Advertisement
ಯಶವಂತಪುರ ರೈಲು ನಿಲ್ದಾಣದ ಪ್ರವೇಶ ದ್ವಾರದಿಂದಲೇ ಮೆಜೆಸ್ಟಿಕ್ ಹಾಗೂ ನಗರದ ಇತರೆಡೆ ಬಸ್ ಸೇವೆ ಆರಂಭಿಸಲು ಚಿಂತನೆ ನಡೆದಿದೆ. ಈ ಕುರಿತು ಬಿಎಂಟಿಸಿ ಮತ್ತು ರೈಲ್ವೆ ಇಲಾಖೆ ಮಾತುಕತೆ ನಡೆಸಿದ್ದು, ಎರಡು ಇಲಾಖೆಗಳ ಸಹಭಾಗಿತ್ವದಲ್ಲಿ ಮುಂದಿನ ಒಂದೂವರೆ ತಿಂಗಳಲ್ಲಿ ಈ ಯೋಜನೆ ಅನುಷ್ಠಾನವಾಗಲಿದೆ. ಅಂದುಕೊಂಡಂತೆ ಈ ಪ್ರಯೋಗಕ್ಕೆ ಸಂಸ್ಥೆಯು ಮುಂದಾದರೆ, ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗುವುದರ ಜತೆಗೆ ಸಾರ್ವಜನಿಕ ಸಾರಿಗೆಗೆ ಒತ್ತು ಕೊಟ್ಟಂತಾಗುತ್ತದೆ.
Related Articles
Advertisement
ಸಾರ್ವಜನಿಕ ಸಾರಿಗೆಗೆ ಒತ್ತು: ನಗರದಲ್ಲಿ ಸಂಚಾರ ದಟ್ಟಣೆ ಅಧಿಕವಾಗುತ್ತಿದ್ದು, ಸಾರ್ವಜನಿಕ ಸಾರಿಗೆ ಬಳಸು ವಂತೆ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಾಧ್ಯವಾಗುತ್ತಿಲ್ಲ. ಆದರೆ, ಪ್ರಯಾಣಿಕರ ಬಳಿಗೇ ಬಸ್ ಸೇವೆ ಒದಗಿಸುವುದರಿಂದ ಒಂದಷ್ಟು ಪ್ರಮಾಣದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವುದರ ಜತೆಗೆ ಸಾರ್ವಜನಿಕ ಸಾರಿಗೆಗೆ ಒತ್ತು ಕೊಟ್ಟಂತಾಗುತ್ತದೆ. ಸಂಸ್ಥೆಗೂ ಆದಾಯ ಬರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು.
ಮೂಲಸೌಕರ್ಯ ವ್ಯವಸ್ಥೆ ಅಗತ್ಯ : ಯಶವಂತಪುರ ಮೆಟ್ರೋ ನಿಲ್ದಾಣದಿಂದ ನೇರವಾಗಿ ರೈಲು ನಿಲ್ದಾಣದ ಪ್ಲಾಟ್‌ಫಾರಂಗೆ ಪಾದಚಾರಿ ಮಾರ್ಗ ನಿರ್ಮಿಸಲು ಮೂರ್‍ನಾಲ್ಕು ವರ್ಷಗಳಿಂದ ಒತ್ತಾಯ ಕೇಳಿಬರುತ್ತಿದೆ. ಆದರೆ, ಈವರೆಗೆ ಇದು ಸಾಕಾರಗೊಂಡಿಲ್ಲ. ಪರಿಣಾಮ ಲಗೇಜುಗಳನ್ನು ಹೊತ್ತು, ವೃದ್ಧರು, ಮಹಿಳೆಯರು ಮಕ್ಕಳೊಂದಿಗೆ ರಸ್ತೆ ದಾಟಬೇಕಾದ ಅನಿವಾರ್ಯತೆ ಇದೆ. ಇದಲ್ಲದೆ, ಉದ್ದೇಶಿತ ನಿಲ್ದಾಣದಲ್ಲಿ ಬಸ್‌ಗಳ ನಿಲುಗಡೆ ಮಾತ್ರವಲ್ಲ. ಪ್ರಯಾಣಿಕರಿಗೂ ಮೂಲಸೌಕರ್ಯ ಒದಗಿಸುವ ಅಗತ್ಯವಿದೆ. ಪ್ರವೇಶ ದ್ವಾರದಿಂದ ಬರುವ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಕುರ್ಚಿ, ಬಿಸಿಲು, ಮಳೆಯಿಂದ ರಕ್ಷಣೆಗೆ ತಂಗುದಾಣ ನಿರ್ಮಾಣ ಹಾಗೂ ಕುಡಿಯುವ ನೀರಿನ ಘಟಕ ಸ್ಥಾಪನೆ ಅಗತ್ಯವಾಗಿದೆ. ಜತೆಗೆ ಬಸ್ ಮಾರ್ಗಗಳ ಬಗ್ಗೆಯೂ ಮಾಹಿತಿ ನೀಡಿದರೆ ಒಳಿತು ಎಂದು ಪ್ರಯಾಣಿಕರು ಅಭಿಪ್ರಾಯಪಡುತ್ತಾರೆ.
ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಈಚೆಗೆ ಆರಂಭಿಸಿರುವ ಬಸ್ ಸೇವೆಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಯಾಣಿಕರನ್ನು ಇಲ್ಲಿಂದ ನಿರೀಕ್ಷಿಸಲಾಗುತ್ತಿದೆ. –ಸಿ.ಶಿಖಾ, ಬಿಎಂಟಿಸಿ ಎಂ.ಡಿ
-ಮೋಹನ್ ಭದ್ರಾವತಿ