Advertisement

ಬೊಫೋರ್ಸ್‌ ಹಗರಣ: “ಕೈ’ಗೆ ತಾತ್ಕಾಲಿಕ ರಿಲೀಫ್

09:21 AM Nov 03, 2018 | Harsha Rao |

ಹೊಸದಿಲ್ಲಿ: ಬೊಫೋರ್ಸ್‌ ಹಗರಣದಲ್ಲಿ ಎಲ್ಲ ಆರೋಪಿಗಳನ್ನು ವಜಾಗೊಳಿಸಿ 2005ರಲ್ಲಿ ದಿಲ್ಲಿ ಹೈಕೋರ್ಟ್‌ ಹೊರಡಿಸಿದ ಆದೇಶಕ್ಕೆ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್‌ ಶುಕ್ರವಾರ ತಳ್ಳಿಹಾಕಿದೆ. 13 ವರ್ಷಗಳ ವಿಳಂಬವನ್ನು ಮನ್ನಿಸಬೇಕು ಎಂದು ಸಿಬಿಐ ವಿನಂತಿ ಮಾಡಿತ್ತು. ಆದರೆ ಇದನ್ನು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪೀಠ ನಿರಾಕರಿಸಿದ್ದು, ಕಾಂಗ್ರೆಸ್‌ಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

Advertisement

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ ಸರಕಾರ ಹಲವು ಅಕ್ರಮಗಳನ್ನು ಎಸಗಿತ್ತು ಎಂದು 2017ರ ಅಕ್ಟೋಬರ್‌ನಲ್ಲಿ ಖಾಸಗಿ ಪತ್ತೇದಾರ ಮೈಕೆಲ್‌ ಹರ್ಶ್‌ಮನ್‌ ಎಂಬುವವರು ನೀಡಿದ ಸಂದರ್ಶನವನ್ನು ಆಧರಿಸಿ ಸಿಬಿಐ ಮೇಲ್ಮನವಿ ಸಲ್ಲಿಸಿತ್ತು. 

ಆದರೆ ಈಗಾಗಲೇ 2014ರಲ್ಲಿ ವಕೀಲ ಅಜಯ್‌ ಅಗರ್‌ವಾಲ್‌ ಸಲ್ಲಿಸಿದ್ದ ಮೇಲ್ಮನವಿಯಲ್ಲೇ ಹೆಚ್ಚುವರಿಯಾಗಿ ಎಲ್ಲ ಅಂಶಗಳನ್ನೂ ದಾಖಲಿಸಬಹುದು ಎಂದು ಸುಪ್ರೀಂಕೋರ್ಟ್‌ ಹೇಳಿದ್ದು, ಅದಕ್ಕೆ ಅವಕಾಶ ಕಲ್ಪಿಸಿದೆ. ಅಜಯ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್‌ ಈಗಾಗಲೇ ಪರಿಗಣಿಸಿದೆ. ಅಷ್ಟೇ ಅಲ್ಲ, ಈ ಮೇಲ್ಮನವಿ ವಿಚಾರಣೆಗೆ ನಿರಾಕರಿಸುವುದರಿಂದ ಸಿಬಿಐ ತನಿಖೆ ನಡೆಸಲು ಅಡ್ಡಿ ಇಲ್ಲವೇ ಎಂದು ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ನ್ಯಾಯಪೀಠವನ್ನು ಪ್ರಶ್ನಿಸಿದರಾದರೂ, ಈ ಬಗ್ಗೆ ತೀರ್ಪಿನಲ್ಲಿ ಯಾವುದೇ ಉಲ್ಲೇಖವನ್ನು ಕೋರ್ಟ್‌ ಮಾಡಿಲ್ಲ. ಹೀಗಾಗಿ ಬೊಫೋರ್ಸ್‌ ಪ್ರಕರಣದಲ್ಲಿ ತನಿಖೆ ನಡೆಸಲು ಮತ್ತು ಸಾಕ್ಷಿಗಳನ್ನು ಸಲ್ಲಿಸಲು ಸುಪ್ರೀಂಕೋರ್ಟ್‌ ಅವಕಾಶ ಮಾಡಿಕೊಟ್ಟಂತಾಗಿದೆ ಎನ್ನಲಾಗುತ್ತಿದೆ.

2005ರಲ್ಲಿ ತೀರ್ಪು ನೀಡಿದ್ದ ಕೋರ್ಟ್‌ ಹಿಂದುಜಾ ಸೋದರರು ಹಾಗೂ ಇತರ ಎಲ್ಲ ಆರೋಪಿಗಳನ್ನು ಖುಲಾಸೆ ಮಾಡಿತ್ತು. ಆಗ ಕಾಂಗ್ರೆಸ್‌ ಸರಕಾರವಿದ್ದುದರಿಂದ ದಿಲ್ಲಿ ಹೈಕೋರ್ಟ್‌ ತೀರ್ಪಿನ ವಿರುದ್ಧ ಮೇಲ್ಮನವಿಯನ್ನು ಸಿಬಿಐ ಸಲ್ಲಿಸಲಿಲ್ಲ. ಆದರೆ ಎನ್‌ಡಿಎ ಸರಕಾರ 2014ರಲ್ಲಿ ಅಧಿಕಾರಕ್ಕೆ ಬಂದಾಗ ಮೇಲ್ಮನವಿ ಸಲ್ಲಿಸುವ ಬಗ್ಗೆ ಚಿಂತನೆ ನಡೆಸಿತು. ಅದಾಗಲೇ ಅಜಯ್‌ ಅಗರ್‌ವಾಲ್‌ ಮೇಲ್ಮನವಿ ಸಲ್ಲಿಸಿದ್ದರಿಂದ ಆ ಪ್ರಕರಣದಲ್ಲೇ ಪ್ರತಿಕ್ರಿಯೆದಾರರ ರೀತಿ ಸಿಬಿಐ ಪಾಲ್ಗೊಳ್ಳಬಹುದು ಎಂದೂ ಹೇಳಲಾಗಿತ್ತು. ಆದರೆ ಹಲವು ವರ್ಷಗಳ ಚರ್ಚೆಗಳ ನಂತರ ಕೊನೆಗೂ ಫೆಬ್ರವರಿಯಲ್ಲಿ ಸಿಬಿಐ ಮೇಲ್ಮನವಿ ದಾಖಲಿಸಿತ್ತು.

