Advertisement

ಬಿಸಿಲುನಾಡಿಗೆ ಬಿಎಂಟಿಸಿ ಬಿಳಿ ಆನೆ?

01:04 PM Jan 08, 2022 | Team Udayavani |

ಬೆಂಗಳೂರು: ಒಂದೆಡೆ ಪದೇ ಪದೆ ಪುನರಾವರ್ತನೆಯಾಗುತ್ತಿರುವ ಕೊರೊನಾ ಭೀತಿಯಿಂದ ಪ್ರಯಾಣಿಕರ ಕೊರತೆ ಮತ್ತೂಂದೆಡೆ ದುಬಾರಿ ನಿರ್ವಹಣೆಯಿಂದ ಬಿಳಿ ಆನೆಯಾಗಿರುವ ವೋಲ್ವೋ ಬಸ್‌ಗಳನ್ನು ಬಿಸಿಲು ನಾಡಿಗೆ “ಶಿಫ್ಟ್’ ಮಾಡಿದರೆ ಹೇಗಿರುತ್ತದೆ?

Advertisement

ಇಂತಹದ್ದೊಂದು ಚಿಂತನೆ ಈಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮುಂದಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ಕಲ್ಯಾಣ ಕರ್ನಾಟಕದ ಜನ ಈ ಹವಾನಿಯಂತ್ರಿತ ಬಸ್‌ಗಳಲ್ಲಿ ಹಾಯಾಗಿ ಪ್ರಯಾಣಿಸುವ ಭಾಗ್ಯ ಸಿಗಲಿದೆ. ಹವಾನಿಯಂತ್ರಿತ ಬಸ್‌ಗಳಲ್ಲಿ ಕೊರೊನಾ ಬಹುಬೇಗ ಹರಡುತ್ತದೆ ಎಂಬ ಭೀತಿಯಿಂದ ಜನ ಈ ವೋಲ್ವೋ ಬಸ್‌ಗಳತ್ತ ಮುಖಮಾಡಲಿಲ್ಲ. ಜತೆಗೆ ಸುದೀರ್ಘಾವಧಿ ವರ್ಕ್‌ ಫ್ರಂ ಹೋಂನಿಂದ ಐಟಿ ಉದ್ಯೋಗಿಗಳೂ ಕಚೇರಿ ಕಡೆಗೆ ತಲೆ ಹಾಕಲಿಲ್ಲ. ಈ ಮಧ್ಯೆ ಆಗಾಗ್ಗೆ ಲಾಕ್‌ಡೌನ್‌ ಬೇರೆ ಇತ್ತು (ಈಗಲೂ ವಾರಾಂತ್ಯದ ಕರ್ಫ್ಯೂ ಇದೆ). ಇದೆಲ್ಲದರ ಪರಿಣಾಮ ವೋಲ್ವೋ ಬಸ್‌ಗಳು ಕಳೆದ ಒಂದೂವರೆ ವರ್ಷದಿಂದ ರಸ್ತೆಗಿಳಿಯಲಿಲ್ಲ. ಈಚೆಗಷ್ಟೇ ರಸ್ತೆಗಿಳಿದರೂ ಭಾರೀ ಪ್ರಯಾಣ ದರ ಇಳಿಕೆಯೊಂದಿಗೆ ಕಾರ್ಯಾರಂಭ ಮಾಡಿದವು. ಈ ಮೂಲಕ ತುಸು ಪ್ರಯಾಣಿಕರನ್ನೂ ಆಕರ್ಷಿಸಿತು. ಆದರೆ, ನಷ್ಟದ ಪಯಣ ಮಾತ್ರ ಮುಂದುವರಿದಿದೆ.

