Advertisement

ಬಿಎಂಟಿಸಿ ಕೈಲಿದೆ ಟ್ರಾಫಿಕ್‌ಜಾಮ್‌ ತಗ್ಗಿಸೋ ಅಸ್ತ್ರ!

07:42 AM Jul 27, 2019 | Team Udayavani |

ಬೆಂಗಳೂರು: ಆರ್ಥಿಕ ಸಂಕಷ್ಟದಲ್ಲಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮನಸ್ಸು ಮಾಡಿದರೆ, ಸರ್ಕಾರದ ಸಹಾಯಹಸ್ತ ಇಲ್ಲದೆ ಶೇ.15-20ರಷ್ಟು ಆದಾಯ ಹೆಚ್ಚಿಸಿಕೊಳ್ಳಬಹುದು. ಜತೆಗೆ ವಾಹನಗಳ ದಟ್ಟಣೆ ಮತ್ತು ಹೊಗೆ ಪ್ರಮಾಣವನ್ನೂ ತಗ್ಗಿಸಬಹುದು.

Advertisement

ಇದಕ್ಕಾಗಿ ಬಿಎಂಟಿಸಿ ಮಾಡಬೇಕಿರುವುದು ಇಷ್ಟೇ- ಈಗಿರುವ ಪ್ರಯಾಣ ದರಪಟ್ಟಿಯನ್ನು ಪರಿಷ್ಕರಣೆ ಮಾಡಬೇಕು ಹಾಗೂ ಯೋಜಿತ ಮತ್ತು ಪ್ರಸ್ತಾವಿತ ಮೆಟ್ರೋ ಮಾರ್ಗಗಳು ಇಲ್ಲದಿರುವ ಕೆಲವು ಪ್ರಮುಖ ರಸ್ತೆಗಳಲ್ಲಿ ಬಸ್‌ಗಳ ಸಂಚಾರಕ್ಕೆ ಪ್ರತ್ಯೇಕ ಮಾರ್ಗಗಳನ್ನು ಮೀಸಲಿಡಬೇಕು. ಇದರಿಂದ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಶೇ.6ರಿಂದ 8ರಷ್ಟು ಏರಿಕೆ ಆಗಲಿದ್ದು, ಶೇ.15ರಿಂದ 20ರಷ್ಟು ಆದಾಯ ಹೆಚ್ಚಳ ಆಗಲಿದೆ. ಈ ಮೂಲಕ ರಸ್ತೆಗಳ ಮೇಲಿನ ವಾಹನಗಳ ಒತ್ತಡ, ದಟ್ಟಣೆಯೂ ತಕ್ಕಮಟ್ಟಿಗೆ ತಗ್ಗಲಿದೆ.

ಹೀಗಂತ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಮೂಲ ಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ ವಿಭಾಗ ಹೇಳುತ್ತಿದೆ. ಬಿಎಂಟಿಸಿಯು ಈ ಮೊದಲು ದೇಶದಲ್ಲಿ ಲಾಭದಲ್ಲಿ ನಡೆಯುತ್ತಿರುವ ಏಕೈಕ ನಗರ ಸಮೂಹ ಸಾರಿಗೆ ಸಂಸ್ಥೆಯಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ನಷ್ಟದಲ್ಲಿ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಐಐಎಸ್ಸಿ ವಿಜ್ಞಾನಿಗಳು ಅಧ್ಯಯನ ನಡೆಸಿ, ಈಚೆಗೆ ವರದಿ ಸಲ್ಲಿಸಿದ್ದಾರೆ. 2019ರ ಮೇ ತಿಂಗಳು ಮುಂಬೈನಲ್ಲಿ ನಡೆದ ಸಾರಿಗೆ ಸಂಶೋಧನೆ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಕೂಡ ಆ ವರದಿಯ ಪ್ರಾತ್ಯಕ್ಷಿಕೆ ನೀಡಲಾಗಿದೆ.

