Advertisement

ನೂತನ ಮೆಟ್ರೋಗೆ ಬಿಎಂಆರ್‌ಸಿ ಟೆಂಡರ್‌

11:53 AM Feb 28, 2018 | Team Udayavani |

ಬೆಂಗಳೂರು: ಹೊರವರ್ತುಲಕ್ಕೆ ಹೊಂದಿಕೊಂಡ ಕೆ.ಆರ್‌. ಪುರ-ಸಿಲ್ಕ್ಬೋರ್ಡ್‌ ಜಂಕ್ಷನ್‌ ನಡುವಿನ ಮೆಟ್ರೋ ಯೋಜನೆಯನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ), ಈ ಮಾರ್ಗದ ನಿರ್ಮಾಣಕ್ಕೆ ಮಂಗಳವಾರ ಟೆಂಡರ್‌ ಕರೆದಿದೆ. 

Advertisement

17 ಕಿ.ಮೀ. ಉದ್ದದ ಈ ಮಾರ್ಗವನ್ನು 4,202 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಟೆಂಡರ್‌ಗೆ ಅರ್ಜಿ ಸಲ್ಲಿಸಲು ಏ. 20ರವರೆಗೆ ಕಾಲಾವಕಾಶ ನೀಡಲಾಗಿದೆ. ಟೆಂಡರ್‌ಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆ ಪೂರ್ಣಗೊಂಡು ಜುಲೈ ಹೊತ್ತಿಗೆ ಕಾರ್ಯಾರಂಭಗೊಳ್ಳುವ ಸಾಧ್ಯತೆ ಇದೆ. ಯೋಜನೆಯನ್ನು ಮೂರು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಇದ್ದು, ಸಿವಿಲ್‌ ಕಾಮಗಾರಿ ಟೆಂಡರ್‌ ಪಡೆದ ದಿನದಿಂದ 27 ತಿಂಗಳಲ್ಲಿ ಮುಗಿಸುವ ಷರತ್ತು ವಿಧಿಸಲು ಉದ್ದೇಶಿಸಲಾಗಿದೆ. 

ಚುನಾವಣೆ ಹೊಸ್ತಿಲಲ್ಲೇ ಟೆಂಡರ್‌: ಇತ್ತೀಚೆಗಷ್ಟೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಾಗವಾರಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಇದರ ಬೆನ್ನಲ್ಲೇ ಮತ್ತೂಂದು ಪ್ರಮುಖ ಮಾರ್ಗಕ್ಕೆ ಟೆಂಡರ್‌ ಕರೆದಿದೆ. ಚುನಾವಣೆ ಹೊಸ್ತಿಲಲ್ಲಿ ಇರುವಾಗಲೇ ಸರ್ಕಾರ ಈ ಯೋಜನೆಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಂಡಿರುವುದು ಮಹತ್ವ ಪಡೆದುಕೊಂಡಿದೆ. 

ಹಣ ಹೊಂದಾಣಿಕೆ ಹೇಗೆ?: ಯೋಜನೆಗೆ ವಿನೂತನ ಮಾದರಿಯಲ್ಲಿ ಸಂಪನ್ಮೂಲ ಕ್ರೋಢೀಕರಿಸಲು ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಇಂಟೆಲ್‌, ಎಂಬಸ್ಸಿ ಕಂಪೆನಿಗಳು ಮುಂದೆಬಂದಿವೆ. ಎರಡೂ ಕಂಪೆನಿಗಳಿಂದ ಕನಿಷ್ಠ 800-1000 ಕೋಟಿ ರೂ. ಹೂಡಿಕೆ ನಿರೀಕ್ಷಿಸಲಾಗಿದೆ. ಇದಲ್ಲದೆ, ಈ ಮಾರ್ಗದಲ್ಲಿ ಬರುವ ಇನ್ನೂ ಹಲವು ಕಂಪೆನಿಗಳು ಆಸಕ್ತಿ ತೋರಿಸಿವೆ ಎಂದು ಬಿಎಂಆರ್‌ಸಿ ಉನ್ನತ ಮೂಲಗಳು ತಿಳಿಸಿವೆ. 

