Advertisement

ಪಡಿತರ ವ್ಯವಸ್ಥೆಯಡಿ ಕರಾವಳಿ ಜಿಲ್ಲೆಗಳಲ್ಲಿ ಸ್ಥಳೀಯ ಕುಚ್ಚಲಕ್ಕಿ ವಿತರಣೆಗೆ ಕೇಂದ್ರ ಅನುಮತಿ

10:04 AM Oct 08, 2022 | Team Udayavani |

ಉಡುಪಿ : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸ್ಥಳೀಯ ಕುಚ್ಚಲಕ್ಕಿ ಖರೀದಿಸಿ, ಪಡಿತರ ವ್ಯವಸ್ಥೆಯಡಿ ವಿತರಿಸಲು ಕೇಂದ್ರ ಸರಕಾರ ಅನುಮತಿ ಕಲ್ಪಿಸಿದೆ.

Advertisement

ಕಳೆದ ವರ್ಷ ಕೇಂದ್ರ ಸರಕಾರ ಸ್ಥಳೀಯ ಕುಚ್ಚಲಕ್ಕಿ ಖರೀದಿಸಿ, ವಿತರಿಸಲು ಅನುಮತಿ ನೀಡುವಾಗ ವಿಳಂಬವಾಗಿದ್ದರಿಂದ ಸ್ಥಳೀಯ ಕುಚ್ಚಲಕ್ಕಿ ಲಭ್ಯವಿರಲಿಲ್ಲ. ಆಂಧ್ರ ಸಹಿತ ಹೊರ ರಾಜ್ಯದ ಕುಚ್ಚಲಕ್ಕಿಯನ್ನೇ ವಿತರಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಖರೀದಿಗೆ ಈಗಾಗಲೇ ಅನುಮೋದನೆ ನೀಡಿರುವುದರಿಂದ ಸ್ಥಳೀಯ ಕುಚ್ಚಲಕ್ಕಿ ಹೆಚ್ಚು ಸಿಗಬಹುದು. ಈ ತಿಂಗಳಿನಲ್ಲಿ ಕಟಾವು ಪ್ರಕ್ರಿಯೆ ಶುರುವಾಗಲಿದೆ. ಆದಷ್ಟು ಬೇಗ ಭತ್ತ ಖರೀದಿ ಕೇಂದ್ರವನ್ನು ಆರಂಭಿಸಿ, ರೈತರಿಗೆ ಸೂಕ್ತ ಮಾಹಿತಿ ನೀಡುವ ಕಾರ್ಯ ರಾಜ್ಯ ಸರಕಾರ ಹಾಗೂ ಕೃಷಿ ಇಲಾಖೆ, ಜಿಲ್ಲಾಡಳಿತ ಮಾಡಬೇಕಿದೆ.

ಪ್ರತಿ ತಿಂಗಳು ಉಭಯ ಜಿಲ್ಲೆಗಳಿಗೆ ಸರಾಸರಿ 1 ಲಕ್ಷ ಕ್ವಿಂಟಾಲ್‌ ಅಕ್ಕಿ ಪಡಿತರ ವ್ಯವಸ್ಥೆಯಡಿ ವಿತರಿಸಲು ಬೇಕಾಗುತ್ತದೆ. ಈ ಹಿಂದೆ ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಸಾಮಾನ್ಯ ಭತ್ತಕ್ಕೆ ಕ್ವಿಂಟಲ್‌ಗೆ 1,940 ರೂ. ಹಾಗೂ ಗ್ರೇಡ್‌-ಎ ಭತ್ತಕ್ಕೆ 1,960 ರೂ. ನೀಡಿ ಖರೀದಿಸಲಾಗುತಿತ್ತು. ಇದೀಗ ಬೆಂಬಲ ಬೆಲೆ ಹೆಚ್ಚಿಸಬೇಕು ಅಥವಾ ರಾಜ್ಯ ಸರಕಾರದಿಂದ ನೀಡಬೇಕು ಎಂಬ ಆಗ್ರಹವನ್ನು ರೈತರು ಮಾಡುತ್ತಿದ್ದಾರೆ.

ಉಡುಪಿ, ದ.ಕ. ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ರೈತರು ಬೆಳೆಯುತ್ತಿರುವ ಸ್ಥಳೀಯ ಕುಚ್ಚಲಕ್ಕಿ ಪ್ರಭೇದಗಳಾದ ಎಂಒ4, ಕಜೆ, ಜಯ, ಜ್ಯೋತಿ, ಪಂಚಮುಖೀ, ಸಹ್ಯಾದ್ರಿ, ಉಮ ಮತ್ತು ಅಭಿಲಾಷ್‌ ತಳಿಗಳನ್ನು ಕೇಂದ್ರ ಸರಕಾರದ ಕನಿಷ್ಠ ಬೆಂಬಲ ಬೆಲೆಯಡಿ ಖರೀದಿ ಮಾಡಿ ಪಡಿತರದ ಮೂಲಕ ಕರಾವಳಿ ಜಿಲ್ಲಾ ವ್ಯಾಪ್ತಿಗಳಲ್ಲಿ ವಿತರಿಸಲು ಎರಡನೇ ವರ್ಷಕ್ಕೆ ಅನುಮತಿ ನೀಡಿದೆ.

ಸ್ಥಳೀಯ ಕುಚ್ಚಲಕ್ಕಿ ವಿತರಣೆಗೆ ಅನೇಕ ವರ್ಷದಿಂದ ಬೇಡಿಕೆ ಇತ್ತು. ಉಭಯ ಜಿಲ್ಲೆಗಳಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸ ಲಾಗಿತ್ತು. ರಾಜ್ಯ ಸರಕಾರವು ಅದನ್ನು ಕೇಂದ್ರಕ್ಕೆ ಸಲ್ಲಿಸಿತ್ತು. ಸ್ಥಳೀಯ ಸಂಸದರೂ ಆದ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಈ ಸಂಬಂಧ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಅವರಿಗೆ ಪತ್ರ ಬರೆದು ಪ್ರಸ್ತಾವನೆ ಅನುಮೋದಿಸುವಂತೆ ಕೋರಿದ್ದರು. ಅದರಂತೆ ಕೇಂದ್ರ ಸರಕಾರ ಅನುಮತಿ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next