ಬೆಂಗಳೂರು: ಮಲ್ಲೇಶ್ವರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ದುರ್ಮರಣ ಹೊಂದಿದ್ದಾಳೆ.
ಮಲ್ಲೇಶ್ವರದ ನಿವಾಸಿ ಕುಸುಮಿತಾ (21) ಮೃತಪಟ್ಟ ವಿದ್ಯಾರ್ಥಿನಿ.
ಕುಸುಮಿತಾ ರಾಜರಾಜೇಶ್ವರಿನಗರದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 2ನೇ ವರ್ಷದ ಬಿಇ ವ್ಯಾಸಂಗ ಮಾಡುತ್ತಿದ್ದಳು. ಎಂದಿನಂತೆ ಶುಕ್ರವಾರ ಬೆಳಗ್ಗೆ ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ಹೋಗುತ್ತಿದ್ದಳು. ಮಾರ್ಗ ಮಧ್ಯೆ ಮಹಾಕವಿ ಕುವೆಂಪು ರಸ್ತೆಯ ದೇವಯ್ಯ ಪಾರ್ಕ್ ಬಳಿ ಹಿಂದಿನಿಂದ ವೇಗವಾಗಿ ಬಂದ ಬಿಎಂಟಿಸಿ ಬಸ್‌ನ ಎಡಭಾಗವು ಕುಸುಮಿತಾ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಪರಿಣಾಮ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದ ಕುಸುಮಿತಾಳನ್ನು ಬಸ್ 15 ಅಡಿ ದೂರಕ್ಕೆ ಎಳೆದೊಯ್ದಿತ್ತು. ಗಂಭೀರವಾಗಿ ಗಾಯಗೊಂಡು ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಕುಸುಮಿತಾಳನ್ನು ಸಾರ್ವಜನಿಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ವೈದ್ಯರು ಆಕೆಯನ್ನು ಪರೀಕ್ಷಿಸಿದಾಗ ಮಾರ್ಗ ಮಧ್ಯೆ ಮೃತಪಟ್ಟಿರುವುದು ಕಂಡು ಬಂದಿತ್ತು.
ಮಲ್ಲೇಶ್ವರ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಬಿಎಂಟಿಸಿ ಚಾಲಕನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಬಸ್ ಅನ್ನು ಜಪ್ತಿ ಮಾಡಿದ್ದಾರೆ. ಕುಸುಮಿತಾ ಪ್ರತಿದಿನ ಮೆಟ್ರೋದಲ್ಲಿ ಕಾಲೇಜಿಗೆ ತೆರಳುತ್ತಿದ್ದಳು. ಶುಕ್ರವಾರ ತಡವಾದ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ಹೋಗಿದ್ದಾಳೆ ಎಂದು ಕುಸುಮಿತಾ ತಂದೆ ಹರಿಪ್ರಕಾಶ್ ಕಣ್ಣೀರು ಹಾಕಿದ್ದಾರೆ.
ಬಿಎಂಟಿಸಿ ಸ್ಪಷ್ಟನೆ: ಶಿವಾಜಿನಗರದಿಂದ ಕಮಲಾನಗರಕ್ಕೆ ಬಿಎಂಟಿಸಿ ಬಸ್ ತೆರಳುತ್ತಿದ್ದಾಗ ಗಾಯತ್ರಿ ನಗರದ ಬಳಿ ದ್ವಿಚಕ್ರ ವಾಹನ ಸವಾರರು ಬಸ್ ಅನ್ನು ಎಡಭಾಗದಿಂದ ಹಿಂದಿಕ್ಕಲು ಮುಂದಾಗಿದ್ದರು. ಆ ವೇಳೆ ಎದುರಿನಲ್ಲಿ ಆಟೋ ಇದ್ದ ಕಾರಣ ದ್ವಿಚಕ್ರ ವಾಹನವು ಸ್ಕಿಡ್ ಆಗಿ ಬಸ್‌ನ ಎಡಭಾಗದ ಹಿಂದಿನ ಚಕ್ರಕ್ಕೆ ಬಿದ್ದ ಪರಿಣಾಮ ಈ ದುರ್ಘಟನೆ ನಡೆದಿದೆ ಎಂಬುದು ಬಿಎಂಟಿಸಿಯಲ್ಲಿ ಅಳವಡಿಸಿದ್ದ ಮುಂಭಾಗ ಹಾಗೂ ಹಿಂಭಾಗದ ಸಿಸಿ ಕ್ಯಾಮರಾ ದೃಶ್ಯ ಪರಿಶೀಲನೆ ವೇಳೆ ತಿಳಿದು ಬಂದಿದೆ ಎಂದು ಬಿಎಂಟಿಸಿ ಸ್ಪಷ್ಟನೆ ನೀಡಿದೆ.