Advertisement

BMTC: ತನ್ನ ಆಸ್ತಿಯನ್ನೇ ರಕ್ಷಿಸಿಕೊಳ್ಳದ ಬಿಎಂಟಿಸಿ

12:09 PM May 05, 2024 | Team Udayavani |

ಬೆಂಗಳೂರು: ಯಾವೊಬ್ಬ ಪ್ರಯಾಣಿಕ ಟಿಕೆಟ್‌ರಹಿತ ಪ್ರಯಾಣ ಮಾಡಿದರೆ, ಆತನ ಜತೆ ಆ ಬಸ್‌ ನಿರ್ವಾಹಕನ ಮೇಲೂ “ದಂಡ ಪ್ರಯೋಗ’ ಮಾಡಲಾಗುತ್ತದೆ. ಕೆಲವು ಸಲ ಅಂತಹ ನಿರ್ವಾಹಕರ ಇನ್‌ಕ್ರಿಮೆಂಟ್‌ಗೆ ಕತ್ತರಿಯನ್ನೂ ಹಾಕಲಾಗುತ್ತದೆ. ಅಷ್ಟರ ಮಟ್ಟಿಗೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಿಎಂಟಿಸಿಗೆ ಸಾವಿರಾರು ಕೋಟಿ ಬೆಲೆ ಬಾಳುವ ತನ್ನ ಆಸ್ತಿ ಬಗ್ಗೆ ಮಾತ್ರ “ಡೋಂಟ್‌ ಕೇರ್‌’!

Advertisement

ಕೆಂಗೇರಿ, ಹೊಸಕೋಟೆ, ಯಲಹಂಕ, ಮಾಗಡಿ ರಸ್ತೆ, ಆನೇಕಲ್‌ ಸೇರಿದಂತೆ ನಗರದ ಹೊರವಲಯ ಹಾಗೂ ನಗರದ ಒಳಗೆ ಹತ್ತಾರು ಕಡೆಗಳಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಗೆ ಸೇರಿದ 950 ಎಕರೆಗೂ ಹೆಚ್ಚು ಜಮೀನು ಇದೆ. ಇದು ಪ್ರಸ್ತುತ ಮಾರುಕಟ್ಟೆ ದರದಂತೆ ಅಂದಾಜು 10 ರಿಂದ 15 ಸಾವಿರ ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಆದರೆ, ಈ ಆಸ್ತಿಯನ್ನು ಸಂಸ್ಥೆಯಲ್ಲಿ ಕೇಳ್ಳೋರು ಗತಿ ಇಲ್ಲ.

ತನಗೆ ಸೇರಿದ 950 ಎಕರೆ ಭೂಮಿಯಲ್ಲಿ ಶೇ. 25ರಷ್ಟು ಮಾತ್ರ ಅಂದರೆ 230 ಎಕರೆ ಜಾಗದ ಸರಹದ್ದು ಗುರುತಿಸಿ, ಬೇಲಿ ಹಾಕುವ ವ್ಯವಸ್ಥೆ ಮಾಡಲಾಗಿದೆ. ಉಳಿದ ಅಂದಾಜು 700 ಎಕರೆಗೂ ಅಧಿಕ ಭೂಮಿಯು ಒಂದಿಲ್ಲೊಂದು ರೀತಿಯಲ್ಲಿ ಹಲವಾರು ವರ್ಷಗಳಿಂದ ಒತ್ತುವರಿ ಆಗಿದೆ ಹಾಗೂ ಆಗುತ್ತಲೇ ಇದೆ. ಕೆಲವೆಡೆ ಒತ್ತುವರಿ ತೆರವಿಗೆ ಕಾನೂನು ಹೋರಾಟ ನಡೆಯುತ್ತಿದ್ದರೂ, ಅದು ಪರಿಣಾಕಾರಿಯಾಗಿ ಆಗುತ್ತಿಲ್ಲ. ಮತ್ತೆ ಹಲವೆಡೆ ತೆರವಿಗೆ ಕನಿಷ್ಠ ಪ್ರಯತ್ನಗಳೂ ನಡೆಯುತ್ತಿಲ್ಲ. ಬಿಎಂಟಿಸಿ ಎಸ್ಟೇಟ್‌ ವಿಭಾಗ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಆಸ್ತಿಯತ್ತ ತಿರುಗಿಯೂ ನೋಡುತ್ತಿಲ್ಲ. ಇದೇ ಧೋರಣೆ ಮುಂದುವರಿದರೆ, ಅದು ಕಂಡವರ ಪಾಲಾಗುವುದು ಖಚಿತ ಎಂಬ ಮಾತುಗಳು ಸಂಸ್ಥೆಯ ವಲಯದಲ್ಲೇ ಕೇಳಿಬರುತ್ತಿದೆ.

ವಿವಿಧೆಡೆ ನಿರುಪಯುಕ್ತವಾಗಿ ಬಿದ್ದಿರುವ ಈ ಆಸ್ತಿ ಪೈಕಿ ಆಯ್ದ ಭಾಗಗಳಲ್ಲಿ ವಾಣಿಜ್ಯ ಸಂಕೀರ್ಣ, ಅಗತ್ಯ ಇರುವ ಕಡೆ ಡಿಪೋ, ನಿಲ್ದಾಣ, ವರ್ಕ್‌ಶಾಪ್‌, ಪಾರ್ಕಿಂಗ್‌, ಫ್ಯಾಕ್ಟರಿ ಮತ್ತಿತರ ರೂಪದಲ್ಲಿ ಅಭಿವೃದ್ಧಿ ಪಡಿಸಲು ವಿಪುಲ ಅವಕಾಶಗಳಿವೆ. ಬರೀ 5 ರೂ.ಗೆ ಚದರಅಡಿಯಂತೆ ಬಾಡಿಗೆ ನೀಡಿದರೂ, ಎಕರೆಗೆ 2 ಲಕ್ಷ ರೂ. ಅನಾಯಾಸವಾಗಿ ಬರುತ್ತದೆ. ಇದು ಸಂಸ್ಥೆಗೆ ಮತ್ತೂಂದು ಆದಾಯ ಮೂಲ ಆಗುವುದರ ಜತೆಗೆ ಸುತ್ತಲಿನ ಭೂಮಿಯ ಬೆಲೆ ಕೂಡ ಹೆಚ್ಚಾಗಲಿದೆ. ವರ್ಷದಿಂದ ವರ್ಷಕ್ಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿರುವ ಬಿಎಂಟಿಸಿಗೆ ಇದು ತಕ್ಕಮಟ್ಟಿಗೆ ನೆರವಾಗುತ್ತದೆ. ಆದರೆ, ಈ ನಿಟ್ಟಿನಲ್ಲಿ ಬಿಎಂಟಿಸಿ ಮನಸ್ಸು ಮಾಡಬೇಕಿದೆ.

ಬೆಂಗಳೂರು-ಮೈಸೂರು ರಸ್ತೆಯಂತಹ ಪ್ರಮುಖ ಹೆದ್ದಾರಿಗಳಲ್ಲೆಲ್ಲಾ ಬಿಎಂಟಿಸಿ ಜಾಗ ಇದೆ. ಹಾಗಾಗಿ, ಮುಂಬರುವ ದಿನಗಳಲ್ಲಿ ಈ ಭೂಮಿಗೆ ಸಾಕಷ್ಟು ಬೇಡಿಕೆ ಬರಲಿದೆ. ಒಂದು ವೇಳೆ ಸಂಸ್ಥೆ ಉದಾಸೀನ ತೋರಿದರೆ, ಆಗ ಆ ಭೂಮಿಯೇ ಕೈತಪ್ಪಿ ಹೋಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತನ್ನ ಸುಪರ್ದಿಯಲ್ಲಿ ಇಟ್ಟುಕೊಳ್ಳುವ ಪ್ರಯತ್ನಗಳು ಪರಿಣಾಮಕಾರಿಯಾಗಿ ಆಗಬೇಕಿದೆ ಎಂಬ ಅಭಿಪ್ರಾಯ ಸ್ವತಃ ಬಿಎಂಟಿಸಿ ನೌಕರರಿಂದ ವ್ಯಕ್ತವಾಗುತ್ತಿದೆ.

Advertisement

ಈ ಹಿಂದೆ ಸರ್ಕಾರಿ ಭೂಮಿ ಒತ್ತುವರಿಗೆ ಸಂಬಂಧಿಸಿದಂತೆ ಎ.ಟಿ. ರಾಮಸ್ವಾಮಿ ಆಯೋಗ ರಚನೆಯಾಗಿತ್ತು. ಆಗ, ಕಂದಾಯ ನಿರೀಕ್ಷಕರು ಮತ್ತು ಆಯಾ ತಹಶೀಲ್ದಾರರುಗಳಿಂದ ದಾಖಲೆಗಳ ಅನ್ವಯ ಸಾವಿರಾರು ಎಕರೆ ಭೂಮಿ ಒತ್ತುವರಿ ತೆರವಿಗೆ ಶಿಫಾರಸು ಮಾಡಲಾಯಿತು. ಅದರಂತೆ ಸರ್ಕಾರ ಕೆಲವು ಭೂಮಿಯನ್ನು ವಶಕ್ಕೆ ಪಡೆಯಿತು. ಈ ಸಂದರ್ಭದಲ್ಲಿ ಬಿಎಂಟಿಸಿಯು ಅಂದು ವ್ಯವಸ್ಥಾಪಕ ನಿರ್ದೇಶಕರಾಗಿ ಉಪೇಂದ್ರ ತ್ರಿಪಾಠಿ ಅವರ ದೂರದೃಷ್ಟಿಯಿಂದ ಅಂದಾಜು 1,200 ಎಕರೆ ಭೂಮಿಯನ್ನು ಅಂದಿನ ಮಾರ್ಗಸೂಚಿ ದರದ ಅರ್ಧ ಬೆಲೆಗೆ ಖರೀದಿಸಿತು. ಈಗ ಅದರ ಬೆಲೆ ಮೂರುಪಟ್ಟು ಹೆಚ್ಚಳವಾಗಿದೆ.