ನಗರದ ಬಸ್‌ಗಳಲ್ಲಿ ಸಂಚರಿಸುವವರ ಪೈಕಿ ಹೆಚ್ಚಿನ ಪ್ರಯಾಣಿಕರು ಕಡಿಮೆ ಅಂತರ ಪ್ರಯಾಣಿಸುತ್ತಿರುವುದು ಕಂಡುಬಂದಿದೆ. ಆದರೆ, ಬಿಎಂಟಿಸಿಯಲ್ಲಿ ಪ್ರಸ್ತುತ ಇರುವ ಪ್ರಯಾಣ ದರ ಪಟ್ಟಿಯಲ್ಲಿ ಮೊದಲ ಕೆಲವು ಹಂತಗಳಲ್ಲಿ ಅತಿಯಾಗಿ ದರ ಏರಿಕೆ ಆಗುತ್ತಾ ಹೋಗುತ್ತದೆ. ದೀರ್ಘ‌ ಅಂತರದ ಪ್ರಯಾಣ ದರ ಕಡಿಮೆ ಇದೆ. ಆದರೆ, ಇದು ಪ್ರಯಾಣಿಕರು ಹಿಂದೇಟು ಹಾಕುವಂತೆ ಮಾಡುತ್ತಿದೆ. ಹಾಗಾಗಿ, ಕಡಿಮೆ ಅಂತರದ ಪ್ರಯಾಣ ದರವನ್ನು ಪರಿಷ್ಕರಿಸುವ ಅಗತ್ಯವಿದೆ ಎಂದು ವರದಿಯಲ್ಲಿ ಅಭಿಪ್ರಾಯಪಟ್ಟಿದೆ. ಜತೆಗೆ ಪ್ರಸ್ತುತ ಮತ್ತು ಪರಿಷ್ಕರಣೆ ಮಾಡಬಹುದಾದ ದರ ಪಟ್ಟಿಯನ್ನೂ ವರದಿಯಲ್ಲಿ ನೀಡಲಾಗಿದೆ. ಅದರಂತೆ ಆರಂಭದ 2ರಿಂದ 12 ಕಿ.ಮೀ. ಒಳಗಿನ ಮೊದಲ 6 ಹಂತಗಳಲ್ಲಿ ಬಿಎಂಟಿಸಿ ನಿಗದಿಪಡಿಸಿರುವ ಪ್ರಯಾಣ ದರ 5 ರೂ.ಗೆ ಆರಂಭಗೊಂಡು 20 ರೂ.ಗಳಿಗೆ ನಿಲ್ಲುತ್ತದೆ. ಪ್ರಸ್ತಾವಿತ ದರ 7 ರೂ.ಗೆ ಆರಂಭಗೊಂಡು 17 ರೂ.ಗೆ ನಿಲ್ಲುತ್ತದೆ. ಈ ಮಧ್ಯೆ ಇರುವ ಹಂತಗಳಲ್ಲಿ ಪ್ರಸ್ತಾವಿತ ದರದಲ್ಲಿ 3ರಿಂದ 4 ರೂ. ವ್ಯತ್ಯಾಸ ಇದೆ.

