ವಿಜಯಪುರ: ಪಟ್ಟಣದ ನಾಗರಿಕರ ಬಹುದಿನಗಳ ಕನಸು ಬಿಎಂಟಿಸಿ ಬಸ್ ಗಳ ಓಡಾಟ ಸೇವೆ ಕೊನೆಗೂ ನನಸಾಗಿದೆ. ಪಟ್ಟಣದಂದ ಬೆಂಗಳೂರು ಕೆಂಪೇಗೌಡ ಬಸ್‌ನಿಲ್ದಾಣ, ಕೆ.ಆರ್. ಮಾರ್ಕೆಟ್, ಶಿವಾಜಿ ನಗರಕ್ಕೆ ಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ಅಧಿಕೃತವಾಗಿ ಸಂಸದ ಬಿ.ಎನ್.ಬಚ್ಚೇಗೌಡ, ಶಾಸಕ ನಾರಾಯಣಸ್ವಾಮಿ ಚಾಲನೆ ನೀಡಿ ಮಾತನಾಡಿದರು.
ದೇವನಹಳ್ಳಿಯಲ್ಲಿ ಬಿಎಂಟಿಸಿ ಬಸ್ ಡಿಪೋ ನಿರ್ಮಾಣ, ವಿಜಯಪುರ ಮತ್ತು ದೇವನಹಳ್ಳಿ ಬಸ್‌ನಿಲ್ದಾಣಗಳನ್ನು ಹೈಟೆಕ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಆ ಬಗ್ಗೆ ಈಗಾಗಲೇ ಯೋಜನೆ ರೂಪಿಸಲಾಗಿದೆ. ಪುರಸಭೆ ಮತ್ತು ಬಿಎಂಟಿಸಿಗೆ ಆದಾಯ ಬರುವಂತೆ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ನಾರಾಯಣಸ್ವಾಮಿ ತಿಳಿಸಿದರು.
ಸಾರ್ವಜನಿಕ ಸಾರಿಗೆಯನ್ನು ಜನರು ಹೆಚ್ಚೆಚ್ಚು ಬಳಸಬೇಕು.ಕಡಿಮೆ ಖರ್ಚಿನಲ್ಲಿ ಸಿಗುವ ಮಾಸಿಕ ಮತ್ತು ವಾರ್ಷಿಕ ಪಾಸ್‌ಗಳನ್ನು ಬಳಸಿಕೊಂಡು ಜನರು ಸಾರಿಗೆ ಸೇವೆ ಪಡೆಯ ಬಹುದಾಗಿದೆ. ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನಿಗಮಗಳ ಮಧ್ಯೆ ಯಾವುದೇ ಗಲಾಟೆಗಳಿಗೆ ಆಸ್ಪದ ಕೊಡದಂತೆ ಜನರ ಸೇವೆಗೆ ಮುಂದಾಗಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಂಸದ ಬಿ.ಎನ್.ಬಚ್ಚೇಗೌಡ ಮಾತನಾಡಿ, ಈ ಹಿಂದೆ ಬಿಎಂಟಿಸಿ ನಿಗದಿ ಮಾಡಿದ್ದ ವ್ಯಾಪ್ತಿಯನ್ನು 50 ಕಿ.ಮೀವರೆಗೆ ವಿಸ್ತರಿಸಿದ್ದು ಅನೇಕ ಗ್ರಾಮಗಳು, ಪ್ರದೇಶಗಳಿಗೆ ಬಿಎಂಟಿಸಿ ಬಸ್‌ಸೇವೆ ಲಭ್ಯವಾಗಲಿದೆ. ಈಗಾಗಲೇ ದೇವನಹಳ್ಳಿ ಡಿಪೋ ವ್ಯಾಪ್ತಿಗೆ 50 ಬಸ್‌ಗಳನ್ನು ಒದಗಿಸಲಾಗಿದ್ದು , ಈ ಭಾಗದ ಜನರ ಸೇವೆಗೆ ಅನುಕೂಲವಾಗಲಿದೆ ಎಂದರು.
ಟೌನ್ ಜೆಡಿಎಸ್ ಅದ್ಯಕ್ಷ ಎಸ್ .ಭಾಸ್ಕರ್, ಮಾಜಿ ಅಧ್ಯಕ್ಷ ಎನ್.ನಾರಾ ಯಣಸ್ವಾಮಿ, ಕಾರ್ಯದರ್ಶಿ ಬುಜೇಂ ದ್ರಪ್ಪ, ಜಿಲ್ಲಾ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಎನ್.ರಾಜಗೋಪಾಲ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಎನ್. ಕನಕರಾಜು, ತಾಲೂಕು ಬಿಜೆಪಿ ಕಾರ್ಯದರ್ಶಿ ರವಿಕುಮಾರ್, ರಾಮಕೃಷ್ಣ ಹೆಗಡೆ, ಗಿರೀಶ್, ಪ್ರದೀಪ್ ಕುಮಾರ್, ನಿವೃತ್ತ ಪೌರಾಯುಕ್ತ ವಿ.ಶಿವಕುಮಾರ್, ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಎಸ್.ಬಸವರಾಜು, ಮಹಂತಿನಮಠ ಕಾರ್ಯ ದರ್ಶಿ ವಿ.ವಿಶ್ವನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.