ಅಬುಜಾ(ನೈಜೀರಿಯಾ): ನೈಜಿರೀಯಾ ಮಿಲಿಟರಿಗೆ ಮಾಹಿತಿಯನ್ನು ನೀಡುತ್ತಿರುವುದಾಗಿ ಆರೋಪಿಸಿ ಬೋಕೋ ಹರಾಂ ಉಗ್ರರು ಕನಿಷ್ಠ 50 ಮಂದಿ ರೈತರನ್ನು ಹತ್ಯೆಗೈಯುವ ಮೂಲಕ ನರಮೇಧ ನಡೆಸಿರುವ ಘಟನೆ ದೇಶದ ಈಶಾನ್ಯದಲ್ಲಿರುವ ಕ್ಯಾಮೆರೂನಿಯನ್ ಗಡಿಯಲ್ಲಿರುವ ಬೊರ್ನೊ ಪ್ರಾಂತ್ಯದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಗಂಗೂಲಿ ಜೀವನಾಧಾರಿತ ಚಲನ ಚಿತ್ರಕ್ಕೆ ರಜನಿಕಾಂತ್ ಪುತ್ರಿಯ ನಿರ್ದೇಶನ ?
ಬೋಕೋ ಹರಾಂ ಉಗ್ರರ ದಾಳಿಯಲ್ಲಿ ಗಾಯಗೊಂಡವರ ಸಂಖ್ಯೆ ಅಧಿಕವಾಗಿದ್ದು, ಇದರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿ ವಿವರಿಸಿದೆ. ಸ್ಥಳೀಯ ನಿವಾಸಿಗಳ ಪ್ರಕಾರ ಇದು ಬೋಕೋ ಹರಾಂ ಉಗ್ರಗಾಮಿಗಳ ಕೃತ್ಯವಾಗಿದೆ ಎಂದು ಆರೋಪಿಸಿದ್ದಾರೆ.
ಸ್ಥಳೀಯ ರೈತರೊಬ್ಬರ ಪ್ರಕಾರ, ಈ ಘಟನೆಯಿಂದ ನಾವೆಲ್ಲ ಭಯಭೀತರಾಗಿದ್ದೇವೆ. ನಾವು ಈಗಾಗಲೇ 50 ಮಂದಿಯ ಶವವನ್ನು ಹೂತಿದ್ದೇವೆ. ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಉಗ್ರರು ದಾಳಿ ನಡೆಸಿದ್ದರು. ಉಳಿದವರು ಕಟ್ಟಿಗೆಗಳನ್ನು ಸಂಗ್ರಹಿಸಲು ತೆರಳಿದ್ದು ಅವರ ಮೇಲೂ ಮಾರಣಾಂತಿಕ ದಾಳಿ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಬೈಕ್ ಗಳಲ್ಲಿ ಆಗಮಿಸಿದ್ದ ಬೋಕೋ ಹರಾಮ್ ಉಗ್ರರು ಏಕಾಏಕಿ ಗುಂಡಿನ ಸುರಿಮಳೆ ಸುರಿಸಿದ್ದರು. ನಮ್ಮ ಕಣ್ಣೆದುರೇ 50ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದಾಗಿ ರೈತರು ತಿಳಿಸಿರುವುದಾಗಿ ವರದಿಯಾಗಿದೆ.
ನೈಜಿರೀಯನ್ ಮಿಲಿಟರಿ ಪರ ಬೇಹುಗಾರಿಕೆ ಮಾಡಿ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆಂದು ಆರೋಪಿಸಿ ಬೋಕೋ ಹರಾಮ್ ಉಗ್ರರು ರೈತರು, ದನಗಾಹಿಗಳು, ಕಾರ್ಮಿಕರನ್ನು ಗುರಿಯಾಗಿರಿಸಿ ದಾಳಿ ನಡೆಸುತ್ತಿರುವುದಾಗಿ ವರದಿ ಹೇಳಿದೆ.