ನವದೆಹಲಿ:ಸಿಂಘು ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲಿ ಯುವಕನೊಬ್ಬನ ಕೈ, ಕಾಲು ಕತ್ತರಿಸಿದ ಶವವನ್ನು ಬ್ಯಾರಿಕೇಡ್ ಗೆ ಕಟ್ಟಿಹಾಕಿರುವ ಭೀಭತ್ಸ ಘಟನೆ ಶುಕ್ರವಾರ(ಅಕ್ಟೋಬರ್ 15) ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಡಿಕೆಶಿ ಕೆಪಿಸಿಸಿ ಅಧ್ಯಕ್ಷರಿರಬಹುದು ಆದರೆ ನನ್ನ ಮಿತ್ರರೂ ಹೌದು : ಬಿ.ವೈ.ವಿಜಯೇಂದ್ರ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದ (ಕುಂಡ್ಲಿ, ಸೋನಿಪತ್) ಪ್ರದೇಶದಲ್ಲಿ ಕೈ, ಕಾಲುಗಳನ್ನು ಕತ್ತರಿಸಿ ಹಾಕಿದ್ದ ಶವ ಇಂದು ಮುಂಜಾನೆ 5ಗಂಟೆಗೆ ಪತ್ತೆಯಾಗಿತ್ತು. ಈ ಘಟನೆಗೆ ಯಾರು ಕಾರಣ ಎಂಬ ಬಗ್ಗೆ ಮಾಹಿತಿ ಇಲ್ಲ. ಈ ಕುರಿತು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಕುರಿತ ವೈರಲ್ ವಿಡಿಯೋ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಡೆಪ್ಯುಟಿ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಹನ್ಸ್ ರಾಜ್ ತಿಳಿಸಿರುವುದಾಗಿ ಎನ್ ಎನ್ ಐ ವರದಿ ಮಾಡಿದೆ.
ಹರ್ಯಾಣದ ಸೋನಿಪತ್ ಜಿಲ್ಲೆಯ ಕುಂಡ್ಲಿಯಲ್ಲಿ ನಡೆದ ಕ್ರೂರ ಮತ್ತು ಹೇಯ ಕೃತ್ಯಕ್ಕೆ ಸಿಖ್ ಯೋಧರ ಗುಂಪು ನಿಹಾಂಗ್ಸ್ ಕಾರಣ ಎಂದು ಪ್ರಾಥಮಿಕ ವರದಿಯಲ್ಲಿ ದೂರಲಾಗಿದೆ. ಹತ್ಯೆಗೊಳಗಾದ ಯುವಕನ ಹಿಂದೆ ನಿಹಾಂಗ್ಸ್ ಗುಂಪು ನಿಂತಿರುವುದು ವಿಡಿಯೋದಲ್ಲಿ ದಾಖಲಾಗಿರುವುದಾಗಿ ವರದಿ ತಿಳಿಸಿದೆ.
ಹತ್ಯೆಗೀಡಾಗಿರುವ ಯುವಕನ ಗುರುತು ಇನ್ನಷ್ಟೇ ಪತ್ತೆಯಾಗಬೇಕಾಗಿದೆ. ವರದಿಯ ಪ್ರಕಾರ, ಯುವಕನನ್ನು ಥಳಿಸಿ ಕೊಂದ ನಂತರ ಆತನ ಶವವನ್ನು ಪೊಲೀಸ್ ಬ್ಯಾರಿಕೇಡ್ ಗೆ ಕಟ್ಟಿದ ಬಳಿಕ ಕೈ, ಕಾಲುಗಳನ್ನು ಕತ್ತರಿಸಲಾಗಿತ್ತು ಎಂದು ವರದಿ ಹೇಳಿದೆ.