Advertisement
ಮೇ ತಿಂಗಳಲ್ಲಷ್ಟೇ 70 ವರ್ಷ ಪೂರ್ತಿಗೊಳಿಸಿದ ವಿಲ್ಲೀಸ್ ನಿರಂತರವಾಗಿ ಕಾಡುತ್ತಿದ್ದ ಅನಾರೋಗ್ಯದಿಂದ ಬುಧವಾರ ನಿಧನ ಹೊಂದಿದರು. ಈ ಸಂದರ್ಭದಲ್ಲಿ 1983ರ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರನೇಕರು ವಿಲ್ಲೀಸ್ ವಿರುದ್ಧ ಆಡಿದ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ.
ಬಾಬ್ ವಿಲ್ಲೀಸ್ ಮೇಲಿನ ಮಾತನ್ನಾಡಿದ್ದು ಮೊನ್ನೆ ಇಂಗ್ಲೆಂಡ್ ಮೊದಲ ವಿಶ್ವಕಪ್ ಕ್ರಿಕೆಟ್ ಗೆದ್ದು ಸಂಭ್ರಮಿಸಿದಾಗ. 1983ರ ಪ್ರುಡೆನ್ಶಿಯಲ್ ವಿಶ್ವಕಪ್ ವೇಳೆ ವಿಲ್ಲೀಸ್ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಇಂಗ್ಲೆಂಡ್, ಸೆಮಿಫೈನಲ್‌ನಲ್ಲಿ ಭಾರತಕ್ಕೆ ಶರಣಾಗಿ ಕೂಟದಿಂದ ನಿರ್ಗಮಿಸಿತ್ತು. ಈ ಪಂದ್ಯದ ಹೀರೋ ಆಗಿ ಮೆರೆದವರು ಸಂದೀಪ್ ಪಾಟೀಲ್. ರನ್ ಚೇಸಿಂಗ್ ವೇಳೆ ವಿಲ್ಲೀಸ್ ಓವರ್ ಒಂದರಲ್ಲಿ ಪಾಟೀಲ್ ಸತತ 4 ಬೌಂಡರಿ ಬಾರಿಸಿದ್ದು ಆ ಕಾಲಕ್ಕೆ ದೊಡ್ಡ ಸುದ್ದಿ. ಕೊನೆಯಲ್ಲಿ ವಿಲ್ಲೀಸ್ ಓವರಿನಲ್ಲೇ ಪಾಟೀಲ್ ಗೆಲುವಿನ ಹೊಡೆತ ಬಾರಿಸುವ ಸಂದರ್ಭದಲ್ಲಿ, ವಿಲ್ಲೀಸ್ ಎಲ್ಲ ಫೀಲ್ಡರ್‌ಗಳನ್ನು ಸರ್ಕಲ್ ಒಳಕ್ಕೆ ಕರೆದು ಸರಾಗ ಬೌಂಡರಿಗೆ ಹಾದಿ ಮಾಡಿ ಕೊಟ್ಟಿದ್ದರು. ಇದಕ್ಕೂ ಮುನ್ನ 1982ರ ಓಲ್ಡ್ ಟ್ರಾಫರ್ಡ್ ಟೆಸ್ಟ್‌ನಲ್ಲಿ ವಿಲ್ಲೀಸ್ ಅವರ ಒಂದೇ ಓವರಿನಲ್ಲಿ ಸತತ 6 ಬೌಂಡರಿ ಬಾರಿಸಿದ ಹಿರಿಮೆಯೂ ಸಂದೀಪ್ ಪಾಟೀಲ್ ಅವರದಾಗಿತ್ತು.
Related Articles
Advertisement
ಕಪಿಲ್‌ಗೆ “ಬಡಿದದ್ದು’ ವಿಲ್ಲೀಸ್ ಮಾತ್ರ!“ನಾನು ಕ್ರಿಕೆಟ್ ಬದುಕಿನಲ್ಲಿ ಚೆಂಡಿನಿಂದ ಹೊಡೆಸಿ ಕೊಂಡದ್ದು ಒಮ್ಮೆ ಮಾತ್ರ. ಅದು ಬಾಬ್ ವಿಲ್ಲೀಸ್ ಎಸೆತ ವಾಗಿತ್ತು’ ಎಂದವರು ಮಾಜಿ ಕಪ್ತಾನ ಕಪಿಲ್‌ದೇವ್. “ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ವೇಳೆ ವಿಲ್ಲೀಸ್ ಶಾರ್ಟ್‌ಪಿಚ್ ಎಸೆತವಿಕ್ಕಿದ್ದರು. ಊಹಿಸಿದ್ದಕ್ಕಿಂತಲೂ ವೇಗದ ಎಸೆತ ಅದಾಗಿತ್ತು. ನಾನು ನಟರಾಜ ಶಾಟ್‌ಗೆ ಮುಂದಾಗಿದ್ದೆ. ಆದರೆ ಚೆಂಡು ನನ್ನ ಕಿವಿಗೆ ಬಡಿಯಿತು. ಬ್ಯಾಟಿಂಗ್ ವೇಳೆ ನಾನು ಚೆಂಡಿನ ಹೊಡೆತ ತಿಂದದ್ದು ಈ ಒಂದು ಸಂದರ್ಭದಲ್ಲಿ ಮಾತ್ರ’ ಎಂದು ಕಪಿಲ್ ನೆನಪಿಸಿಕೊಂಡರು. “ವಿಲ್ಲೀಸ್ ಓರ್ವ ಘಾತಕ ವೇಗಿ. ಅವರದು ಅದ್ಭುತವಾದ ಸುದೀರ್ಘ ರನ್‌ಅಪ್. ಚೆಂಡು ಅವರ ಕೈಯಿಂದ ಚಿಮ್ಮಿತೆಂದರೆ ಬ್ಯಾಟ್ಸ್‌ಮನ್ ಪಾಲಿಗೆ ಅದೊಂದು ಭಯಾನಕ ಕ್ಷಣವಾಗಿರುತ್ತಿತ್ತು. ಅವರೆಂದೂ ಬ್ಯಾಟ್ಸ್ ಮನ್‌ಗಳನ್ನು ದುರುಗುಟ್ಟಿ ನೋಡಿದವರಲ್ಲ, ಅಂಪಾಯರ್ ಬಳಿ ವಾದಿಸಿ ದವರಲ್ಲ. ಅವರಿಗೆ ಮಾತಿನಲ್ಲಿ ನಂಬಿಕೆ ಇರಲಿಲ್ಲ. ಬದಲಿಗೆ, ಚೆಂಡೇ ಮಾತಾ ಡಬೇಕೆಂದು ಬಯಸುತ್ತಿದ್ದರು. ವಿಲ್ಲೀಸ್ ನಿಜವಾದ ಲೆಜೆಂಡ್’ ಎಂದು ಕಪಿಲ್ ಅಗಲಿದ ಸಮಕಾಲೀನ ವೇಗಿಗೆ ನುಡಿನಮನ ಸಲ್ಲಿಸಿದ್ದಾರೆ. “ಕೆರಿಬಿಯನ್ ಶೈಲಿಯ ಬೌಲರ್’
ವೇಗದಲ್ಲಿ ಬಾಬ್ ವಿಲ್ಲೀಸ್ ವೆಸ್ಟ್ ಇಂಡೀಸಿನ ಮೈಕಲ್ ಹೋಲ್ಡಿಂಗ್, ಮಾಲ್ಕಂ ಮಾರ್ಷಲ್‌ಗೆ ಸರಿಸಮನಾದ ಬೌಲರ್ ಎಂದು ರೇಟಿಂಗ್ ಕೊಟ್ಟವರು ವಿಶ್ವಕಪ್ ವಿಜೇತ ತಂಡದ ಮತ್ತೂಬ್ಬ ಆಟಗಾರ ಯಶ್ಪಾಲ್ ಶರ್ಮ. “ಪಿಚ್ ಸಹಕರಿಸಿದ್ದೇ ಆದರೆ ವಿಲ್ಲೀಸ್ ನಿಜಕ್ಕೂ ಭಯಾನಕ. ಅವರು ಯಾರಿಗೂ ನಿರಾಳವಾಗಿರಲು ಆಸ್ಪದವನ್ನೇ ಕೊಟ್ಟವರಲ್ಲ. ಅಂಗಳದಲ್ಲಿ ಮಹಾಮೌನಿ. ಅವರ ಎಸೆತಗಳೇ ಎಲ್ಲವನ್ನೂ ಮಾತಾಡುತ್ತಿದ್ದವು’ ಎಂದು ಯಶ್ಪಾಲ್ ಹೇಳಿದರು. ಬಾಬ್ ವಿಲ್ಲೀಸ್ ರಚಿಸಿದ ಡ್ರೀಮ್ ಇಲೆವೆನ್
ತನ್ನ ಸಮಕಾಲೀನ ಕ್ರಿಕೆಟ್ ಸಾಧಕರನ್ನೊಳಗೊಂಡ “ಕನಸಿನ ಟೆಸ್ಟ್’ ತಂಡವೊಂದನ್ನು ಬಾಬ್ ವಿಲ್ಲೀಸ್ ರಚಿಸಿದ್ದರು. ಅದು ಹೀಗಿದೆ: ಬ್ಯಾರಿ ರಿಚರ್ಡ್ಸ್, ಸುನೀಲ್ ಗಾವಸ್ಕರ್, ವಿವಿಯನ್ ರಿಚರ್ಡ್ಸ್, ಗ್ರೆಗ್ ಚಾಪೆಲ್, ಜಾವೇದ್ ಮಿಯಾಂದಾದ್, ಇಯಾನ್ ಬೋಥಂ, ಅಲನ್ ನಾಟ್, ರಾಡ್ನಿ ಮಾರ್ಷ್, ಮಾಲ್ಕಂ ಮಾರ್ಷಲ್, ಡೆನ್ನಿಸ್ ಲಿಲ್ಲಿ, ಡೆರೆಕ್ ಅಂಡರ್‌ವುಡ್. ಬಾಬ್ ವಿಲ್ಲೀಸ್ ಸಾಧನೆ
ಟೆಸ್ಟ್: 90
ವಿಕೆಟ್: 325
ಅತ್ಯುತ್ತಮ: 43ಕ್ಕೆ 8
ಏಕದಿನ: 64
ವಿಕೆಟ್: 80
ಅತ್ಯುತ್ತಮ: 11ಕ್ಕೆ 4