ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆಗೆ ಸರ್ಕಾರ ಚಿಂತನೆ ನಡೆಸಿದ್ದು, ಸಾಧ್ಯವಾದರೆ ಬಜೆಟ್ ಅಧಿವೇಶನ ಅವಧಿಯಲ್ಲೇ ಇದಕ್ಕೆ ಅನುಮೋದನೆ ಪಡೆದು ಜಾರಿಗೊಳಿಸುವ ಉದ್ದೇಶ ಇದೆ. ಹಾಗಾಗಿ, ತಿಂಗಳಲ್ಲಿ ಇದರ ಬಿಸಿ ಬಸ್ ಪ್ರಯಾಣಿಕರಿಗೆ ತಟ್ಟುವ ನಿರೀಕ್ಷೆ ಇದೆ.
Advertisement
ಸ್ವತಃ ಸಾರಿಗೆ ಸಚಿವ ಲಕ್ಷ್ಮಣ ಸವದಿ ನಗರ ಸಾರಿಗೆಗಳ ಪ್ರಯಾಣ ದರ ಏರಿಕೆ ಸುಳಿವು ನೀಡಿದ್ದಾರೆ. ಇದಕ್ಕೆ ಸಚಿವರು ನೀಡಿದ ಸಮಜಾಯಿಷಿ- “ಕಳೆದ ವರ್ಷ ಕೆಎಸ್‌ಆರ್‌ಟಿಸಿ ಸೇರಿ ಮೂರು ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ದರ ಏರಿಕೆ ಮಾಡಲಾಗಿತ್ತು. ಬಿಎಂಟಿಸಿ ಮಾತ್ರ ಹೊರಗುಳಿದಿತ್ತು. ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟದಲ್ಲಿದ್ದು, ಈ ಮಧ್ಯೆ ಡೀಸೆಲ್ ಬೆಲೆ ಕೂಡ ಹೆಚ್ಚಳವಾಗಿದೆ. ಹಾಗಾಗಿ, ಬಸ್ ಪ್ರಯಾಣ ದರ ಹೆಚ್ಚಿಸುವ ಚಿಂತನೆ ಮಾಡಬೇಕಾಗಿದೆ’.
Related Articles
Advertisement
ನಾಲ್ಕೂ ನಿಗಮಗಳು ಸೇರಿ ನಾಲ್ಕು ಸಾವಿರ ಕೋಟಿ ರೂ. ಆದಾಯದಲ್ಲಿ ಖೋತಾ ಆಗಿದ್ದು, 2,780 ಕೋಟಿ ರೂ. ನಷ್ಟ ಉಂಟಾಗಿದೆ. ಕೊರೊನಾ ಹಾವಳಿಗೂ ಮುನ್ನ 1,508 ಕೋಟಿ ರೂ. ನಷ್ಟ ಆಗಿತ್ತು. ಬಿಎಂಟಿಸಿಯಲ್ಲಿ ಕೋವಿಡ್ ಪೂರ್ವದ ಸ್ಥಿತಿಗೆ ಹೋಲಿಸಿದರೆ, ಶೇ. 60ರಷ್ಟು ಪ್ರಯಾಣಿಕರು ಬರುತ್ತಿದ್ದು, ಉಳಿದ ನಿಗಮಗಳ ಬಸ್‌ಗಳಲ್ಲಿ ಶೇ. 85ರಷ್ಟು ಪ್ರಯಾಣಿಕರು ವಾಪಸ್ಸಾಗಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ, ಮುಂದಿನ ಎರಡು ತಿಂಗಳಲ್ಲಿ ಸಂಪೂರ್ಣ ಸಹಜಸ್ಥಿತಿಗೆ ಹಿಂತಿರುಗಲಿದ್ದೇವೆ ಎಂದ ಅವರು, ಡೀಸೆಲ್ ದರ ಏರಿಕೆ ಬಿಸಿ ತಕ್ಷಣಕ್ಕೆ ನಿಗಮಗಳಿಗೆ ತಟ್ಟುವುದಿಲ್ಲ. ಯಾಕೆಂದರೆ, ಒಪ್ಪಂದದ ಪ್ರಕಾರ 15 ದಿನಗಳಿಗೊಮ್ಮೆ ಪಾವತಿ ಆಗುತ್ತದೆ. ಜತೆಗೆ ಪ್ರತಿ ಲೀಟರ್‌ಗೆ 3.20 ರೂ. ರಿಯಾಯ್ತಿ ದರದಲ್ಲಿ ಪೂರೈಕೆ ಆಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
3 ಸಾವಿರ ಬಸ್‌ಗಳಿಗೆ ಪ್ರಸ್ತಾವ3 ಸಾವಿರ ಬಸ್‌ಗಳ ಖರೀದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಲ್ಲಿ ಎಲೆಕ್ಟ್ರಿಕ್ ಬಸ್‌ಗಳೂ ಸೇರಿವೆ ಎಂದು ಲಕ್ಷ್ಮಣ ಸವದಿ ತಿಳಿಸಿದರು. 9 ಲಕ್ಷ ಕಿ.ಮೀ. ದಾಟಿದ ನೂರಾರು ಬಸ್‌ಗಳು ಗುಜರಿಗೆ ಹೋಗಲಿವೆ. ಇದಕ್ಕೆ ಪ್ರತಿಯಾಗಿ ಬ್ಯಾಂಕಿನಲ್ಲಿ ಪಡೆದ ಸಾಲದಿಂದ ಸುಮಾರು 600-700 ಬಸ್‌ಗಳ ಖರೀದಿಸಲಾಗುತ್ತಿದೆ. ಇದಲ್ಲದೆ, 300 ಎಲೆಕ್ಟ್ರಿಕ್ ಬಸ್‌ಗಳೂ ಬರಲಿವೆ. ಜತೆಗೆ ಇನ್ನೂ 3 ಸಾವಿರ ಬಸ್‌ಗಳ ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಅಧಿವೇಶನ ನಂತರ ಕ್ರಮ
ಬಜೆಟ್ ಅಧಿವೇಶನ ಮುಗಿದ ನಂತರ ಸಾರಿಗೆ ನೌಕರರಿಗೆ 6ನೇ ವೇತನ ಆಯೋಗ ಜಾರಿ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು. ಒಟ್ಟು ಒಂಬತ್ತು ಬೇಡಿಕೆಗಳ ಪೈಕಿ ಈಗಾಗಲೇ ಆರು ಈಡೇರಿಸಲಾಗಿದೆ. ಉಳಿದ ಮೂರರಲ್ಲಿ 6ನೇ ವೇತನ ಆಯೋಗ ಜಾರಿಗೆ ಸಮಿತಿ ರಚಿಸಲಾಗಿದೆ. ಅಧಿವೇಶನ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದ ಅವರು, ರೈತ ಮುಖಂಡ ಕೋಡೀಹಳ್ಳಿ ಚಂದ್ರಶೇಖರ್ ಅವರಿಗೂ ಸಾರಿಗೆ ನಿಗಮಗಳಿಗೂ ಸಂಬಂಧ ಇಲ್ಲ ಎಂದು ಪುನರುತ್ಛರಿಸಿದರು.