ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ಪ್ರಯಾಣಿಕನೊಬ್ಬ ಬಿಎಂಟಿಸಿ ವೋಲ್ವೋ ಬಸ್ ನಿರ್ವಾಹನ ಹೊಟ್ಟೆಗೆ ಚಾಕುವಿನಿಂದ ಇರಿದಿರುವ ಘಟನೆ ವೈಟ್ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಂಗಳವಾರ ಸಂಜೆ ಸುಮಾರು 7 ಗಂಟೆಗೆ ವೈಟ್ಫೀಲ್ಡ್ನ ಐಟಿಪಿಎಲ್ ಸಮೀಪದ ವೈದೇಹಿ ಆಸ್ಪತ್ರೆ ಜಂಕ್ಷನ್ನಲ್ಲಿ
ಬಳಿ ಘಟನೆ ನಡೆದಿದ್ದು, ಬಿಎಂಟಿಸಿ ವೋಲ್ವೋ ಬಸ್ ನಿರ್ವಾಹಕ ಯೋಗೇಶ್(35) ಚಾಕು ಇರಿತಕ್ಕೊಳಗಾದವರು. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ
ಸಂಬಂಧ ಜಾರ್ಖಂಡ್ ಮೂಲದ ಹರ್ಷ ಸಿನ್ಹಾ (25) ಎಂಬಾತನನ್ನು ಬಂಧಿಸಲಾಗಿದೆ.
ಬಿಎಂಟಿಸಿ ವೋಲ್ವೋ ಬಸ್ ವೈಟ್ಫೀಲ್ಡ್ನ ಐಟಿಪಿಎಲ್ ಕಡೆಯಿಂದ ಹೂಡಿ ಕಡೆ ಹೋಗುತ್ತಿತ್ತು. ಆಗ ಹೂಡಿಗೆ ತೆರಳಲು ಬಸ್ ಏರಿದ ಹರ್ಷ ಸಿನ್ಹಾ ಬಾಗಿಲ ಬಳಿ ನಿಂತಿದ್ದಾನೆ. ಈ ವೇಳೆ ನಿರ್ವಾಹಕ ಯೋಗೇಶ್ ಮುಂದೆ ಹೋಗುವಂತೆ ಹೇಳಿದ್ದಾರೆ.
ಅದರಿಂದ ಕೋಪಗೊಂಡ ಆರೋಪಿ ಏಕಾಏಕಿ ಚಾಕು ತೆಗೆದು ಯೋಗೇಶ್ ಹೊಟ್ಟೆಗೆ ಇರಿದು ಹಲ್ಲೆ ಮಾಡಿದ್ದಾನೆ.
ತಕ್ಷಣ ರಕ್ತಸ್ರಾವವಾಗಿ ಕುಸಿದು ಬಿದ್ದ ನಿರ್ವಾಹಕ ಯೋಗೇಶ್ನನ್ನು ಪ್ರಯಾಣಿಕರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಜಾರ್ಖಂಡ್ ಮೂಲದ ಆರೋಪಿ ಹರ್ಷ ಸಿನ್ಹಾ ನಗರದ ಟೆಲಿಪರ್ಫಾಮೆನ್ಸ್ ಎಂಬ ಬಿಪಿಒ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ತಿಂಗಳು ಈತನನ್ನು ಕಂಪನಿ ಕೆಲಸದಿಂದ ತೆಗೆದು ಹಾಕಿತ್ತು ಎಂದು ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು