ಬೆಂಗಳೂರು: ಬಿಎಂಟಿಸಿ ವೋಲ್ವೊ ಬಸ್ ಚಾಲಕನ ನಿರ್ಲಕ್ಷ್ಯ ಚಾಲನೆಯಿಂದ ಸರಣಿ ಅಪಘಾತ ಸಂಭವಿಸಿ ನಾಲ್ಕು ಕಾರು ಗಳು ಹಾಗೂ ಎರಡು ಬಿಎಂಟಿಸಿ ಬಸ್‌ಗಳು ಜಖಂಗೊಂಡು ಇಬ್ಬರು ಗಾಯಗೊಂಡ ಘಟನೆ ಜಯನಗರದ ಈಸ್ಟ್ ಎಂಡ್ ವೃತ್ತದ ಸಿಗ್ನಲ್‌ನಲ್ಲಿ ಶುಕ್ರವಾರ ನಡೆದಿದೆ.
ಈಸ್ಟ್ ಎಂಡ್ ವೃತ್ತದ ರೆಡ್ಡಿ ನರ್ಸಿಂಗ್ ಹೋಮ್ ಎದುರು ವಾಹನಗಳ ದಟ್ಟಣೆ ನಿಯಂತ್ರಣಕ್ಕೆ ಸಿಗ್ನಲ್ ಅಳವಡಿಸಿದ್ದು, ಕೆಂಪು ದೀಪ ಇದ್ದಿದ್ದರಿಂದ ನಾಲ್ಕು ಕಾರುಗಳು ಹಾಗೂ ಎರಡು ಬಿಎಂಟಿಸಿ ಬಸ್‌ಗಳು ನಿಂತಿದ್ದವು. ಈ ವೇಳೆ ಹಿಂದೆ ಇದ್ದ ವೋಲ್ವೊ ಬಸ್ ಮುಂದಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆ ಕಾರಿನ ಮುಂಭಾಗವಿದ್ದ ಕಾರುಗಳು ಹಾಗೂ ಬಸ್‌ಗಳಿಗೆ ಸರಣಿ ಅಪಘಾತ ಸಂಭವಿಸಿತು.
ವೋಲ್ವೊ ಬಸ್ಸಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಆತಂಕಕ್ಕೆ ಒಳಗಾಗಿದ್ದ ಚಾಲಕ, ಬಸ್ ನಿಲ್ಲಿಸಲು ವಿಫಲನಾಗಿ ಎದುರಿಗಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸರಣಿ ಅಪಘಾತ ನಡೆದಿದೆ. ಚಾಲಕ ಧರ್ಮೇಂದ್ರ ಅವರ ನಿರ್ಲಕ್ಷ್ಯವೇ ಕಾರಣವೆಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಆತ ನನ್ನು ಬಂಧಿಸಿ ವೊಲ್ವೋ ಬಸ್ ಜಪ್ತಿ ಮಾಡಲಾಗಿದೆ ಎಂದು ಕುಮಾರಸ್ವಾಮಿ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಸರಣಿ ಅಪಘಾತದಿಂದ ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ. ಬಸ್ ಹಾಗೂ ಕಾರುಗಳು ಭಾಗಶಃ ಜಖಂಗೊಂಡಿವೆ. ವಾಹನಗಳು ನಿಂತಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಅಪಘಾತ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಸ್ಥಳದಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದರಿಂದ ಕೂಡಲೇ ಅಪಘಾತಕ್ಕೊಳಗಾದ ಬಸ್ ಹಾಗೂ ಕಾರುಗಳ ತೆರವು ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು ಎಂದು ಪೊಲೀಸರು ಹೇಳಿದರು. ಕೆಲ ದಿನಗಳ ಹಿಂದೆ ಸುಮನಹಳ್ಳಿ ಜಂಕ್ಷನ್ ಬಳಿ ಬಿಎಂಟಿಸಿ ಬಸ್ ಬ್ರೇಕ್ ವಿಫಲವಾದ ಪರಿಣಾಮ ಸರಣಿ ಅಪಘಾತ ಸಂಭವಿಸಿ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದರು.