Advertisement

ಬಿಎಂಟಿಸಿಗೆ ಮೆಟ್ರೋ ರೀತಿ ಆದ್ಯತೆ ಸಿಗಲಿ

11:59 AM Jun 18, 2017 | |

ಬೆಂಗಳೂರು: ಐದು ಲಕ್ಷ ಪ್ರಯಾಣಿಕರನ್ನು ಹೊತ್ತೂಯ್ಯುವ “ನಮ್ಮ ಮೆಟ್ರೋ’ಗೆ ನಿಡುವಷ್ಟೇ ಆದ್ಯತೆಯನ್ನು 50 ಲಕ್ಷ ಪ್ರಯಾಣಿಕರನ್ನು ಕೊಂಡೊಯ್ಯುತ್ತಿರುವ ಬಿಎಂಟಿಸಿಗೂ ನೀಡಬೇಕು ಎಂದು ಸಿಎಂಗೆ ಒಕ್ಕೊರಲಿನಿಂದ ಒತ್ತಾಯಿಸಲಾಗಿದೆ. 

Advertisement

ನಗರದ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಶನಿವಾರ ಬಿಎಂಟಿಸಿ ಹಮ್ಮಿಕೊಂಡಿದ್ದ ಸ್ಮಾರ್ಟ್‌ ಕಾರ್ಡ್‌, ವಿವಿಧ ಮಾದರಿಯ ನೂತನ ಬಸ್‌ಗಳು ಮತ್ತು ಕೆಂಪೇಗೌಡ ಬಸ್‌ ನಿಲ್ದಾಣದ ನವೀಕೃತ ಮೇಲ್ಸೇತುವೆ ಲೋಕಾರ್ಪಣೆಯಲ್ಲಿ ಸಾರಿಗೆ ಸಚಿವರು ಸೇರಿದಂತೆ ಗಣ್ಯರಿಂದ ಈ ಕೂಗು ಕೇಳಿಬಂತು. 

“ನಮ್ಮ ಮೆಟ್ರೋ’ದಿಂದ ಬಿಎಂಟಿಸಿ ಎದುರಿಸಲಿರುವ ನಷ್ಟದ ಆತಂಕವನ್ನೂ ವ್ಯಕ್ತಪಡಿಸಿದ ಗಣ್ಯರು, ಮೆಟ್ರೋ ಸೇವೆಗೆ ಆದ್ಯತೆ ನೀಡುವಂತೆಯೇ ಬಸ್‌ ಸೇವೆಗೂ ನೀಡಬೇಕು ಎಂದು ಸಿಎಂಗೆ ಮನವಿ ಮಾಡಿದರು. 

ಮೆಟ್ರೋದಿಂದ ನಷ್ಟ ಆಗಲ್ಲ: ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಮೆಟ್ರೋದಿಂದ ಬಿಎಂಟಿಸಿ ಬಸ್‌ಗಳಿಗೆ ನಷ್ಟ ಆಗುವುದಿಲ್ಲ. ಬೆಂಗಳೂರಲ್ಲಿ ಜನಸಂಖ್ಯೆ ಹೆಚ್ಚಾಗಲಿದೆ. ಮೆಟ್ರೋಗೆ ಪೂರಕವಾಗಿ ಬಸ್‌ ಸಂಪರ್ಕ ಸೇವೆ ಕಲ್ಪಿಸಲಾಗುತ್ತಿದೆ. ಹಾಗಾಗಿ, ನಷ್ಟ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. 

ಬಿಎಂಟಿಸಿ ಮೇಲಿನ ಒತ್ತಡ ಕಡಿಮೆ ಮಾಡಲು ಮೆಟ್ರೋ ಸೇರಿದಂತೆ ಹೆಚ್ಚು-ಹೆಚ್ಚು ಸಾರಿಗೆ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದೂ ಇದೇ ವೇಳೆ ತಿಳಿಸಿದರು. ಸಚಿವ ಕೆ.ಜೆ.ಜಾರ್ಜ್‌, ವಿಧಾನಪರಿಷತ್‌ ಸದಸ್ಯ ನಾರಾಯಣಸ್ವಾಮಿ, ಮೇಯರ್‌ ಪದ್ಮಾವತಿ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಏಕರೂಪ್‌ ಕೌಲ್‌, ಬಿಎಂಟಿಸಿ ಉಪಾಧ್ಯಕ್ಷ ಗೋವಿಂದರಾಜು ಉಪಸ್ಥಿತರಿದ್ದರು.

