Advertisement

ಬೂತ್‌ಮಟ್ಟದ ಕಾರ್ಯಕರ್ತರೇ ನಿಜವಾದ ಸೈನಿಕರು

02:26 PM Jan 06, 2018 | Team Udayavani |

ಸಂಡೂರು: ಗುಜರಾತ್‌ ರಾಜ್ಯದ ಚುನಾವಣೆ ನಂತರ ಕರ್ನಾಟಕ ರಾಜ್ಯದಲ್ಲಿ ಮುಂಬರುವ ವಿಧಾನ ಸಭಾ ಚುನಾವಣೆಯ ವಾತಾವರಣ ದೊಡ್ಡ ಯುದ್ಧದಂತೆ ನಿರ್ಮಾಣವಾಗಿದ್ದು, ಬೂತ್‌ ಮಟ್ಟದ ಕಾರ್ಯಕರ್ತರೇ ನಿಜವಾದ ಸೈನಿಕರಾಗಿದ್ದಾರೆ ಎಂದು ಎಐಸಿಸಿ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಹೇಳಿದರು.

Advertisement

ತಾಲೂಕಿನ ತೋರಣಗಲ್ಲಿನಲ್ಲಿ ಶುಕ್ರವಾರ ಸಂಡೂರು ಮತ್ತು ತೋರಣಗಲ್ಲು ಹೋಬಳಿ ಬೂತ್‌ಮಟ್ಟದ ಅಧ್ಯಕ್ಷರು, ಏಜೆಂಟರ್‌ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಗೆಲುವು ಸಾಧಿಸಬೇಕಾದರೆ ಬೂತ್‌ ಮಟ್ಟದ ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷದ ಸಾಧನೆಗಳನ್ನು ಮನೆಮನೆಗೆ ತಲುಪಿಸಬೇಕು ಎಂದರು. 

ಬಿಜೆಪಿಯವರು ಯಾವುದೇ ನೂತನ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಯುಪಿಎ ಸರ್ಕಾರ ತಂದ ಎಲ್ಲಾ ಯೋಜನೆಗಳನ್ನು ನಮ್ಮ ಯೋಜನೆಗಳೆಂದು ಸುಳ್ಳು ಹೇಳುತ್ತಿದ್ದಾರೆ. ನೋಟ್‌ಬ್ಯಾನ್‌, ಜಿಎಸ್‌ಟಿ ಜಾರಿಗೆ ತಂದು ಬಡವ ಜೀವನದ ಮೇಲೆ ಬರೆ ಎಳೆದಿದ್ದಾರೆ. ಬಿಜೆಪಿ ಸರ್ಕಾರ
ಶ್ರೀಮಂತರ ಪರವಾಗಿದೆ ಎಂದು ಟೀಕಿಸಿದರು. ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಹಾಗೂ ಯುಪಿಎ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ, ಆಹಾರಭದ್ರತೆ, ಅನಿಲಭಾಗ್ಯ, ಆಧಾರ್‌, ಅನ್ನಭಾಗ್ಯ, ಕ್ಷೀರಭಾಗ್ಯ, ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವಂತಹ ಮಹತ್ತರ ಯೋಜನೆಗಳನ್ನು ಜಾರಿ ಮಾಡಿದೆ ಎಂದರು.

