Advertisement

ಮುಚ್ಚುವ ಭೀತಿಯಲ್ಲಿದ್ದ ಬೊಕ್ಕಪಟ್ಣ ಕಾಲೇಜು ಹಂಪನಕಟ್ಟೆಗೆ ಸ್ಥಳಾಂತರ

02:25 AM Jun 23, 2018 | Team Udayavani |

ವಿಶೇಷ ವರದಿ – ಮಹಾನಗರ: ಶತಮಾನಗಳ ಇತಿಹಾಸ ಹೊಂದಿರುವ ಜತೆಗೆ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರು ಪ್ರಾಥಮಿಕ ಶಿಕ್ಷಣ ಪಡೆದಿದ್ದ ಬೊಕ್ಕಪಟ್ಣ ಶಾಲಾ ಕ್ಯಾಂಪಸ್‌ ನಲ್ಲಿದ್ದ ಸರಕಾರಿ ಪದವಿಪೂರ್ವ ಕಾಲೇಜು ಇದೀಗ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೋಸ್ಕರ ನಗರದ ಹಂಪನಕಟ್ಟೆಗೆ ಸ್ಥಳಾಂತರಗೊಂಡಿದೆ. ಆ ಮೂಲಕ, ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಗೊಂಡು ಕಳೆದ ಐದು ವರ್ಷಗಳಿಂದ ಮುಚ್ಚುವ ಭೀತಿಯಲ್ಲಿದ್ದ ಸುಮಾರು 20 ವರ್ಷಗಳಷ್ಟು ಹಳೆಯ ಈ ಕಾಲೇಜು ಇದೀಗ ಪುನಶ್ಚೇತನ ಹಾದಿಯತ್ತ ಸಾಗಿದೆ. ಜತೆಗೆ, ಈ ಕಾಲೇಜಿನಲ್ಲಿ ಓದಿರುವ ಹಳೆ ವಿದ್ಯಾರ್ಥಿಗಳು, ಈಗ  ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವರ್ಗ ಕೂಡ ಖುಷಿಯಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ನಗರದಲ್ಲಿ ಪಿಯುಸಿಯಲ್ಲಿ ಕೋ-ಎಜುಕೇಶನ್‌ಗೆ ಅವಕಾಶ ಪಡೆದಿರುವ ಏಕೈಕ ಸರಕಾರಿ ಕಾಲೇಜು ತನ್ನ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Advertisement

ವಿದ್ಯಾರ್ಥಿಗಳ ಕೊರತೆಯಿಂದಾಗಿ ಬೊಕ್ಕಪಟ್ಣ ಕ್ಯಾಂಪಸ್‌ ನಿಂದ ಈ ಕಾಲೇಜು ಅನ್ನು ದಾವಣಗೆರೆ ಜಿಲ್ಲೆಗೆ ಸ್ಥಳಾಂತರಗೊಳ್ಳಬೇಕಿತ್ತು. ಆದರೆ, ಸ್ಥಳೀಯ ಶಾಸಕರು ಹಾಗೂ ಅಲ್ಲಿನ ಉಪನ್ಯಾಸಕರ ಪ್ರಯತ್ನದಿಂದಾಗಿ ಅಂತಿಮ ಹಂತದಲ್ಲಿ ಈ ನಿರ್ಧಾರ ಬದಲಾಗಿದ್ದು, ಕಾಲೇಜನ್ನು ಮಂಗಳೂರಿನಲ್ಲೇ ಉಳಿಸಿಕೊಂಡು ಹಂಪನಕಟ್ಟೆಯ ಅಭ್ಯಾಸಿ ಪ್ರೌಢಶಾಲೆಯ ವಠಾರಕ್ಕೆ ಸ್ಥಳಾಂತರಗೊಳಿಸಲಾಗಿದೆ. ಬೊಕ್ಕಪಟ್ಣ ಸರಕಾರಿ ಶಾಲೆಯ ಆವರಣದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಈ ಕಾಲೇಜಿನಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಾ ಇನ್ನೇನು ಮುಚ್ಚುವ ಹಂತಕ್ಕೆ ತಲುಪಿತ್ತು.

ಬೊಕ್ಕಪಟ್ಣವು ಒಳಪ್ರದೇಶವಾಗಿದ್ದು, ಬಸ್‌ ನ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಈ ಕಾಲೇಜಿಗೆ ದಾಖಲಾಗುತ್ತಿರಲಿಲ್ಲ. ದೂರದ ವಿದ್ಯಾರ್ಥಿಗಳು ಎರಡೆರಡು ಬಸ್‌ ಗಳನ್ನು ಬದಲಿಸಿಕೊಂಡು ಬರಬೇಕಿತ್ತು. ರಥಬೀದಿಯಿಂದ ಲೇಡಿಹಿಲ್‌ ವರೆಗೆ ಐದಾರು ಕಾಲೇಜುಗಳಿದ್ದು, ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿತ್ತು. ಕಳೆದ ವರ್ಷ ಕಾಲೇಜಿನ ಉಪನ್ಯಾಸಕರನ್ನೊಳಗೊಂಡ ನಿಯೋಗ ಹಿಂದಿನ ಶಾಸಕರನ್ನು ಭೇಟಿಯಾಗಿ ಸಂಸ್ಥೆಯನ್ನು ಹಂಪನಕಟ್ಟೆಗೆ ಸ್ಥಳಾಂತರಿಸಲು ಮನವಿ ಮಾಡಿತ್ತು. ಜತೆಗೆ 2017ರ ಸೆಪ್ಟಂಬರ್‌ ನಲ್ಲಿ ಪ.ಪೂ. ಶಿಕ್ಷಣ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿತ್ತು. ಈಗ ಸ್ಥಳಾಂತರಕ್ಕೆ ಸರಕಾರದಿಂದ ಆದೇಶ ಬಂದಿದ್ದು, ಹಂಪನಕಟ್ಟೆಯಲ್ಲಿ ತರಗತಿಗಳು ಆರಂಭಗೊಂಡಿದೆ.

10 ಮಂದಿ ದಾಖಲಾತಿ
ಈ ಶೈಕ್ಷಣಿಕ ಸಾಲಿಗೆ 10 ಮಂದಿ ವಿದ್ಯಾರ್ಥಿಗಳು ಪ್ರಥಮ ಪಿಯುಸಿಗೆ ದಾಖಲಾಗಿದ್ದಾರೆ. ಸ್ಥಳಾಂತರ ಆದೇಶ ಬರಲು ವಿಳಂಬವಾದ ಕಾರಣ ಬಹುತೇಕ ವಿದ್ಯಾರ್ಥಿಗಳು ಬೇರೆ ಕಾಲೇಜಿಗೆ ದಾಖಲಾಗಿದ್ದರು. ಮುಂದೆ ಎಸೆಸ್ಸೆಲ್ಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಸೇರ್ಪಡೆಗೊಳ್ಳಲು ಅವಕಾಶವಿದೆ. ದ್ವಿತೀಯ ಪಿಯುಸಿಯಲ್ಲಿ 12 ಮಂದಿ ವಿದ್ಯಾರ್ಥಿಗಳಿದ್ದು, ಕಲೆ ಹಾಗೂ ವಾಣಿಜ್ಯ ವಿಭಾಗಗಳು ಕಾಲೇಜಿನಲ್ಲಿದೆ.

ಏಕೈಕ ಕಾಲೇಜು
ನಗರದಲ್ಲಿ (ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿ) ರಥಬೀದಿ ಹಾಗೂ ಬಲ್ಮಠ ಕಾಲೇಜುಗಳು ಮಹಿಳಾ ಕಾಲೇಜುಗಳಾಗಿವೆ. ಹೀಗಾಗಿ ಪುರುಷರಿಗೂ ಕಲಿಕೆಗೆ ಅವಕಾಶವಿದ್ದದ್ದು ಬೊಕ್ಕಪಟ್ಣ ಕಾಲೇಜಿನಲ್ಲಿ ಮಾತ್ರ. ಜತೆಗೆ ಖಾಸಗಿಯಾಗಿ ಪರೀಕ್ಷೆ ಬರೆಯುವವರು ಸರಕಾರಿ ಕಾಲೇಜಿನಲ್ಲೇ ನೋಂದಾವಣೆ ಮಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಈ ಕಾಲೇಜು ಮುಚ್ಚಿದ್ದರೆ ಇಂತಹ ವಿದ್ಯಾರ್ಥಿಗಳು ಬೇರೆಡೆಗೆ ತೆರಳಬೇಕಾಗಿತ್ತು.

Advertisement

ಪೂಜಾರಿ ಅವರು ಶಿಕ್ಷಣ ಪಡೆದ ಶಾಲೆ
ಬೊಕ್ಕಪಟ್ಣದಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪ.ಪೂ.ಶಿಕ್ಷಣ ಒಂದೇ ವಠಾರದಲ್ಲಿ ಲಭ್ಯವಾಗುತ್ತಿದ್ದು, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಪ್ರಾಥಮಿಕ ಶಿಕ್ಷಣವನ್ನು ಇದೇ ಕಾಲೇಜಿನಲ್ಲಿ ಕಲಿತಿರುವುದು ವಿಶೇಷ. ಅವರ ರಾಜ್ಯಸಭಾ ನಿಧಿಯಿಂದ ಶಾಲೆಗೆ 40 ಲಕ್ಷ ರೂ.ಗಳ ಕಟ್ಟಡವೊಂದನ್ನು ಮಂಜೂರುಗೊಳಿಸಿದ್ದಾರೆ. ಇಲ್ಲಿನ ಪ್ರಾಥಮಿಕ ಶಾಲೆಗೆ ಸುಮಾರು 112 ವರ್ಷಗಳ ಇತಿಹಾಸವಿದೆ ಎನ್ನುತ್ತಾರೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೋಹನ್‌ ಶೆಟ್ಟಿ.

ಸ್ಥಳಾಂತರ ಅನಿವಾರ್ಯ
ನಗರದಲ್ಲಿ ಹುಡುಗರಿಗೆ ಕಲಿಯಲು ಬೇರೆ ಕಾಲೇಜು ಇಲ್ಲದ ಕಾರಣ ಸರಕಾರ ಬೊಕ್ಕಪಟ್ಣ ಕಾಲೇಜನ್ನು ಹಂಪನಕಟ್ಟೆಗೆ ಸ್ಥಳಾಂತರಿಸಿದೆ. ನಗರದ ಪ್ರಮುಖ ಸ್ಥಳವಾಗಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಳವಾಗಲಿದೆ.
– ಕುಶಾರತಿ, ಪ್ರಾಂಶುಪಾಲರು

Advertisement

Udayavani is now on Telegram. Click here to join our channel and stay updated with the latest news.

Next