Advertisement

ತಾರತಮ್ಯ ಮಾಡುವ ಉದ್ದೇಶ ಇಲ್ಲ; ಸಿಎಂ: ಮಕ್ಕಳ ವಿಚಾರದಲ್ಲಿ ತಾರತಮ್ಯ ಮಾಡುವ ಯಾವುದೇ ಉದ್ದೇಶ ಇಲ್ಲ. ಎಸ್‌ಇಪಿ-ಟಿಎಸ್‌ಪಿ ಅನುದಾನದಲ್ಲಿ ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ಮಕ್ಕಳಿಗೆ ಉಚಿತ ಬಸ್‌ ಪಾಸುಗಳನ್ನು ನೀಡುತ್ತಿದೆ. 

– ಉಚಿತ ಬಸ್‌ ಪಾಸುಗಳನ್ನು ಎಸ್ಸಿ-ಎಸ್‌ಟಿ ಮಕ್ಕಳಿಗೆ ಮಾತ್ರವಲ್ಲ; ಮಧ್ಯಮ ವರ್ಗದ ಮಕ್ಕಳಿಗೂ ನೀಡಬೇಕು ಎಂದು ಮುಖ್ಯಮಂತ್ರಿ ಭಾಷಣದ ವೇಳೆ ಸಭಿಕರೊಬ್ಬರಿಂದ ಕೇಳಿಬಂದ ಅಭಿಪ್ರಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಸ್ಪಷ್ಟನೆ ಇದು. 

ಎಸ್‌ಇಪಿ-ಟಿಎಸ್‌ಪಿ ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮಾತ್ರ ಬಳಸಲು ಅವಕಾಶ ಇರುತ್ತದೆ. ಹಾಗಾಗಿ, ಸಮಾಜ ಕಲ್ಯಾಣ ಇಲಾಖೆಯೇ ಉಚಿತ ಬಸ್‌ ಪಾಸುಗಳನ್ನು ನೀಡುತ್ತಿದೆ. ಮಕ್ಕಳಲ್ಲಿ ತಾರತಮ್ಯ ಮಾಡುವ ಯಾವುದೇ ಉದ್ದೇಶ ಇದರಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು. 

ನವೆಂಬರ್‌ ಹೊತ್ತಿಗೆ ಎಲ್ಲರಿಗೂ ಸ್ಮಾರ್ಟ್‌ ಕಾರ್ಡ್‌: ಕನ್ನಡ ರಾಜ್ಯೋತ್ಸವದ ಹೊತ್ತಿಗೆ ನಗರದ ಪ್ರತಿಯೊಬ್ಬರಿಗೂ ಬಿಎಂಟಿಸಿ ಸ್ಮಾರ್ಟ್‌ ಕಾರ್ಡ್‌ ದೊರೆಯಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.  ಬಹುಪಯೋಗಿ ಸ್ಮಾರ್ಟ್‌ ಕಾರ್ಡ್‌ ಬಿಡುಗಡೆ ಮಾಡಿದ ನಂತರ ಮಾತನಾಡಿದರು. 

“ನಗದು ರಹಿತ ವ್ಯವಹಾರಗಳಿಗೆ ಉತ್ತೇಜನ ನೀಡಲು ಸ್ಮಾರ್ಟ್‌ಕಾರ್ಡ್‌ ಆಧಾರಿತ ಫೇರ್‌ ಕಲೆಕ್ಷನ್‌ ಸಿಸ್ಟ್‌ಂ ಯೋಜನೆ ಜಾರಿಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಓಪನ್‌ ಲೂಪ್‌ ಸ್ಮಾರ್ಟ್‌ ಕಾರ್ಡ್‌ ಆಧಾರಿತ ಫೇರ್‌ ಕಲೆಕ್ಷನ್‌ ಸಿಸ್ಟ್‌ಂ ಎಂಬ ನವೀನ ವಿಧಾನವನ್ನೂ ಪರಿಚಯಿಸಲಾಗುತ್ತಿದೆ. ದೇಶದಲ್ಲೇ ಮೊದಲ ಬಾರಿಗೆ ಈ ಮಾದರಿಯ ಸೇವೆ ಪರಿಚಯಿಸುತ್ತಿರುವ ಮೊದಲ ಸಂಸ್ಥೆ ಬಿಎಂಟಿಸಿ,’ ಎಂದರು. 