 ಇಂದು ದೇಶದ ಎಲ್ಲ ರಾಜ್ಯಗಳೂ ಸಹ ಇದನ್ನು ಅನುಸರಿಸುತ್ತಿವೆ. ಇಂದು ದೇಶವನ್ನು ಆಹಾರದ ಮೇಲೆ, ಜಾತಿಯ ಮೇಲೆ ಬಿಜೆಪಿ ವಿಂಗಡಿಸುತ್ತಿದೆ. ಇದು ಮಾರಕ. ಸರ್ವರೂ ಒಂದೇ ಎಂಬ ತತ್ವವನ್ನು ಕಾಂಗ್ರೆಸ್‌ ತಳಹದಿ. ಉಚಿತ ಇಂದಿರಾ ಕ್ಯಾಂಟಿನ ಮೂಲಕ ಊಟ ನೀಡುವ ಕರ್ನಾಟಕದ ಬಹುದೊಡ್ಡ ಕೊಡುಗೆಯಾಗಿದೆ. ಮುಂದಿನ ದಿನಗಳಲ್ಲಿ ಈ ದೇಶದಲ್ಲಿ ಜಾತೀಯತೆ, ಆಹಾರ ಪದ್ದತಿ ಆಳ್ವಿಕೆ ನಡೆಸುವದನ್ನು ತಡೆಯಬೇಕು.  ತುಕಾರಾಂ, ಸಂತೋಷ್‌ ಲಾಡ್‌ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಎಐಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌. ಪಾಟೀಲ್‌ ಮಾತನಾಡಿ,
ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟದ್ದು ಕಾಂಗ್ರೆಸ್‌ ಸರ್ಕಾರ. ಬ್ರಿಟಿಷ್‌ ಮುಕ್ತ ಮಾಡಿದ ಕಾಂಗ್ರೆಸನ್ನು ಬಿಜೆಪಿಯವರು ಕಾಂಗ್ರೆಸ್‌ ಮುಕ್ತ ಎನ್ನುತ್ತಿದ್ದಾರೆ. ಆದರೆ ನಮ್ಮ ರಕ್ತದಲ್ಲಿ, ಬಡಜನರ ಮನದಲ್ಲಿ ಕಾಂಗ್ರೆಸ್‌ ಇದೆ. ಜಿಲ್ಲೆಯಲ್ಲಿ ಬಿಜೆಪಿ ಮುಕ್ತ ಮಾಡಿ ತುಕಾರಾಂ ಅವರನ್ನು ಗೆಲ್ಲಿಸಬೇಕು ಎಂದರು.

ಈ ದೇಶದಲ್ಲಿ ಹಿಂದೆ ಕೈ ಗುರುತಿಗೆ ಮತ ಹಾಕಿದರು. ಇಂದಿರಾ ಗಾಂ ಧಿಯವರಿಗೆ ಅಮ್ಮ ಎಂದು ಮತ ಹಾಕಿದರು. ಈಗ ಯೋಜನೆಗಳಿಂದ ಮತಹಾಕಿ. ಬೂತ ಮಟ್ಟದಲ್ಲಿ ಕಾಂಗ್ರೆಸ್‌ ಸಂಘಟಿಸಬೇಕು. ಅದಕ್ಕಾಗಿ ಕಾಲ ಬದಲಾದಂತೆ ಮತದಾರ ಬದಲಾಗಿ ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕಬೇಕು ಎಂದು ಕರೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಎಸ್‌. ಲಾಡ್‌ ಮಾತನಾಡಿ, ಈ ದೇಶದಲ್ಲಿ ಯುಪಿಎ ಸರ್ಕಾರ 7500 ಕೋಟಿ ರೂ. ರೈತರ ಸಾಲಮನ್ನಾಮಾಡಿತ್ತು. ಸಿದ್ದರಾಮಯ್ಯ ಸರ್ಕಾರ 10,000 ಕೋಟಿ ಸಾಲಮನ್ನಾ ಮಾಡಿ ಈ ರೈತರ ಹಿತಕ್ಕಾಗಿ ನಿಂತಿದೆ. ಅದರೆ, ಇಂದು ಬಿಜೆಪಿಯವರು ಸಾಲಮನ್ನಾ ಮಾಡಿ ಎಂದರೆ ಜಿಎಸ್‌ಟಿ ತೆರಿಗೆ ಹೊರೆ ಹೇರಿದರು. ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದ ಎಲ್ಲಾ ಯೋಜನೆಗಳನ್ನು ನಮ್ಮ ಸರ್ಕಾರದ ಯೋಜನೆಗಳು ಎಂದು ಮೋದಿ ಸರ್ಕಾರದವರು ಸುಳ್ಳು ಮಾಹಿತಿ ಜನತೆಗೆ ತಲುಪಿಸುತ್ತಿದ್ದಾರೆ ಎಂದು ಅರೋಪಿಸಿದರು.

Advertisement

ಸಂಸದೀಯ ಕಾರ್ಯದರ್ಶಿ ಈ. ತುಕರಾಂ ಮಾತನಾಡಿದರು. ಜಿಲ್ಲಾಧ್ಯಕ್ಷ ಶಿವಯೋಗಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಏಕಾಂಬರಪ್ಪ, ಅಶಾಲತಾ ಸೋಮಪ್ಪ, ಹೈಕ ಉಸ್ತುವಾರಿ ಶೈಲಜನ್‌, ವೆಂಕಟರಾವ್‌ ಘೋರ್ಪಡೆ, ವಸಂತಕುಮಾರ ಗೌಡ, ರಾಧಾಕೃಷ್ಣ, ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next