ಬೆಂಗಳೂರು: ಯಶವಂತಪುರದ ಗಾರೆಪ್ಪನಪಾಳ್ಯ ರಸ್ತೆಯಲ್ಲಿ ಶನಿವಾರ ಬಿಎಂಟಿಸಿ ಬಸ್ ಹರಿದು ಎಂಜಿನಿಯರಿಂಗ್ ವಿದ್ಯಾರ್ಥಿ ಮೃತಪಟ್ಟಿದ್ದಾನೆ.
ಕಮಲಾನಗರದ ನಿವಾಸಿ ಗಂಗಾಧರ್ (21) ಮೃತ ದುರ್ದೈವಿ.
ನಗರದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಗಂಗಾಧರ್, ಎಚ್ ಎಎಲ್‌ನಲ್ಲಿ ಇಂಟರ್ನ್ಶಿಪ್ ಮಾಡುವ ಸಲುವಾಗಿ ಕಾಲೇಜಿನಿಂದ ಪ್ರಮಾಣಪತ್ರ ತರಲು ದ್ವಿಚಕ್ರ ವಾಹನದಲ್ಲಿ ಸ್ನೇಹಿತ ಲಿಖೀತ್ ಜೊತೆಗೆ ಬೈಕ್‌ನಲ್ಲಿ ಹಿಂಬದಿ ಕುಳಿತುಕೊಂಡು ಎಚ್‌ಎಎಲ್ ಕಡೆಗೆ ಹೋಗುತ್ತಿದ್ದ. ಮಾರ್ಗಮಧ್ಯೆ ಯಶವಂತಪುರದ ಗಾರೆಪ್ಪನಪಾಳ್ಯ ರಸ್ತೆಯ ಹೂವಿನ ಮಾರ್ಕೆಟ್ ಸಮೀಪ ಬಿಎಂಟಿಸಿ ಬಸ್ ಹಿಂಭಾಗ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಪರಿಣಾಮ ಗಂಗಾಧರ್ ನೆಲಕ್ಕುರುಳಿ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಬೈಕ್ ಚಲಾಯಿಸುತ್ತಿದ್ದ ಆತನ ಸ್ನೇಹಿತ ಲಿಖಿತ್‌ಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ. ಯಶವಂತಪುರ ಸಂಚಾರ ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ನಗರದಲ್ಲಿ 10 ದಿನಗಳಲ್ಲಿ ಬಿಎಂಟಿಸಿ ಬಸ್‌ಗೆ ಬಲಿಯಾದ ಮೂರನೇ ಸಾವು ಇದಾಗಿದೆ.
ಯಲಹಂಕ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಅ.5ರಂದು ಸಂಜೆ ಅಟ್ಟೂರಿನ ಡೇರಿ ಬಳಿ ಓವರ್‌ಟೇಕ್ ಮಾಡುವ ಭರದಲ್ಲಿ ಬಿಎಂಟಿಸಿ ಬಸ್ ಬೈಕ್‌ಗೆ ಡಿಕ್ಕಿಯಾಗಿ ಭರತ್‌ರೆಡ್ಡಿ (23) ಮೃತಪಟ್ಟಿದ್ದ. ಅ.9ರಂದು ಹುಳಿಮಾವು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಗಾರೇಪಾಳ್ಯ ಜಂಕ್ಷನ್‌ನಲ್ಲಿ ಬಿಎಂಟಿಸಿ ಹರಿದು ಮೂರು ವರ್ಷದ ಮಗು ಸಾವನ್ನಪ್ಪಿತ್ತು.