Advertisement

ಮುಸ್ಲಿಮರಿಂದ ದೇಹದಂಡನೆ

02:21 PM Sep 22, 2018 | |

ಕಲಬುರಗಿ: ಮೊಹರಂ ಹಬ್ಬದ ಅಂಗವಾಗಿ ಶಿಯಾ ಮುಸ್ಲಿಮರು ನಗರದಲ್ಲಿ ಶುಕ್ರವಾರ ದೇಹದಂಡನೆ ಮಾಡಿಕೊಂಡರು. ಚಿಕ್ಕ ಬಾಲಕರಿಂದಹಿಡಿದು ವೃದ್ಧರವರೆಗೆ ಕಬ್ಬಿಣದ ಸರಳು,  ಬ್ಲೇಡ್‌ಗಳಿಂದ ದೇಹ ದಂಡಿಸಿಕೊಳ್ಳುತ್ತ ದೇಹವನ್ನು ರಕ್ತಸಿಕ್ತವಾಗಿಸಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡರು.

Advertisement

ಮೊಹರಂ ಹಬ್ಬ ಹಿಂದೂ-ಮುಸ್ಲಿಮರ ಭಾವೈಕ್ಯತೆಯ ಪ್ರತೀಕವಾಗಿದ್ದು, ಈ ಹಬ್ಬ ಚಾರಿತ್ರಿಕ ಹಾಗೂ ಧಾರ್ಮಿಕ ಹಿನ್ನೆಲೆ ಹೊಂದಿದೆ. ಮೊಹಮ್ಮದ್‌ ಪೈಗಂಬರ್‌ ಅವರ ಮೊಮ್ಮಗ ಇಮಾಮ್‌ ಹುಸೇನ್‌ ಧರ್ಮದ ಉಳಿವಿಗಾಗಿ ನಡೆದ ಯುದ್ಧದಲ್ಲಿ ಹುತಾತ್ಮರಾದ ಶೋಕಾಚರಣೆ ನಿಮಿತ್ತ ಶಿಯಾ ಮುಸ್ಲಿಮರು ತಮ್ಮ ದೇಹವನ್ನು ತಾವೇ ದಂಡಿಸಿಕೊಳ್ಳುತ್ತಾರೆ.

ನಗರದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಸಾವಿರಾರು ಜನರ ಮಧ್ಯೆ ಸುಮಾರು ಜನರು ರೈಲ್ವೆ ನಿಲ್ದಾಣದಿಂದ ಸರ್ದಾರ್‌ ವಲ್ಲಭಭಾಯಿ ವೃತ್ತದವರೆಗೆ ದೇಹದಂಡಿಸಿಕೊಳ್ಳುತ್ತಾ ಮೆರವಣಿಗೆ ನಡೆಸಿದರು. ಬಾಲಕರು,
ಯುವಕರು ಸೇರಿದಂತೆ ವೃದ್ಧರು ರಕ್ತ ಸುರಿಯುತ್ತಿದ್ದರೂ ಲೆಕ್ಕಿಸದೆ ಕಬ್ಬಿಣದ ಸಂಕೋಲೆ, ಸರಳಿನಿಂದ ದೇಹ
ದಂಡಿಸಿಕೊಂಡರು.

ನಂತರ ವೃತ್ತದಲ್ಲಿ ಸಮಾವೇಶಗೊಂಡ ಧರ್ಮಗುರುಗಳು ಇಮಾಮ್‌ ಹುಸೇನ್‌ರ ಹೋರಾಟದ ಬಗ್ಗೆ ವಿವರಿಸಿದರು. ನೂರಾರು ಮುಸ್ಲಿಂ ಮಹಿಳೆಯರು ಪಾಲ್ಗೊಂಡಿದ್ದರು. ಈ ವೇಳೆ ವಾಹನ ಸವಾರರು ಸೇರಿದಂತೆ ಅನೇಕ ಜನರು ನೆರೆದಿದ್ದರು. ಮುಂಜಾಗ್ರತೆ ಕ್ರಮವಾಗಿ ಪೊಲೀಸ್‌ ಬಿಗಿ ಭದ್ರತೆ ಏರ್ಪಡಿಸಲಾಗಿತು

ಚಿಂಚೋಳಿ ಬಡಿದರ್ಗಾದಲ್ಲಿ ಮೊಹರಂ ಆಚರಣೆ 
ಚಿಂಚೋಳಿ: ಹಿಂದೂ ಮುಸ್ಲಿಮರ ಭಾವೈಕ್ಯತೆ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಪಟ್ಟಣ ಸೇರಿದಂತೆ
ತಾಲೂಕಿನ ಅನೇಕ ಗ್ರಾಮಗಳಲ್ಲಿ ಆಚರಿಸಲಾಯಿತು. ಪಟ್ಟಣದಲ್ಲಿ ಮೊಹರಂ ಹಬ್ಬದ ನಿಮಿತ್ತವಾಗಿ ಅಲಾಯಿ ಕೂಡಿಸುವ ಸ್ಥಳಗಳನ್ನು ವಿವಿಧ ಬಣ್ಣ ಅಲಂಕಾರಗಳಿಂದ ಸಿಂಗರಿಸಲಾಗಿತ್ತು.