ಅಂಬಾನಿಗೆ 284 ಕೋಟಿ ರೂ. ಲಂಚ
ರಫೇಲ್‌ ಡೀಲ್‌ನಲ್ಲಿ ಯುದ್ಧವಿಮಾನ ತಯಾರಿಕೆ ಸಂಸ್ಥೆ ಡಸ್ಸಾಲ್ಟ್ ಏವಿಯೇಷನ್‌ 284 ಕೋಟಿ ರೂ.ಗಳನ್ನು ರಿಲಯನ್ಸ್‌ ಕಂಪನಿಯ ಮಾಲಕ ಅನಿಲ್‌ ಅಂಬಾನಿಗೆ ನೀಡಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಎಚ್‌ಎಎಲ್‌ ಅನ್ನು ಆಯ್ಕೆ ಮಾಡುವುದರ ಬದಲಿಗೆ ರಿಲಯನ್ಸ್‌ ಆಯ್ಕೆ ಮಾಡಿದ್ದರ ಬಗ್ಗೆ ಡಸ್ಸಾಲ್ಟ್ ಸಿಇಒ ಸುಳ್ಳು ಹೇಳಿದ್ದಾರೆ. ಭೂಮಿ ಇದೆ ಎಂಬ ಕಾರಣಕ್ಕೆ ನಾವು ರಿಲಯನ್ಸ್‌ ಆಯ್ಕೆ ಮಾಡಿದ್ದೇವೆ ಎಂದು ಡಸ್ಸಾಲ್ಟ್ ಸಿಇಒ ಸುಳ್ಳು ಹೇಳಿದ್ದಾರೆ. 284 ಕೋಟಿ ರೂ.ಗಳನ್ನು ರಿಲಯನ್ಸ್‌ನಲ್ಲಿ ಡಸ್ಸಾಲ್ಟ್ ಹೂಡಿಕೆ ಮಾಡಿದೆ. ಇದೇ ದುಡ್ಡಿನಲ್ಲಿ ರಿಲಯನ್ಸ್‌ ಭೂಮಿ ಖರೀದಿಸಿದೆ. ಹೀಗಾಗಿ ಡಸ್ಸಾಲ್ಟ್ ಸಿಇಒ ಸುಳ್ಳು ಹೇಳಿದ್ದಾರೆ ಎಂಬುದು ಸಾಬೀತಾದಂತಾಗಿದೆ ಎಂದು ರಾಹುಲ್‌ ಆರೋಪಿಸಿದ್ದಾರೆ. ಅಲ್ಲದೆ, ನಷ್ಟದಲ್ಲಿರುವ ಕಂಪನಿಯಲ್ಲಿ ಡಸ್ಸಾಲ್ಟ್ 284 ಕೋಟಿ ರೂ. ಹೂಡಿಕೆ ಮಾಡಿದ್ದೇಕೆ ಎಂದು ಪ್ರಶ್ನಿಸಿರುವ ರಾಹುಲ್‌, ಈ ಮೊತ್ತ ಲಂಚದ ಮೊದಲ ಕಂತಷ್ಟೇ ಎಂದು ಹೇಳಿದ್ದಾರೆ. ಯುದ್ಧ ವಿಮಾನಗಳ ಬೆಲೆ ಬಹಿರಂಗಗೊಳಿಸದ ಸರಕಾರದ ಉದ್ದೇಶವೇನು ಎಂದೂ ಅವರು ಪ್ರಶ್ನಿಸಿದ್ದಾರೆ. ಇದರ ವಿಚಾರಣೆ ಆರಂಭವಾದರೆ ಪ್ರಧಾನಿ ಮೋದಿ ಉಳಿಯುವುದಿಲ್ಲ ಎಂದೂ ಅವರು ಹೇಳಿದ್ದಾರೆ.

Advertisement

ಇದಕ್ಕೆ ರಿಲಯನ್ಸ್‌ ಪ್ರತಿಕ್ರಿಯೆ ನೀಡಿದ್ದು, ರಫೇಲ್‌ ವಿಚಾರದಲ್ಲಿ ರಾಜಕೀಯ ಕಾರಣಕ್ಕಾಗಿ ರಿಲಯನ್ಸ್‌ ಹಾಗೂ ಅದರ ಮುಖ್ಯಸ್ಥ ಅನಿಲ್‌ ಅಂಬಾನಿ ವಿರುದ್ಧ ಪದೇ ಪದೆ ಸುಳ್ಳು, ಸಾಕ್ಷ್ಯ ರಹಿತ ಆರೋಪ ಮಾಡಲಾಗುತ್ತಿದೆ. ರಾಹುಲ್‌ ಗಾಂಧಿ ಮಾಡಿರುವ ಲಂಚ ಆರೋಪ ಸಂಪೂರ್ಣ ಸುಳ್ಳು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next