ಸ್ಮಾರ್ಟ್‌ ಕಾರ್ಡ್‌ ಉಪಯೋಗ
* ಈ ಕಾರ್ಡ್‌ನ್ನು ಬಸ್‌ ಅಲ್ಲದೆ, ಆಟೋ/ ಕಾರು ಪ್ರಯಾಣ, ಹೋಟೆಲ್‌, ಮಾಲ್‌ಗ‌ಳಲು ಬಳಸಬಹುದು. 
* ಚಿಲ್ಲರೆ ಸಮಸ್ಯೆ ಇಲ್ಲ. 
* ಬಸ್ಸಿನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರ ಸಂಖ್ಯೆಯ ವಿವರ ಮತ್ತು ಪ್ರಯಾಣದ ನೈಜ ಸಮಯಾಧಾರಿತ ಮಾಹಿತಿ ಒದಗಿಸುವುದು. ಇದರಿಂದ ಮುಂದಿನ ದಿನಗಳಲ್ಲಿ ಬಸ್‌ಗಳಲ್ಲಿ ಸೀಟುಗಳ ಲಭ್ಯತೆಯನ್ನು ಪ್ರಯಾಣಿಕರು ಮುಂಚಿತವಾಗಿ ತಿಳಿಯಬಹುದು. 
* ಸಾರ್ವಜನಿಕ ಸಾರಿಗೆ ಬಸ್ಸುಗಳಿಗೆ ಪ್ರಯಾಣಿಕರನ್ನು ಆಕರ್ಷಿಸಲು ಸಹಕಾರಿ.  
* ಸದರಿ ಸ್ಮಾರ್ಟ್‌ ಕಾರ್ಡ್‌ ನಿರ್ವಾಹಕರ ಕೆಲಸದ ಒತ್ತಡ ನಿವಾರಿಸುತ್ತದೆ.

 “ನಮ್ಮ ಮೆಟ್ರೋ’ಗೆ ನೀಡುತ್ತಿರುವ ನೆರವನ್ನು ಬಿಎಂಟಿಸಿ ಬಸ್‌ಗಳಿಗೂ ನೀಡಬೇಕು. ಮುಖ್ಯಮಂತ್ರಿಗಳ ಆಶೀರ್ವಾದ ಮೆಟ್ರೋಗೆ ಮಾತ್ರವಲ್ಲ; ಬಿಎಂಟಿಸಿಗೂ ಇರಬೇಕು 
– ನಾಗರಾಜು ಯಾದವ, ಬಿಎಂಟಿಸಿ ಅಧ್ಯಕ್ಷ 

ಬಿಎಂಟಿಸಿ ಬಸ್‌ಗಳಿಗೆ ಒತ್ತುಕೊಡಬೇಕು. ಜನರನ್ನು ಹೆಚ್ಚು ಸೆಳೆಯಲು ಬಸ್‌ ಪ್ರಯಾಣ ದರ ಇಳಿಕೆ ಮಾಡಬೇಕು. ಇದರಿಂದಾಗುವ ಹೊರೆಯನ್ನು ಸರ್ಕಾರ ಭರಿಸಬೇಕು. ಸರ್ಕಾರದ ಇತರ ಭಾಗ್ಯಗಳಿಗಿಂತ ಪ್ರಯಾಣ ದರ ಇಳಿಕೆ ಜನರ ಪಾಲಿಗೆ ದೊಡ್ಡ ಸೌಭಾಗ್ಯ ಆಗಲಿದೆ 
– ದಿನೇಶ್‌ ಗುಂಡೂರಾವ್‌, ಸ್ಥಳೀಯ ಶಾಸಕ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ 

ನಗರದ ಬಹುತೇಕ ಎಲ್ಲ ವರ್ಗದ ಜನ ಬಸ್‌ ಸೇವೆ ಅವಲಂಬಿಸಿದ್ಧಾರೆ. ಮೆಟ್ರೋದಿಂದ ಬಸ್‌ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗದು. ಬಿಎಂಟಿಸಿ ಸೇವೆ ವ್ಯಾಪ್ತಿ ದೊಡ್ಡದು. ಸರ್ಕಾರ 1,500 ಬಸ್‌ ಖರೀದಿಗೆ ಒಪ್ಪಿದೆ. ಸಾಲದ ಬಡ್ಡಿ ತಾನೇ ಪಾವತಿಸುವುದಾಗಿ ಹೇಳಿದೆ. 1,500 ಗುತ್ತಿಗೆ ಆಧಾರದಲ್ಲಿ ಬಸ್‌ ಪಡೆಯಲು ಅನುಮತಿ ನೀಡಿದೆ. ಇದು ಸಾಲದು. ಇನ್ನಷ್ಟು ಪ್ರೋತ್ಸಾಹ ಬೇಕು. 
– ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ 

Advertisement

Udayavani is now on Telegram. Click here to join our channel and stay updated with the latest news.

Next