿಸಿದೆ.
ಅಕ್ಟೋಬರ್ 20ರಂದು ಚುನಾವಣೆ ನಡೆದ ನಂತರ ದೇಶದಲ್ಲಿ ತೀವ್ರ ಪ್ರತಿಭಟನೆ ನಡೆಯಲು ಆರಂಭವಾಗಿತ್ತು. ಇದೀಗ ಹಿಂಸಾಚಾರ ಹೆಚ್ಚಾಗಿದ್ದು, ಮೊರಾಲೆಸ್ ಕೂಡಲೇ ಅಧಿಕಾರದಿಂದ ಕೆಳಗಿಳಿಯಬೇಕೆಂದು ಸೇನಾಪಡೆ ಎಚ್ಚರಿಕೆ ನೀಡಿದೆ.
ಇದರಿಂದ ಭಾನುವಾರ ರಾತ್ರಿ ಲಾ ಪಾಝ್ ಹಾಗೂ ಕೆಲವು ಕಟ್ಟಡಗಳಿಗೆ ಬೆಂಕಿ ಹಚ್ಚಿರುವುದು, ಬೀದಿಗಳಲ್ಲಿ ಘರ್ಷಣೆ ನಡೆಯುತ್ತಿರುವುದು ವಿಡಿಯೋ ಫೂಟೇಜ್ ನಲ್ಲಿ ಸೆರೆಯಾಗಿರುವುದಾಗಿ ವರದಿ ತಿಳಿಸಿದೆ.
ಇವೋ ಮೊರಾಲೆಸ್ ಕಳೆದ ಹದಿನಾಲ್ಕು ವರ್ಷಗಳಿಂದ ಬೋಲಿವಿಯಾದ ಅಧ್ಯಕ್ಷಗಾದಿಯಲ್ಲಿದ್ದು, ಈ ಚುನಾವಣೆಯಲ್ಲಿಯೂ ಗೆಲುವು ಸಾಧಿಸಿದ ನಂತರ ದೇಶದಲ್ಲಿ ಹಿಂಸಾಚಾರ ಆರಂಭವಾಗಿತ್ತು. ದೇಶದಲ್ಲಿ ಸ್ಥಿರತೆಯನ್ನು ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಈ ಮೊದಲು ಮೊರಾಲೆಸ್ ಟಿವಿ ಚಾನೆಲ್ ಗೆ ನೀಡಿದ್ದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದರು.
ನಾಗರಿಕ ಕ್ಷಿಪ್ರಕ್ರಾಂತಿಗೆ ಕರೆ ನೀಡುವ ನೀಡುವ ಮೂಲಕ ನನ್ನನ್ನು ಬಂಧಿಸಲು ಸೇನೆ ಸಿದ್ಧತೆ ನಡೆಸಿದೆ ಎಂದು ಮೊರಾಲೆಸ್ ಆರೋಪಿಸಿದ್ದರು. ದೇಶದಲ್ಲಿ ಶಾಂತಿ ನೆಲೆಸಲಿ ಅದಕ್ಕಾಗಿ ನಾನು ನನ್ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಭಾನುವಾರ ಘೋಷಿಸಿದ್ದರು.
ಈ ಉದ್ವಿಗ್ನ, ಗೊಂದಲದ ಸ್ಥಿತಿಯ ನಡುವೆಯೇ ತನ್ನ ಬಂಧನಕ್ಕೆ ಕಾನೂನು ಬಾಹಿರವಾಗಿ ಪೊಲೀಸರು ವಾರಂಟ್ ಹೊರಡಿಸಿದ್ದಾರೆ. ಅಲ್ಲದೇ ಉದ್ರಿಕ್ತ ಗುಂಪುಗಳು ಮನೆಯ ಮೇಲೆ ದಾಳಿ ನಡೆಸಿರುವುದಾಗಿಯೂ ಮೊರಾಲೆಸ್ ಟ್ವೀಟ್ ಮೂಲಕ ಆರೋಪಿಸಿದ್ದಾರೆ.