ಬೆಂಗಳೂರು: ವಿಮಾನ ಉತ್ಪಾದನೆ ವಲಯದ ದೈತ್ಯ ಕಂಪೆನಿಯಾಗಿರುವ ಅಮೆರಿಕ ಮೂಲದ ಬೋಯಿಂಗ್ ಆ ದೇಶದ ಹೊರಗೆ ನಿರ್ಮಿಸಿದ ಅತೀ ದೊಡ್ಡ ಕೇಂದ್ರವಾದ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸೆಂಟರ್ (ಬಿಐಇಟಿಸಿ) ಮತ್ತು ಭಾರತೀಯ ಮಹಿಳೆಯರನ್ನು ವಿಮಾನಯಾನ ಕ್ಷೇತ್ರದಲ್ಲಿ ತೊಡಗಿಸಿ ಕೊಳ್ಳಲು ಉತ್ತೇಜಿಸುವ ಬೋಯಿಂಗ್ ಸುಕನ್ಯಾ ಯೋಜನೆಗೆ ಪ್ರಧಾನಿ ಮೋದಿ ಶುಕ್ರವಾರ ಚಾಲನೆ ನೀಡಿದರು.
ದೇವನಹಳ್ಳಿಯ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ನಲ್ಲಿ ಸುಮಾರು 43 ಎಕರೆಯಲ್ಲಿ 1,600 ಕೋಟಿ ರೂ ವೆಚ್ಚದಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಕೇಂದ್ರದಲ್ಲಿ ವಿಮಾನಯಾನಕ್ಕೆ ಸಂಬಂಧಿಸಿದ ಎಂಜಿನಿಯರಿಂಗ್, ಪರೀಕ್ಷೆ, ಸಂಶೋಧನೆ ಮತ್ತು ತಂತ್ರಜ್ಞಾನ ಸಂಬಂಧಿ ಕೆಲಸಗಳು, ಸುಧಾರಿತ ಉನ್ನತ ಗುಣಮಟ್ಟದ ಎಂಜಿನಿಯರಿಂಗ್ ಪ್ರಕ್ರಿಯೆಗಳು ನಡೆಯಲಿವೆ.
ಜತೆಗೆ ಸಂರಚನೆ ಮತ್ತು ಸಿಸ್ಟಮ್ಸ್ ವಿನ್ಯಾಸ, ಉತ್ಪಾದನ ನೆರವು, ವಿಮಾನ ಪರೀಕ್ಷಾ ವ್ಯವಸ್ಥೆಯ ಅಭಿವೃದ್ಧಿ, ಡಿಜಿಟಲ್ ಪರಿಹಾರ ಮುಂತಾದ ವೈಮಾನಿಕ ಕ್ಷೇತ್ರದ ಸುಸ್ಥಿರತೆಗೆ ಸಂಬಂಧಿಸಿದ ಕೆಲಸಗಳು ಆರಂಭಗೊಂಡಿವೆ.
ಹಾಗೆಯೇ ಬೋಯಿಂಗ್ ಸುಕನ್ಯಾ ಕಾರ್ಯಕ್ರಮದಡಿ ಮಹಿಳೆಯರು ವಿಮಾನ ಯಾನ ಕ್ಷೇತ್ರದಲ್ಲಿ ವೃತ್ತಿ ಬದುಕು ರೂಪಿಸುಕೊಳ್ಳಲು ಅಗತ್ಯವಾದ ಪಠ್ಯಕ್ರಮ, ತರಬೇತಿ, ಮಾಹಿತಿ, ಸ್ಕಾಲರ್‌ಶಿಪ್ ಮುಂತಾದ ಚಟುವಟಿಕೆ ನಡೆಯಲಿವೆ.
ಉದ್ಘಾಟನೆ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಪಕ್ಷ ನಾಯಕ ಆರ್. ಅಶೋಕ್, ಬೋಯಿಂಗ್‌ನ ಮುಖ್ಯ ಕಾರ್ಯಾಚರಣ ಅಧಿಕಾರಿ ಸ್ಟೆಫನಿ ಪೋಪ್ ಮತ್ತು ಸಂಸ್ಥೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.