Advertisement

ಇಲ್ಲಿ ಬೇಕಿದೆ ಬಸ್‌ಗೆ ಪ್ರತ್ಯೇಕ ಮಾರ್ಗ: ಕೆಲವು ನಿರ್ದಿಷ್ಟ ಮಾರ್ಗಗಳಲ್ಲಿ ‘ಪೀಕ್‌ ಅವರ್‌’ನಲ್ಲಿ ಬಸ್‌ಗಳ ವೇಗ ಗಂಟೆಗೆ 5 ಕಿ.ಮೀ.ಗಿಂತ ಕಡಿಮೆ ಇದೆ. ಹಾಗಾಗಿ, ಬಸ್‌ ಕಾರ್ಯಾಚರಣೆ ಮೇಲೆ ಪರಿಣಾಮ ಬೀರುತ್ತಿದ್ದು, ಜನ ಬಸ್‌ ಹತ್ತಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತಹ ಕಡೆಗಳಲ್ಲಿ ಬಸ್‌ ಸಂಚಾರಕ್ಕಾಗಿ ಪ್ರತ್ಯೇಕ ಮಾರ್ಗ ಮೀಸಲಿಡಬೇಕು. ನಗರದ ಹೃದಯ ಭಾಗದಿಂದ ಲುಂಬಿನಿ ಗಾರ್ಡನ್‌, ಕಾಡುಗೋಡಿ, ವೈಟ್ಫೀಲ್ಡ್ ಮತ್ತು ಕೋರಮಂಗಲದಿಂದ ಇಂದಿರಾನಗರ ಮೆಟ್ರೋ ನಿಲ್ದಾಣದ ನಡುವೆ ಪ್ರತ್ಯೇಕ ಮಾರ್ಗ ಮೀಸಲಿಡುವ ಅವಶ್ಯಕತೆ ಇದೆ. ಇದರಿಂದ ಬಸ್‌ಗಳ ವೇಗಮಿತಿ ಗಂಟೆಗೆ 30 ಕಿ.ಮೀ. ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತಾವಿತ ಮಾರ್ಗಗಳಲ್ಲಿ ಪ್ರಸ್ತುತ ಹಾಗೂ ಭವಿಷ್ಯದಲ್ಲಿ ಯಾವುದೇ ಮೆಟ್ರೋ ಹಾದುಹೋಗುವುದಿಲ್ಲ. ಜತೆಗೆ ಪ್ರತ್ಯೇಕ ಮಾರ್ಗಕ್ಕೆ ಪೂರಕವಾದ ರಸ್ತೆಯೂ ಇಲ್ಲಿದೆ. ಇದು ಸಾಧ್ಯವಾದರೆ, ಖಾಸಗಿ ವಾಹನಗಳ ದಟ್ಟಣೆ ಕಡಿಮೆಯಾಗಲಿದ್ದು, ಜನ ಬಿಎಂಟಿಸಿ ಬಸ್‌ಗಳ ಮೊರೆಹೋಗಲಿದ್ದಾರೆ. ರಸ್ತೆಗಳ ಮೇಲಿನ ವಾಹನಗಳ ಸಾಂದ್ರತೆ ಕಡಿಮೆಯಾಗುವ ಜತೆಗೆ, ವಾಯು ಮಾಲಿನ್ಯ ಪ್ರಮಾಣ ತಗ್ಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.

400 ಮೀಟರ್‌ಗೊಂದು ಬಿಎಂಟಿಸಿ ಬಸ್‌ ನಿಲ್ದಾಣ:

ಬಿಎಂಟಿಸಿ ಸ್ಟಾಂಡರ್ಡ್‌ ಹಂತ 2 ಕಿ.ಮೀ. ಆಗಿದ್ದು, ದೇಶದ ಬಹುತೇಕ ನಗರ ಸಾರಿಗೆ ಸಂಸ್ಥೆಗಳು ಇದೇ ಮಾದರಿಯನ್ನು ಅನುಸರಿಸುತ್ತಿವೆ. ಬಿಎಂಟಿಸಿ ಬಸ್‌ಗಳು ಕಾರ್ಯಾಚರಣೆ ಮಾಡುವ ಒಟ್ಟಾರೆ ವ್ಯಾಪ್ತಿಯಲ್ಲಿ ಬರುವ ಪ್ರತಿ ನಿಲ್ದಾಣಗಳ ನಡುವಿನ ಅಂತರ ಸರಾಸರಿ 670 ಮೀಟರ್‌ ಇದೆ. ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೀಗೆ ನಗರ ಸಮೂಹ ಸಾರಿಗೆ ಬಸ್‌ ನಿಲ್ದಾಣಗಳ ನಡುವಿನ ಅಂತರ 400 ಮೀ. ಅಂದರೆ ಹೆಚ್ಚು-ಕಡಿಮೆ ಸರಾಸರಿ ಪ್ರತಿ ಅರ್ಧ ಕಿ.ಮೀ.ಗೊಂದು ಬಸ್‌ ನಿಲುಗಡೆ ಇರಬೇಕು. ಇದರಿಂದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಮೂಹ ಸಾರಿಗೆಯತ್ತ ಮುಖಮಾಡುತ್ತಾರೆ. ಜತೆಗೆ ಲಾಸ್ಟ್‌ಮೈಲ್ ಕನೆಕ್ಟಿವಿಟಿಗೂ ಇದು ಪೂರಕ ಎಂದು ತಜ್ಞರು ವಿಶ್ಲೇಷಿಸುತ್ತಾರೆ.

 

● ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next