ವಿಜಯಪುರ: ಎರಡು ಬೋಗಿ ಹಾಗೂ ಎಂಜಿನ್ ಮಧ್ಯೆ ಸಂಪರ್ಕ ಕಡಿತವಾಗಿ ರೈಲು ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ಮಂಗಳವಾರ ಸಂಜೆ ನಗರದ ಇಬ್ರಾಹೀಂಪುರ ರೈಲು ನಿಲ್ದಾಣದ ಬಳಿ ಜರುಗಿದೆ.
ವಿಜಯಪುರ ನಗರದ ವಜ್ರ ಹನುಮಾನ ದೇವಸ್ಥಾನದ ಬಳಿ ರೈಲು ಮಾರ್ಗದಲ್ಲಿ ಎರಡು ಬೋಗಿಗಳ ಸಂಪರ್ಕ ಕಡಿತವಾಗಿದ್ದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿತ್ತು. ವಿಜಯಪುರ ಮಾರ್ಗವಾಗಿ ಮೈಸೂರಿಗೆ ತೆರಳುವ ಗೋಲಗುಂಬಜ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಂಗಳವಾರ ಸಂಜೆ ಈ ಅವಘಡ ಸಂಭವಿಸಿದೆ.
ನಗರದ ಮಧ್ಯ ಭಾಗದಲ್ಲಿ ರೈಲು ಮಾರ್ಗವಿದ್ದು ಇಬ್ರಾಹೀಂಪುರ ರೈಲು ನಿಲ್ದಾಣದ ವಜ್ರ ಹನುಮಾನ ಮಂದಿರದ ಬಳಿ ಎರಡು ಬೋಗಿಗಳು ಎಂಜಿನಿಂದ ಸಂಪರ್ಕ ಕಡಿದುಕೊಂಡಿವೆ. ಇದರಿಂದ ಸಂಪರ್ಕ ಕಡಿತಗೊಂಡ ಬೋಗಿಗಳು ದೂರಕ್ಕೆ ಹೋಗಿ ನಿಲ್ಲುತ್ತಲೇ ಪ್ರಯಾಣಿರು ಚೀರಾಟ ಆರಂಭಿಸಿದ್ದಾರೆ. ಕೂಡಲೇ ರೈಲು ಚಾಲಕ ಎಚ್ಚೆತ್ತು ರೈಲು ನಿಲ್ಲಿಸಿದ್ದಾನೆ.
ಎರಡು ಬೋಗಿಗಳ ಮಧ್ಯೆ ಇದ್ದ ಸಂಪರ್ಕದ ಕೊಂಡಿ ಕಳಚಿ ಬಿದ್ದಿದ್ದೇ ಈ ಘಟನೆಗೆ ಕಾರಣ ಎಂದು ಅಧಿಕಾರಿಗಳ ಪ್ರಾಥಮಿಕ ಮಾಹಿತಿಯಲ್ಲಿ ತಿಳಿದು ಬಂದಿದೆ. ಕಡಿತವಾಗಿದ್ದ ಬೋಗಿ-ಎಂಜಿನ್ ಮಧ್ಯೆ ಹೊಸ ಕೊಂಡಿ ಹಾಕಿ ದುರಸ್ತಿ ಮಾಡಿದ ಬಳಿಕ ರೈಲು ಪ್ರಯಾಣ ಮುಂದುವರಿದಿದೆ.
ಸಂಪರ್ಕ ಕಡಿದುಕೊಂಡ ಬೋಗಿಗಳನ್ನು ವೀಕ್ಷಿಸಲು ನಗರದ ಜನರು ಕುತೂಹಲದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಘಟನೆ ಸುದ್ದಿ ತಿಳಿಯುತ್ತಲೇ ವಿಜಯಪುರ ರೇಲ್ವೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.