ಇದಕ್ಕೆ ಪರ್ಯಾಯವಾಗಿ ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ಗರಿಷ್ಠ ತಾಪಮಾನ ಇರುವ ಕಲಬುರಗಿ, ಬೀದರ್‌, ವಿಜಯಪುರ, ಬಳ್ಳಾರಿ ಸುತ್ತಲಿನ ಪ್ರದೇಶಗಳಲ್ಲಿ ಹವಾನಿಯಂತ್ರಿತ ಬಸ್‌ಗಳ ಅವಶ್ಯಕತೆ ಹೆಚ್ಚಿದೆ. ಪ್ರಯಾಣಿಕರ ಬೇಡಿಕೆಯೂ ಅಲ್ಲಿದ್ದು, ಕೆಲವು ಖಾಸಗಿ ಬಸ್‌ಗಳು ಕೂಡ ಆ ಭಾಗಗಳಲ್ಲಿ ಹವಾನಿಯಂತ್ರಿತ ವ್ಯವಸ್ಥೆಯನ್ನು ಒಳಗೊಂಡಿವೆ. ಹೀಗಿರುವಾಗ, ಇಲ್ಲಿ ವರ್ಷಗಟ್ಟಲೆ ಮೂಲೆ ಸೇರಿರುವ ವೋಲ್ವೋ ಬಸ್‌ಗಳನ್ನು ಆ ಬಿಸಿಲು ನಾಡಿಗೆ ಯಾಕೆ ಸ್ಥಳಾಂತರಿಸಬಾರದು ಎಂಬ ಚಿಂತನೆ ಮುನ್ನೆಲೆಗೆ ಬಂದಿದೆ.

ಎಂಡಿಗಳ ಮುಂದೆ ಪ್ರಸ್ತಾವ: “ಹುಬ್ಬಳ್ಳಿ-ಧಾರವಾಡ ನಡುವೆ ಬಿಆರ್‌ಟಿಎಸ್‌ ವ್ಯವಸ್ಥೆ ಅಡಿ ವೋಲ್ವೋ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿವೆ. ಇಲ್ಲಿನ ವೋಲ್ವೋಗಳನ್ನೂ ಅಲ್ಲಿಗೆ ಬಳಸಬಹುದು. ಅದೇ ರೀತಿ, ಕಲ್ಯಾಣ ಕರ್ನಾಟಕದಲ್ಲಿ ಅಂತಾರಾಜ್ಯಗಳಲ್ಲಿ ಮತ್ತು ನಗರ ವ್ಯಾಪ್ತಿಯಲ್ಲಿ ಕೂಡ ಅನುಕೂಲವಾಗಲಿದೆ. ಹವಾನಿಯಂತ್ರಣ ಬಸ್‌ ಸಾಮಾನ್ಯ ಬಸ್‌ಗಳಾಗಿ ಪರಿವರ್ತನೆ ಮಾಡುವುದಕ್ಕಿಂತ ಇದು ಉತ್ತಮ ಐಡಿಯಾ ಎಂಬ ಯೋಚನೆ ಇದೆ. ಆದರೆ, ಇದು ಇನ್ನೂ ಆರಂಭಿಕ ಹಂತದಲ್ಲಿದೆ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

“ನಗರದಲ್ಲಿ ಪ್ರಯಾಣ ದರ ಇಳಿಕೆ ಮಾಡಿದ ನಂತರದಿಂದ ವೋಲ್ವೋ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ.ವಾಯುವಜ್ರ ಪಿಕ್‌ಅಪ್‌ ಆದರೆ, ನಮಗೆ ಸಮಸ್ಯೆ ಆಗುವುದಿಲ್ಲ.ಅದೇನೇ ಇರಲಿ, ವಾಯವ್ಯ ಕರ್ನಾಟಕ ಸಾರಿಗೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ನಾನುಸ್ವತಃ ವೋಲ್ವೋ ಬಸ್‌ಗಳು ಬೇಕಿದ್ದರೆ ನೀಡುವುದಾಗಿ ತಿಳಿಸಿದ್ದೇನೆ.ಅಗತ್ಯಬಿದ್ದರೆ ಸ್ಥಳಾಂತರಿಸಲಾಗುವುದು’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್‌ ಸ್ಪಷ್ಟಪಡಿಸಿದರು.

