Advertisement

ಸಂಪರ್ಕದಿಂದ ಸೊರಗಿದ ಬಿಎಂಟಿಸಿ!

12:23 PM Jun 11, 2017 | Team Udayavani |

ಬೆಂಗಳೂರು: ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ನೀಡಲಾಗುತ್ತಿರುವ “ಮೆಟ್ರೋ ಸಂಪರ್ಕ ಸೇವೆ’ಯಿಂದ ಕಳೆದೊಂದು ವರ್ಷದಿಂದ ನಿತ್ಯ ಎರಡೂವರೆ ಲಕ್ಷ ರೂ. ನಷ್ಟ ಆಗುತ್ತಿದ್ದು, ಈ ನಷ್ಟ ತುಂಬಿಕೊಡುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಬಿಎಂಆರ್‌ಸಿಎಲ್‌ಗೆ ಪತ್ರ ಬರೆದಿದೆ.

Advertisement

“ನಮ್ಮ ಮೆಟ್ರೋ’ ಮೊದಲ ಹಂತ ಸಂಪೂರ್ಣವಾಗಿ ಇದೇ 18ರಿಂದ ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳ್ಳುತ್ತಿದ್ದು, ನೂರು ಹೆಚ್ಚುವರಿ ಮೆಟ್ರೋಗೆ ಪೂರಕವಾಗಿ ಬಸ್‌ ಸಂಪರ್ಕ ಸೇವೆ ಅನಿವಾರ್ಯವಾಗಿದೆ. ಈ ಸಂದರ್ಭದಲ್ಲೇ ಬಿಎಂಟಿಸಿಯು ಬಿಎಂಆರ್‌ಸಿ ಮುಂದೆ ಇಂತಹದ್ದೊಂದು ಬೇಡಿಕೆ ಇಡಲು ನಿರ್ಧರಿಸಿದೆ. 

ಮೆಟ್ರೋ ಪೂರ್ವ-ಪಶ್ಚಿಮ ಕಾರಿಡಾರ್‌ನಲ್ಲಿ ಸೇವೆ ಆರಂಭಗೊಂಡು ಒಂದು ವರ್ಷ ಕಳೆದಿದೆ. ಇದರ ಬೆನ್ನಲ್ಲೇ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌)ದ ಮನವಿ ಮೇರೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ಈ ಮಾರ್ಗದುದ್ದಕ್ಕೂ 80 “ಸಂಪರ್ಕ’ ಬಸ್‌ಗಳ ಸೇವೆ ಆರಂಭಿಸಲಾಯಿತು. ಅಲ್ಲಿಂದ ಇದುವರೆಗೆ ಬಸ್‌ ಒಂದಕ್ಕೆ ಪ್ರತಿ ಕಿ.ಮೀ.ಗೆ 15ರಿಂದ 20 ರೂ. ನಷ್ಟವಾಗುತ್ತಿದೆ. ಈ ಮಧ್ಯೆ ಮತ್ತೆ ನೂರು ಬಸ್‌ಗೆ ಬೇಡಿಕೆ ಬಂದಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ನಷ್ಟದ ಬಾಬ್ತು ಹೆಚ್ಚಾದರೆ, ಈಗಾಗಲೇ ನಷ್ಟದಲ್ಲಿರುವ ಸಂಸ್ಥೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ. 

ಬಸ್‌ ಸೇವೆಗಿಲ್ಲ ಪ್ರೋತ್ಸಾಹ: ಒಂದೆಡೆ ನಷ್ಟದಲ್ಲೇ ಸಂಪರ್ಕ ಸೇವೆ ನೀಡಲಾಗುತ್ತಿದೆ. ಆದರೆ, ಮತ್ತೂಂದೆಡೆ ಮೆಟ್ರೋ ನಿಲ್ದಾಣಗಳಲ್ಲಿ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ಕಂಪನಿಗಳಿಗೆ ವೇದಿಕೆ ಕಲ್ಪಿಸಿ, ಪ್ರೋತ್ಸಾಹ ನೀಡುವ ಮೂಲಕ ಬಿಎಂಆರ್‌ಸಿಎಲ್‌, ಬಿಎಂಟಿಸಿಯ ಕೆಂಗಣ್ಣಿಗೆ ಗುರಿಯಾಗಿದೆ. 

ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸುವ ಬದಲು, ಖಾಸಗಿ ಕಂಪನಿಗಳನ್ನು ಮೆಟ್ರೋ ನಿಗಮ ಪ್ರೇರೇಪಿಸುತ್ತಿದೆ. ಮೆಟ್ರೋ ರೈಲುಗಳಲ್ಲಿ ಬಸ್‌ಗಳ ಸೇವೆ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡುವ ಮೂಲಕ ಪ್ರೋತ್ಸಾಹಿಸಬೇಕು. ಬಸ್‌ ಸೇವೆ ಎಲ್ಲಿಂದ ಎಲ್ಲಿಗೆ ಇದೆ, ವೇಳಾಪಟ್ಟಿ, ಹೋಗುವ ಮಾರ್ಗ ಕುರಿತು ನಿಲ್ದಾಣಗಳಲ್ಲಿ ಫ‌ಲಕಗಳನ್ನು ಅಳವಡಿಸಬೇಕು. ಆದರೆ, ಇದಾವುದೂ ಆಗುತ್ತಿಲ್ಲ ಎಂದು ಬಿಎಂಟಿಸಿ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ. 

Advertisement

ಬಿಎಂಆರ್‌ಸಿಎಲ್‌ ನಷ್ಟ ತುಂಬಿಕೊಡಲಿ ಅಥವಾ ನಿರಾಕರಿಸಲಿ. ಸಂಪರ್ಕ ಸೇವೆ ನೀಡುವುದು ಮಾತ್ರ ಬಿಎಂಟಿಸಿಗೆ ಅನಿವಾರ್ಯ. ಆದರೆ, ಸಂಸ್ಥೆಗೆ ನಿರಂತರ ನಷ್ಟವಾಗುತ್ತಿರುವುದರಿಂದ ತಕ್ಕಮಟ್ಟಿಗಾದರೂ ಅನುದಾನ ನೀಡಬೇಕು ಎಂಬುದು ಬೇಡಿಕೆ. ಇದರಿಂದ ಸಂಸ್ಥೆ ಆರ್ಥಿಕವಾಗಿ ತುಸು ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಾ.ಏಕರೂಪ್‌ ಕೌರ್‌ ತಿಳಿಸುತ್ತಾರೆ.  

ನಿಗಮ ವಿಲೀನವಾಗಲಿ: ಬಿಎಂಟಿಸಿಗೆ ಆಗುತ್ತಿರುವ ನಷ್ಟವನ್ನು ಬಿಎಂಆರ್‌ಸಿಎಲ್‌ ತುಂಬಿಕೊಡಲಿ. ಇನ್ನು ಮೆಟ್ರೋ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಾವಿರಾರು ಕೋಟಿ ರೂ. ಅನುದಾನ ಹರಿದುಬರುತ್ತದೆ. ಮತ್ತೂಂದೆಡೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬ್ಯಾಂಕ್‌ಗಳಿಂದಲೂ ಸಾಕಷ್ಟು ರೂ. ಸಾಲ ದೊರೆಯುತ್ತಿದೆ. ಇದಕ್ಕೆ ಹೋಲಿಸಿದರೆ ಬಿಎಂಟಿಸಿ ನಷ್ಟದ ಬಾಬ್ತು ಬಿಎಂಆರ್‌ಸಿಗೆ ಹೊರೆಯೇ ಅಲ್ಲ. ಇಲ್ಲವಾದರೆ, ಎರಡೂ ನಿಗಮಗಳನ್ನು ವಿಲೀನಗೊಳಿಸಿ, ಒಂದೇ ನಿಗಮದಡಿ ಸಾರ್ವಜನಿಕ ಸಾರಿಗೆ ಸೇವೆ ಕಲ್ಪಿಸಲಿ ಎಂಬ ಅಭಿಪ್ರಾಯ ಬಿಎಂಟಿಸಿ ವಲಯದಲ್ಲಿ ಕೇಳಿಬರುತ್ತಿದೆ.

