Advertisement
ಯುವತಿಯರಿಗೆ, ತಾಯಂದಿರಿಗೆ ಸುಲಭ ಶೌಚಾಲಯದ ವ್ಯವಸ್ಥೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಅನುಪಯುಕ್ತ ಕೆಎಸ್‌ಆರ್‌ಟಿಸಿ ಬಸ್‌ಗಳಿಂದ ಹೈಟೆಕ್ “ಸ್ತ್ರೀ ಶೌಚಾಲಯ’ ನಿರ್ಮಿಸಲಾಗಿತ್ತು. ಇದರಲ್ಲಿ ಭಾರತೀಯ ಮತ್ತು ವಿದೇಶಿ ಮಾದರಿ ಶೌಚಾಲಯ ಗಳು ಮಾತ್ರವಲ್ಲದೇ, ಮಗುವಿಗೆ ಹಾಲುಣಿಸುವ ಸ್ಥಳ, ಸ್ಯಾನಿಟರಿ ನ್ಯಾಪ್‌ಕಿನ್ ವೆಂಡಿಂಗ್ ಯಂತ್ರ, ಇನ್ಸಿನೇರೇಟರ್, ಮಗುವಿಗೆ ಡೈಪರ್ ಬದಲಿಸುವ ಸ್ಥಳ, ಕೈತೊಳೆಯುವ ವಾಶ್ ಬೇಸಿನ್‌ಗಳು, ಸಂವೇದಕ ದೀಪಗಳು, ಸಂಪೂರ್ಣ ಸೌರವಿದ್ಯುತ್ ವ್ಯವಸ್ಥೆ ಕೂಡ ಅಳವಡಿಸಲಾಗಿತ್ತು. ಇದೆಲ್ಲದರಿಂದ ಎಲ್ಲರ ಗಮನವನ್ನೂ ಸೆಳೆದಿದ್ದ “ಸ್ತ್ರೀ ಶೌಚಾಲಯ ಬಂಡಿ’ ಸದ್ದಿಲ್ಲದೆ ಮೂಲೆಸೇರಿದೆ.
Related Articles
Advertisement
ಸ್ತ್ರೀ ಹೈಟೆಕ್ ಶೌಚಾಲಯದ ಮುಂದುವರಿದ ಭಾಗವಾಗಿ ಬಿಎಂಟಿಸಿಯು ಗುಜರಿ ಬಸ್‌ಗಳಿಂದ ಬಸ್‌ಗಳನ್ನು “ಭೋಜನ ಬಂಡಿ’ ಎಂಬ ಎರಡು ಪ್ರಾಯೋಗಿಕ ಕ್ಯಾಂಟೀನ್‌ಗಳನ್ನು ರೂಪಿಸಿದ್ದು, ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುತ್ತದೆ. ಸಂಸ್ಥೆಯಲ್ಲಿ 10 ಲಕ್ಷ ಕಿ.ಮೀ.ಗೂ ಹೆಚ್ಚು ಕಾರ್ಯಾಚರಣೆ ಮಾಡಿ ಗುಜರಿ ಸೇರಿರುವ ಬಸ್‌ಗಳನ್ನು ಒಂದೊಂದಾಗಿ ಭೋಜನ ಬಂಡಿಗಳನ್ನಾಗಿ ಮಾರ್ಪಡಿಸುವುದಾಗಿ ಸಂಸ್ಥೆ ತಿಳಿಸುತ್ತಿದೆ. ಇದರಲ್ಲಿ ಕುಳಿತುಕೊಳ್ಳಲು ಆರಾಮದಾಯಕ ಆಸನಗಳು ಮತ್ತು ಟೇಬಲ್, ಫ್ಯಾನ್, ಕೈತೊಳೆಯಲು ವಾಶ್‌ಬೇಸಿನ್, ಚಾವಣಿ ಯಲ್ಲಿ ಗಾಜಿನ ಕಿಟಕಿಯಿಂದ ಗಾಳಿ ಮತ್ತು ಬೆಳಕಿನ ವ್ಯವಸ್ಥೆಗಳನ್ನು ಕಲ್ಪಿಸಲಾಗಿದ್ದು, ಕೈಗೆಟಕುವ ದರದಲ್ಲಿ ತಿಂಡಿ, ಊಟ ಮಾಡಬಹುದಾಗಿದೆ. ನಗರದ ಹೃದಯಭಾಗಗಳಲ್ಲೇ ಬಿಎಂಟಿಸಿ ನಿಲ್ದಾಣಗಳಲ್ಲಿ ಸ್ವಂತ ಜಾಗಗಳಿವೆ. ಮುಂಬರುವ ದಿನಗಳಲ್ಲಿ ಅಲ್ಲೆಲ್ಲ ಇವುಗಳನ್ನು ಪರಿಚಯಿಸಲು ಅವಕಾಶ ಇದೆ. ಆ ಮೂಲಕ ಭವಿಷ್ಯದಲ್ಲಿ ಇದನ್ನು “ಬ್ರ್ಯಾಂಡ್’ ಆಗಿ ಪರಿವರ್ತಿಸಬಹುದು. ಆದರೆ, ಈ ನಿಟ್ಟಿನಲ್ಲಿ ಸಂಸ್ಥೆ ಮನಸ್ಸು ಮಾಡಬೇಕಷ್ಟೇ. ಇಲ್ಲವಾದರೆ, ಈ ಯೋಜನೆಯೂ ಸ್ತ್ರೀ ಶೌಚಾಲಯದಂತೆ ಆರಂಭಿಕ ಉತ್ಸಾಹ ತೋರಿಸಿ, ನಂತರ ಸದ್ದಿಲ್ಲದೆ ಮೂಲೆಗುಂಪಾಗುವ ಸಾಧ್ಯತೆಗಳಿವೆ.
– ಭಾರತಿ ಸಜ್ಜನ್