Advertisement

 ಅಲ್ಲಿನ ಪ್ರಯಾಣಿಕರಿಗೆ ಯಾವುದೇ ಹೊರೆ ಆಗಲ್ಲ  :

ಈ ಹೈಟೆಕ್‌ ಬಸ್‌ಗಳಿಂದ ಬಿಸಿಲು ನಾಡಿನ ಪ್ರಯಾಣಿಕರಿಗೆ ಯಾವುದೇ ರೀತಿ ಪ್ರಯಾಣ ದರದ ರೂಪದಲ್ಲಿ ಹೊರೆ ಆಗದು ಎಂದು ಅಧಿಕಾರಿಗಳು ತಿಳಿಸುತ್ತಾರೆ. ಬಿಎಂಟಿಸಿ ಕೋಟ್ಯಂತರ ರೂ. ಖರ್ಚು ಮಾಡಿ ಈ ವೋಲ್ವೋ ಬಸ್‌ ಗಳನ್ನು ಖರೀದಿಸಿತ್ತು. ಆ ಮೂಲ ಬಂಡವಾಳ, ಸವಕಳಿ ಮತ್ತಿತರ ವೆಚ್ಚವೂ ಸಿಪಿಕೆಎಂ (ಪ್ರತಿ ಕಿ.ಮೀ.ಕಾರ್ಯಾಚರಣೆಗೆ ಆಗುವ ವೆಚ್ಚ)ನಲ್ಲಿ ಸೇರಿರುತ್ತಿತ್ತು. ಆದರೆ, ಈ ಬಸ್‌ಗಳನ್ನು ಪಡೆಯುವ ನಿಗಮಗಳಿಗೆ ಆಹೊರೆ ಇರುವುದಿಲ್ಲ. ಹಾಗಾಗಿ, ಕನಿಷ್ಠ ಪ್ರಯಾಣ ದರದಲ್ಲಿಸೇವೆ ನೀಡಬಹುದು ಎಂದು ಅಧಿಕಾರಿಗಳುಸ್ಪಷ್ಟಪಡಿಸುತ್ತಾರೆ. ಅಷ್ಟಕ್ಕೂ ಈಗಲೂ ಎಸಿ ಸ್ಲೀಪರ್‌ ಮತ್ತು ನಾನ್‌ ಎಸಿ ಸ್ಲೀಪರ್‌ ಬಸ್‌ಗಳು ಕಲಬುರಗಿಯಿಂದಬೆಂಗಳೂರಿಗೆ ಹೊರಟರೆ, ಇದರಲ್ಲಿ ಮೊದಲು ಸೀಟುಬುಕಿಂಗ್‌ ಆಗುವುದು ಎಸಿ ಸ್ಲೀಪರ್‌ ಬಸ್‌ಗಳಲ್ಲಿ. ಅದೇರೀತಿ, ಸ್ಥಳೀಯ ಖಾಸಗಿ ಬಸ್‌ಗಳೂ ಎಸಿ ವ್ಯವಸ್ಥೆ ಒಳಗೊಂಡಿದ್ದು, ಜನ ಅದರಲ್ಲೇ ಹೆಚ್ಚು ಓಡಾಡಲು ಇಷ್ಟಪಡುತ್ತಾರೆ ಎಂದು ಅವರು ಸಮಜಾಯಿಷಿ ನೀಡುತ್ತಾರೆ.

ಪ್ರತಿ ಕಿ.ಮೀ.ಗೆ 50 ರೂ. ಆದಾಯ :  ಬಿಎಂಟಿಸಿ ವ್ಯಾಪ್ತಿಯಲ್ಲಿ 600ಕ್ಕೂ ಅಧಿಕವೋಲ್ವೋ ಬಸ್‌ಗಳು ಇವೆ. ಪ್ರತಿ ಬಸ್‌ನಸಿಪಿಕೆಎಂ ಅಂದಾಜು 80 ರೂ. ಇದ್ದರೆ, ಇಪಿಕೆಎಂ (ಪ್ರತಿ ಕಿ.ಮೀ.ಗೆ ಬರುವ ಆದಾಯ) 50 ರೂ. ಇದೆ.

-ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next