ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಹೆಚ್ಚಿಸುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಅನುಮೋದಿಸಿ ದ್ದು, ಪ್ರಯಾಣದರ ಶೇ.12ರಷ್ಟು ಹೆಚ್ಚಾಗಿದೆ. ಆದರೆ, ಪ್ರಯಾಣಿಕರ ವಿರೋಧದ ಹಿನ್ನೆಲೆಯಲ್ಲಿ ಬಿಎಂಟಿಸಿ ದರ ಏರಿಕೆ ಪ್ರಸ್ತಾವನೆ ಸಲ್ಲಿಸಿರಲಿಲ್ಲ ಎಂದು ತಿಳಿದುಬಂದಿದೆ.
ಪ್ರಯಾಣಿಕರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ನಷ್ಟದಲ್ಲಿದ್ದರೂ ಬಿಎಂಟಿಸಿ ದರ ಏರಿಕೆಗಾಗಿ ಯಾವುದೇ ಪ್ರಸ್ತಾವನೆ ಸಲ್ಲಿಸಿರಲಿಲ್ಲ. ಹಾಗಾಗಿ, ಸರ್ಕಾರವೂ ಅದನ್ನು ಹೊರಗಿಟ್ಟಿದೆ. ಈಗ ಆರ್ಥಿಕ ಚೇತರಿಕೆಗಾಗಿ ಸಂಸ್ಥೆಯು ಬಜೆಟ್‌ನತ್ತ ಚಿತ್ತ ನೆಟ್ಟಿದೆ.
ಹೊಣೆಗಾರಿಕೆಗಳು, ಸಾಲಗಳು ಸೇರಿದಂತೆ ಬಿಎಂಟಿಸಿ ಮೇಲೆ ಸುಮಾರು 1,500 ಕೋಟಿ ರೂ. ಹೊರೆ ಇದೆ. ವಿಮೆ ಮೊತ್ತ, ತುಟ್ಟಿಭತ್ಯೆ ಮತ್ತಿತರ ಸೌಲಭ್ಯಗಳನ್ನು ನೌಕರರಿಗೆ ನೀಡಬೇಕಿದೆ. ಈ ಮಧ್ಯೆ ಪ್ರತಿ ದಿನ ನಷ್ಟದಲ್ಲಿ ಸಾಗುತ್ತಿದೆ. ಹೊಸ ಬಸ್‌ಗಳ ಖರೀದಿಯೂ ಆಗುತ್ತಿಲ್ಲ.
ಮತ್ತೂಂದೆಡೆ ಪ್ರಯಾಣಿಕರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಚೇತರಿಕೆಗೆ ಸಂಸ್ಥೆಯು ಸರ್ಕಾರದ ಸಹಾಯ ಹಸ್ತ ಎದುರುನೋಡುತ್ತಿದೆ. ಈ ಹಿಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಬಿಎಂಟಿಸಿ ಬಸ್ ದರ ಏರಿಕೆ ಮಾಡುವುದಿಲ್ಲ ಎಂದೂ ಹೇಳಿದ್ದರು.
ಇದರೊಂದಿಗೆ ನೇರ ನೆರವಿನ ಆಸೆ ಹುಸಿಯಾಗಿದೆ. ಪರೋಕ್ಷವಾಗಿ ಅಂದರೆ ತೆರಿಗೆ ವಿನಾಯ್ತಿ, ಬಸ್ ಖರೀದಿಗೆ ಅನುದಾನದಂತಹ ಕೊಡುಗೆಯನ್ನು ಬಜೆಟ್‌ನಲ್ಲಿ ನೀಡುವ ನಿರೀಕ್ಷೆ ಇದೆ. ಒಂದು ವೇಳೆ ಅದೂ ಇಲ್ಲದಿದ್ದರೆ, ಸಂಸ್ಥೆ ನಡೆಸುವುದು ಕಷ್ಟವಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.