ಕಿ.ಮೀಗೆ 20 ರೂ. ಲಾಸ್‌: ಮೈಸೂರು ರಸ್ತೆ ನಾಯಂಡಹಳ್ಳಿಯಿಂದ ಬೈಯಪ್ಪನಹಳ್ಳಿ ನಡುವೆ 18 ಕಿ.ಮೀ ಮಾರ್ಗದಲ್ಲಿ 80 ಸಂಪರ್ಕ ಬಸ್‌ಗಳು ಸಂಚರಿಸುತ್ತವೆ. ನಿತ್ಯ ಒಂದು ಬಸ್‌ ಸರಾಸರಿ 150 ಕಿ.ಮೀ. ಸಂಚರಿಸುತ್ತದೆ. ಪ್ರತಿ ಕಿ.ಮೀ.ಗೆ 20 ರೂ. ನಷ್ಟ ಲೆಕ್ಕಹಾಕಿದರೆ, ನಿತ್ಯ 2ರಿಂದ 2.50 ಲಕ್ಷ ರೂ. ನಷ್ಟವಾಗುತ್ತಿದೆ. ಈ ಮಧ್ಯೆ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ ಮಧ್ಯೆ 20 ವೋಲ್ವೊ ಬಸ್‌ ಸೇವೆ ನೀಡುತ್ತಿದ್ದು, ಈ ಸೇವೆ ಕೂಡ ನಷ್ಟದಲ್ಲೇ ಸಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಸಂಸ್ಥೆಗೆ ನಷ್ಟವಾಗುತ್ತಿದ್ದರೂ ಒಂದು ವರ್ಷದಿಂದ ಮೆಟ್ರೋ ರೈಲುಗಳಿಗೆ ಪೂರಕವಾಗಿ “ಸಂಪರ್ಕ’ ಸೇವೆ ಕಲ್ಪಿಸಲಾಗುತ್ತಿದೆ. ಈ ಮಧ್ಯೆ ಮತ್ತೆ ನೂರು ಫೀಡರ್‌ ಸೇವೆಗಳನ್ನು ಆರಂಭಿಸಬೇಕಿದೆ. ಹಾಗಾಗಿ ಸಂಪರ್ಕ ಸೇವೆಯಿಂದ ಸಂಸ್ಥೆಗಾಗುವ ನಷ್ಟವನ್ನು ತಕ್ಕಮಟ್ಟಿಗಾದರೂ ತುಂಬಿಕೊಡಿ ಎಂದು ಬಿಎಂಆರ್‌ಸಿಗೆ ಪತ್ರ ಬರೆಯಲಾಗಿದೆ.
-ಡಾ.ಏಕರೂಪ್‌ ಕೌರ್‌, ವ್ಯವಸ್ಥಾಪಕ ನಿರ್ದೇಶಕಿ, ಬಿಎಂಟಿಸಿ

ಮೊದಲ ಹಂತ ಸಂಪೂರ್ಣವಾಗಿ ಸಾರ್ವಜನಿಕ ಸೇವೆಗೆ ಮುಕ್ತಗೊಂಡ ನಂತರ ಫೀಡರ್‌ ಬಸ್‌ಗಳಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಲಿದೆ. ಆಗ, ನಿಗಮಕ್ಕೆ ಆದಾಯ ಹೆಚ್ಚಲಿದೆ. ಫೀಡರ್‌ ಸೇವೆಯಿಂದ ಬಿಎಂಟಿಸಿಗೆ ಆಗುತ್ತಿರುವ ನಷ್ಟವನ್ನು ತುಂಬಿಕೊಡುವ ಯಾವುದೇ ಚಿಂತನೆ ಸದ್ಯದ ಮಟ್ಟಿಗೆ ನಿಗಮದ ಮುಂದಿಲ್ಲ. 
-ಪ್ರದೀಪ್‌ಸಿಂಗ್‌ ಖರೋಲಾ, ವ್ಯವಸ್ಥಾಪಕ ನಿರ್ದೇಶಕ, ಬಿಎಂಆರ್‌ಸಿಎಲ್‌

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next