ಇಷ್ಟೇ ಅಲ್ಲ, ಉದ್ದೇಶಿತ ಯೋಜನೆಗೆ ಬೇಕಾಗುವ ಅಗತ್ಯ ಸಂಪನ್ಮೂಲವನ್ನು ಕೆ.ಆರ್‌.ಪುರ-ಸಿಲ್ಕ್ಬೋರ್ಡ್‌ ಜಂಕ್ಷನ್‌ ಮಾರ್ಗದುದ್ದಕ್ಕೂ ತಲೆಯೆತ್ತುವ ಹೊಸ ಬಡಾವಣೆಗಳ ಮೇಲೆ ಮೆಟ್ರೋ ಸೆಸ್‌ ಹೇರಿಕೆ, ಪ್ರೀಮಿಯಂ ಫ್ಲೋರ್‌ ಸ್ಪೇಸ್‌ ಇಂಡೆಕ್ಸ್‌ (ಪಿಎಂಎಫ್ಎಸ್‌ಐ), ಐಟಿ ಪಾರ್ಕ್‌ಗಳಿಗೆ ನೇರ ಮೆಟ್ರೋ ಸಂಪರ್ಕ, ಜಾಹೀರಾತು ಮತ್ತು ಲೀಸ್‌ಗೆ ಅನುವು ಮಾಡಿಕೊಡುವುದು ಈ ಎಲ್ಲ ಮೂಲಗಳಿಂದಲೂ ಕ್ರೋಢೀಕರಿಸಲು ಬಿಎಂಆರ್‌ಸಿ ಚಿಂತನೆ ನಡೆಸಿದೆ. 

Advertisement

ಕೇಂದ್ರದಿಂದಲೂ ಹಣ?: ಈ ಮೊದಲು ಕೆ.ಆರ್‌.ಪುರ-ಸಿಲ್ಕ್ ಬೋರ್ಡ್‌ ಜಂಕ್ಷನ್‌ ನಡುವಿನ ಮೆಟ್ರೋ ಮಾರ್ಗವನ್ನು ರಾಜ್ಯ ಸರ್ಕಾರದಿಂದಲೇ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ, ಇದೀಗ ಕೇಂದ್ರದಿಂದಲೂ ಶೇ.10 ಅನುದಾನ ಕೇಳಲು ಬಿಎಂಆರ್‌ಸಿ ಚಿಂತನೆ ನಡೆಸಿದೆ. 

“ನಮ್ಮ ಮೆಟ್ರೋ’ ಮೊದಲ ಹಂತದ ಯೋಜನೆಗೆ ಕೇಂದ್ರದಿಂದ ಶೇ.15 ಈಕ್ವಿಟಿ ಹಾಗೂ ಶೇ. 10 ಸಬಾರ್ಡಿನೇಟ್‌ ಸಾಲ ಸೇರಿ ಶೇ. 25 ಮತ್ತು ರಾಜ್ಯದ ಈಕ್ವಿಟಿ ಶೇ. 15 ಹಾಗೂ ಸಬಾರ್ಡಿನೇಟ್‌ ಸಾಲ ಶೇ. 15 ಸೇರಿ ಶೇ.30 ಇತ್ತು. ಉಳಿದ ಶೇ.45 ಸಂಪನ್ಮೂಲವನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ದೀರ್ಘಾವಧಿ ಸಾಲವಾಗಿ ಪಡೆಯಲಾಗಿದೆ.

ಆದರೆ, ಕೇಂದ್ರವು ಈಗ ತನ್ನ ಈಕ್ವಿಟಿಯನ್ನು ಶೇ.10ಕ್ಕೆ ತಗ್ಗಿಸಿದೆ. ಆದ್ದರಿಂದ ಹೇಗೋ ಅನುದಾನ ಕಡಿಮೆ ಮಾಡಿದ್ದರಿಂದ ಕೆ.ಆರ್‌. ಪುರ-ಸಿಲ್ಕ್ ಬೋರ್ಡ್‌ ಜಂಕ್ಷನ್‌ ನಡುವಿನ ಮಾರ್ಗಕ್ಕೂ ಅನುದಾನ ಕೇಳಲು ಲೆಕ್ಕಾಚಾರ ನಡೆದಿದೆ. ಹಾಗೊಂದು ವೇಳೆ ಪ್ರಸ್ತಾವನೆ ಸಲ್ಲಿಸಿದರೆ, ಸರಿಸುಮಾರು 450-500 ಕೋಟಿ ರೂ. ಸಿಗಲಿದೆ. 