Advertisement

ಗುರುವಾರ ಸಂಜೆ ಪಟ್ಟಣ ಬೀಬೀ ಫಾತಿಮಾ, ಚಂದಾ ಹುಸೇನಿ, ಹಸೇನ ಹುಸೇನಿ ಅಲಾಯಿ ಪೀರ ಬಡಿದರ್ಗಾ, ಚೋಟಿ ದರ್ಗಾ ಅಲ್ಲಿಸಾಬ್‌, ಮದರಸಾಬ್‌ ದರ್ಗಾ ಕೂಡಿಸಿದ ಪೀರ್‌ ಅಲಾಯಿಗಳಿಗೆ ಹಿಂದೂ-ಮುಸ್ಲಿಂ ಮಹಿಳೆಯರು ಹಸಿರು ಬಳೆ, ಉಡಿ ತುಂಬಿ ತಮ್ಮ ಹರಕೆ ಅರ್ಪಿಸಿದರು.

ಶುಕ್ರವಾರ ಮೊಹರಂ ಕೊನೆ ದಿನವಾಗಿರುವುದರಿಂದ ಅಲಾಯಿಗಳನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಪಟ್ಟಣದ 15 ಸ್ಥಳಗಳಲ್ಲಿ ಕೂಡಿಸಿದ ಅಲಾಯಿಗಳು ಬಡಿದರ್ಗಾಕ್ಕೆ ಬಂದು ಹಸೇನ-ಹುಸೇನಿ, ಚಂದಾ ಹುಸೇನಿ ಭೇಟಿ ಮಾಡಿ ತಮ್ಮ ಸ್ಥಳಗಳಿಗೆ ತೆರಳಿದರು.  ಬಡಿದರ್ಗಾದಲ್ಲಿ ಹುಲಿವೇಷ ಕುಣಿತ ಮತ್ತು ಮೊಹರಂ ಪದಗಳನ್ನು ಜನರು ನೋಡಿ ಆನಂದಿಸಿದರು.

364 ವರ್ಷಗಳಿಂದ ಆಚರಿಕೊಂಡು ಬರುತ್ತಿರುವ ಮೊಹರಂ ಹಬ್ಬವನ್ನು ನೋಡಲು ಸುತ್ತಲಿನ ಜನರು ಆಗಮಿಸಿದ್ದರು. ಬಡಿದರ್ಗಾ ಸಜ್ಜಾದೇ ನಶಿನ ಅಕಬರ ಹುಸೇನಿ ಸಾಹೇಬ ನೇತೃತ್ವದಲ್ಲಿ ಮೊಹರಂ ಅಚರಣೆ ಅದ್ಧೂರಿಯಾಗಿ ನಡೆಯಿತು.
 
ಪುರಸಭೆ ಮಾಜಿ ಅಧ್ಯಕ್ಷ ಕೆ.ಎಂ. ಬಾರಿ, ಮಕಬೂಲಖಾನ್‌, ಶಿವಕುಮಾರ ಕೊಳ್ಳೂರ, ಎಸ್‌.ಕೆ. ಮುಕ್ತಾರ, ನಿಯಾಜ್‌ ಅಲಿ, ಶ್ರೀಕಾಂತ ಜಾನಕಿ, ಸುಬ್ಬಣ್ಣ ತೋಡಿ ಇನ್ನಿತರರು ಭಾಗವಹಿಸಿದ್ದರು.

ತಾಲೂಕಿನ ಮರನಾಳ, ಹೂವಿನಬಾವಿ, ಸುಲೇಪೇಟ, ಚಂದನಕೇರಾ, ಕೋಡ್ಲಿ, ರಟಕಲ್‌, ಗಡಿಕೇಶ್ವಾರ, ನಿಡಗುಂದಾ, ಕುಂಚಾವರಂ ಇನ್ನಿತರ ಗ್ರಾಮಗಳಲ್ಲಿ ಮೊಹರಂ ಹಬ್ಬ ಆಚರಿಸಲಾಯಿತು. ಸಿಪಿಐ ಇಸ್ಮಾಯಿಲ್‌ ಶರೀಫ, ಪಿಎಸ್‌ಐ ಎ. ಎಸ್‌. ಪಟೇಲ್‌, ರಾಜಶೇಖರ ರಾಠೊಡ ಸೂಕ್ತ ಬಂದೋಬಸ್ತ್ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next