ಬಜ್ಪೆ: ಎರಡು ದಿನಗಳ ಹಿಂದೆ ಮೂಡುಪೆರಾರ ನೆಲ್ಲಿಕಾಡು ತೋಡಿಗೆ ಕಾಲು ಜಾರಿ ಬಿದ್ದಿದ್ದ ದಿವಾಕರ(32) ಅವರ ಶವ ಎಕ್ಕಾರು ಕನಿಕಟ್ಟ ಸೇತುವೆ ಬಳಿ ಪತ್ತೆಯಾದರೆ, ಪಡುಪೆರಾರ ಗ್ರಾಮದ ಕತ್ತಲ್‌ಸಾರ್ ಕಲ್ಲಟ್ಟ- ಸಾಂತ್ರಬೈಲು ಬಳಿ ತೋಡಿಗೆ ಬಿದ್ದಿದ್ದ ಚಂದಸ್ರಹಾಸ ಶೆಟ್ಟಿ 53) ಅವರ ಶವ ಎಕ್ಕಾರು ಮೊಯ್ಲಿಬೆನ್ನಿ ಸೇತುವೆ ಬಳಿ ಶನಿವಾರ ಮಧ್ಯಾಹ್ನ ಪತ್ತೆಯಾಗಿದೆ.
ನೆಲ್ಲಿಕಾಡು ಮನೆಯ ನಿವಾಸಿ ದಿವಾಕರ ಕೂಲಿ ಕೆಲಸ ಮಾಡಿಕೊಂಡಿದ್ದು, ಗುರುವಾರ ಸಂಜೆ ಕೆಲಸದಿಂದ ವಾಪಾಸಾಗುವ ಸಂದರ್ಭ ಮನೆ ಬಳಿ ತೋಡಿನ ನೀರಿಗೆ ಕಾಲು ಜಾರಿ ಬಿದ್ದಿದ್ದರು.
ಕಲ್ಲಟ್ಟ- ಸಾಂತ್ರಬೈಲು ಕಿಂಡಿ ಆಣೆಕಟ್ಟಿನಲ್ಲಿ ಮನೆಕಡೆ ಹೋಗುತ್ತಿದ್ದ ಬಾಕಿಮಾರ್ ಕೋಡಿ ನಿವಾಸಿ ಚಂದ್ರಹಾಸ ಶೆಟ್ಟಿ ಕಾಲು ಜಾರಿ ತೋಡಿಗೆ ಬಿದ್ದಿದ್ದರು. ಇವರು ಎಂಆರ್‌ಪಿಎಲ್ ಗುತ್ತಿಗೆ ನೌಕರರಾಗಿದ್ದರು. ಇಬ್ಬರೂ ಬಿದ್ದ ತೋಡು ಒಂದೆಯಾಗಿದೆ. ಈ ತೋಡು ಎಕ್ಕಾರಿನಲ್ಲಿ ದೊಡ್ಡದಾಗಿ ನದಿ ಆಕಾರವನ್ನು ಪಡೆಯುತ್ತದೆ.
ಗುರುವಾರ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಬಜ್ಪೆ ಪೊಲೀಸರು ಆಗಮಿಸಿ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಶುಕ್ರವಾರ ತಣ್ಣೀರುಬಾವಿ ಮುಳುಗು ತಜ್ಞರು ಆಗಮಿಸಿ ಹುಡುಕಾಟ ನಡೆಸಿದ್ದರು. ಇದೀಗ ಶನಿವಾರ ಎಕ್ಕಾರು ಬಳಿ ದಿವಾಕರ ಮತ್ತು ಚಂದ್ರಹಾಸ ಅವರ ಶವ ಒಂದೇ ಕಡೆ ಪತ್ತೆಯಾಗಿದೆ.