ಆಗಬೇಕಾದ್ದೇನು?:

  • ಒತ್ತುವರಿ ತೆರವು ಕಾರ್ಯ ಆದ್ಯತೆ ಮೇಲೆ ಆಗಬೇಕು
  • ತೆರವಾದ ಜಾಗದಲ್ಲಿ ಬಿಎಂಟಿಸಿ
  • ವರ್ಕ್‌ಶಾಪ್‌, ಬಸ್‌ ನಿಲ್ದಾಣ, ಡಿಪೋ ಮಾಡಬಹುದು
  • ತೆರೆದ ಜಾಗವನ್ನು ಹಾಗೇ ಬಿಟ್ಟು ಪಾರ್ಕಿಂಗ್‌ಗೆ ಅನುವು ಮಾಡಿಕೊಡಬಹುದು
  • ಕಾರ್ಖಾನೆ ಸ್ಥಾಪನೆಗೂ ಅವಕಾಶ ಕಲ್ಪಿಸಬಹುದು

ಸಂಸ್ಥೆಯ ಸಾವಿರಾರು ಎಕರೆ ಭೂಮಿ ಇದೆ. ಅದರಲ್ಲಿ ಕೆಲವೆಡೆ ಒತ್ತು ವರಿ ಆಗಿರುವುದು ನಿಜ. ಈ ಹಿಂದೆ ಒಬ್ಬ ಅಧಿಕಾರಿಯು ಒತ್ತುವರಿ ಆಗಿದ್ದನ್ನು, “ಒತ್ತುವರಿ ಆಗಿಲ್ಲ’ ಅಂತ ವರದಿ ನೀಡಿದ್ದರು. ಅವರನ್ನು ಅಮಾನತು ಕೂಡ ಮಾಡಲಾಯಿತು. ಚುನಾವಣೆ ಮುಗಿಯುತ್ತಿದ್ದಂತೆ ತೆರವು ಕಾರ್ಯಕ್ಕೆ ಕೈಹಾಕಲಾಗುವುದು. ಅದಕ್ಕೂ ಮುನ್ನ ಈ ಸಂಬಂಧ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ಮಾಡುತ್ತೇನೆ. ರಾಮಲಿಂಗಾರೆಡ್ಡಿ, ಸಾರಿಗೆ ಸಚಿವರು

ಬಿಎಂಟಿಸಿಗೆ ಸೇರಿದ ಭೂಮಿ ಉಳಿಸಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ. ಈ ಉದ್ದೇಶಕ್ಕಾಗಿಯೇ ಪ್ರತ್ಯೇಕ ವಿಭಾಗ ಕೂಡ ಇದೆ. ಅದಕ್ಕೆ ಲಕ್ಷಾಂತರ ರೂ.ಸುರಿಯಲಾಗುತ್ತಿದೆ. ಅದು ಸರಿಯಾಗಿ ತನ್ನ ಕರ್ತವ್ಯ ನಿರ್ವಹಿಸಬೇಕಲ್ಲವೇ? ಒತ್ತುವರಿ ಬಗ್ಗೆ ಒಕ್ಕೂಟದ ಗಮನಕ್ಕೂ ಬಂದಿದೆ.  ಸಾರಿಗೆ ಸಚಿವರನ್ನು ಭೇಟಿಯಾಗಿ  ಕ್ರಮಕ್ಕೆ ಮನವಿ ಸಲ್ಲಿಸಲಾಗುವುದು.ಎಚ್‌.ವಿ.ಅನಂತ ಸುಬ್ಬರಾವ್‌, ಅಧ್ಯಕ್ಷರು, ಕೆಎಸ್‌ಆರ್‌ಟಿಸಿ ಸ್ಟಾಫ್, ವರ್ಕರ್ ಫೆಡರೇಷನ್‌.

ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next