* 3.1 ಲಕ್ಷ ಪ್ರಯಾಣಿಕರು ಯೋಜನೆ ಪೂರ್ಣಗೊಂಡ ಬಳಿಕ ಮೊದಲ ವರ್ಷದಲ್ಲೇ ನಿತ್ಯ ಈ ಮಾರ್ಗದಲ್ಲಿ ಸಂಚಾರ ನಿರೀಕ್ಷೆ
* 15,179 ಚದರ ಮೀಟರ್‌ ಭೂಸ್ವಾಧೀನ ಮಾಡಿಕೊಳ್ಳಬೇಕಾಗುತ್ತದೆ. ಅದರಲ್ಲಿ 5,911 ಚದರ ಮೀಟರ್‌ ಸರ್ಕಾರಿ ಭೂಮಿ ಸೇರಿದೆ. 
* ಹೊರ ವರ್ತುಲ ರಸ್ತೆಗೆ ಹೊಂದಿಕೊಂಡ ಈ ಕಾರಿಡಾರ್‌ನಲ್ಲಿ ನಗರದ ಶೇ.32 ವಾಣಿಜ್ಯ ಸಂಸ್ಥೆಗಳ ಕಚೇರಿಗಳಿದ್ದು, ಸುಮಾರು 8 ಲಕ್ಷ ಜನ ಉದ್ಯೋಗಿಗಳು ಅಲ್ಲಿ ಕೆಲಸ ಮಾಡುತ್ತಾರೆ. ಗಂಟೆಗೆ 18,750 ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. 
* ಹಲವು ರಸ್ತೆ ಸುರಂಗ ಮಾರ್ಗಗಳು ಬರುತ್ತವೆ. ಇಂತಹ ದುರ್ಗಮ ಮಾರ್ಗದಲ್ಲಿ ಎತ್ತರಿಸಿದ ಸೇತುವೆ ನಿರ್ಮಿಸಬೇಕಿದೆ. ಬೃಹದಾಕಾರದ ಉಪಕರಣಗಳನ್ನು ತೆಗೆದುಕೊಂಡು ಹೋಗುವುದು ಸವಾಲು.

13 ನಿಲ್ದಾಣಗಳು ಯಾವುವು?: ಸಿಲ್ಕ್ ಬೋರ್ಡ್‌, ಎಚ್‌ಎಸ್‌ಆರ್‌ ಲೇಔಟ್‌, ಅಗರ ಕೆರೆ, ಇಬ್ಬಲೂರು, ಬೆಳ್ಳಂದೂರು, ಕಾಡುಬೀಸನಹಳ್ಳಿ, ಕೋಡಿಬಸವನಹಳ್ಳಿ, ಮಾರತ್‌ಹಳ್ಳಿ, ಇಸ್ರೊ, ದೊಡ್ಡನೆಕ್ಕುಂದಿ, ಡಿಆರ್‌ಡಿಒ ಕ್ರೀಡಾ ಸಂಕೀರ್ಣ, ಮಹದೇವಪುರ, ಕೆ.ಆರ್‌.ಪುರ.

3ನೇ ಹಂತದಲ್ಲಿ ಹೆಬ್ಟಾಳಕ್ಕೆ?: ಕೆ.ಆರ್‌. ಪುರದಿಂದ ಹೆಬ್ಟಾಳಕ್ಕೆ ಮೆಟ್ರೋ ವಿಸ್ತರಿಸುವ ಯೋಜನೆ ಇದ್ದು, 3ನೇ ಹಂತದಲ್ಲಿ ಇದನ್ನು ಕೈಗೆತ್ತಿಕೊಳ್ಳುವ ಆಲೋಚನೆ ಇದೆ. 

ಯೋಜನೆ ಮುಖ್ಯಾಂಶಗಳು
-17 ಕಿ.ಮೀ. ಮಾರ್ಗದ ಉದ್ದ
-4,202 ಕೋಟಿ ರೂ. ಯೋಜನಾ ವೆಚ್ಚ
-3.52 ಲಕ್ಷ (2021ಕ್ಕೆ) ನಿತ್ಯ ಸಂಚರಿಸುವ ಪ್ರಯಾಣಿಕರು
-34 ಕಿ.ಮೀ. ಸರಾಸರಿ ವೇಗಮಿತಿ (ಗಂಟೆಗೆ)

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next